ಕೋಲಾರದಲ್ಲಿ ಕೊಲೆಯಾದ ಯುವಕ ಈಗ ಪೊಲೀಸರ ಅತಿಥಿ!
ಕೋಲಾರ, ಫೆ. 14 : ಕೊಲೆಯಾದ ಯುವಕನೊಬ್ಬನನ್ನು ಕೋಲಾರದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಮತ್ತು ತನ್ನ ಶತ್ರುಗಳನ್ನು ಜೈಲಿಗೆ ಕಳುಹಿಸಲು ಕೊಲೆಯಾದಂತೆ ನಾಟವಾಡಿದ್ದ ಯುವಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸಿನಿಮಾ ಶೈಲಿಯಲ್ಲಿ ಕಥೆ ಕಟ್ಟಿದ್ದ ಆರೋಪಿ ಸದ್ಯ ಜೈಲು ಸೇರಿದ್ದಾನೆ.
ಫೆ.10ರಂದು ಕೊಲೆಯಾಗಿ ಹೋಗಿದ್ದ ಅರುಣ್ ಕುಮಾರ್ ರೆಡ್ಡಿಯನ್ನು ರಾಬರ್ಟ ಸನ್ ಪೇಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸಾಲಗಾರರ ಕಾಟ ಮತ್ತು ತನ್ನ ವೈರಿಗಳಿಂದ ತಪ್ಪಿಸಿಕೊಳ್ಳಲು ಅರುಣ್ ತಾನೇ ಕೊಲೆಯಾದಂತೆ ಕಥೆ ಕಟ್ಟಿ, ಪೊಲೀಸರಿಗೆ ವಂಚಿಸಿದ್ದ. ಪೋಷಕರು ಅರುಣ್ ಕುಮಾರ್ ಶವ ಸುಟ್ಟು ತಿಥಿಯನ್ನು ಮಾಡಿದ್ದರು.

ಘಟನೆಯ ವಿವರ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅರುಣ್ ಕುಮಾರ್ ಕಥೆಯ ನಾಯಕ. ಫೆಬ್ರವರಿ 10ರಂದು ಮಡಿವಾಳ ಸಮೀಪದ ನೀಲಗಿರಿ ತೋಪಿನಲ್ಲಿ ಯುವಕನೊಬ್ಬನ ಅರೆಬರೆ ಬೆಂದ ಶವ ಪತ್ತೆಯಾಗಿತ್ತು. ಅದರ ಅಕ್ಕ-ಪಕ್ಕದಲ್ಲಿ ಅರುಣ್ ಕುಮಾರ್ ಅವರಿಗೆ ಸೇರಿದ ಚಪ್ಪಲಿ, ಬೈಕ್ ಪತ್ತೆಯಾಗಿತ್ತು.
ನನ್ನ ಮಗ ಅರುಣ್ ಕುಮಾರ್‌ನನ್ನು ವೈರಿಗಳು ಕೊಲೆ ಮಾಡಿದ್ದಾರೆ ಎಂದು ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆದ್ದರಿಂದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು. ಅರುಣ್ ಕುಮಾರ್ ಜೊತೆಗಿದ್ದ ನಾಗರಾಜ ರೆಡ್ಡಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಇದು ನಾಟಕ ಎಂದು ತಿಳಿದುಬಂದಿದೆ.
ಶವ ಎಲ್ಲಿಂದ ಬಂತು : ತಾನು ಸತ್ತಂತೆ ಮಾಡುತ್ತೇನೆ ವೈರಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ತಾನು ನೆಮ್ಮದಿಯಿಂದ ಇರಬಹುದು ಎಂದು ಸಿನಿಮಾ ಶೈಲಿಯಲ್ಲಿ ಆಲೋಚಿಸಿದ್ದ ಅರುಣ್ ಸ್ನೇಹಿತ ನಾಗರಾಜ್ ಸಹಾಯ ಪಡೆದು ಸ್ಮಶಾನದಿಂದ ಶವವನ್ನು ತಂದು ನೀಲಗಿರಿ ತೋಪಿನಲ್ಲಿ ಸುಟ್ಟಿದ್ದ. ಅದರ ಪಕ್ಕದಲ್ಲಿ ಚಪ್ಪಲಿ, ಬೈಕ್ ಬಿಟ್ಟು. ತನ್ನ ಕೊಲೆಯಾದಂತೆ ತಂದೆಯಿಂದ ದೂರು ಕೊಡಿಸಿದ್ದ.
ಸ್ಮಶಾನದಲ್ಲಿ ಸಿಕ್ಕಿ ಶವವೇ ತನ್ನ ಮಗನ ಶವವೆಂದು ಪೋಷಕರು ಅಂತ್ಯ ಸಂಸ್ಕಾರ ಮಾಡಿ, ಮೂರು ದಿನದ ತಿಥಿ ಕೂಡ ಮಾಡಿದ್ದರು. ಅರುಣ್ ಹೆಸರಿನಲ್ಲಿದ್ದ ಜೀವವಿಮೆಯನ್ನು ಪಡೆಯಲು ಸಿದ್ಧತೆ ನಡೆಸಿದ್ದರು. ಅರುಣ್ ಕುಮಾರ್ ಸ್ನೇಹಿತ ನಾಗರಾಜ್ ಈ ಕೊಲೆ ಪ್ರಕರಣದ ರಹಸ್ಯವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಅರುಣ್ ಮತ್ತು ನಾಗರಾಜ್ ಜೈಲು ಸೇರಿದ್ದು ಪ್ರಕರಣ ಅಂತ್ಯಗೊಂಡಿದೆ.












Click it and Unblock the Notifications