ಮಾಜಿ ಪ್ರೇಯಸಿ ಸತ್ತಳೆಂದು ನೇಣು ಹಾಕಿಕೊಂಡ,ಆಕೆ ಬದುಕಿದಳು
ಚಿಕ್ಕಬಳ್ಳಾಪುರ, ಮಾ.11 : ಮಾಜಿ ಪ್ರೇಯಸಿಯನ್ನು ಕೊಂದೆನೆಂದು ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆದರೆ, ಆತನ ಮಾಜಿ ಪ್ರೇಯಸಿ ಬದುಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ರಾಮಕೃಷ್ಣ (26) ಎಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರದ ಗುಡಿಬಂಡೆಯ ಮೇಡಿಮಾಕಲಹಳ್ಳಿ ನಿವಾಸಿಯಾದ ರಾಮಕೃಷ್ಣ ಮಾಜಿ ಪ್ರೇಯಸಿಗೆ ಒನಕೆಯಿಂದ ಹೊಡೆದು ಆಕೆಯನ್ನು ಕೊಲ್ಲಲು ಪ್ರಯತ್ನ ನಡೆಸಿದ್ದ.
ಘಟನೆಯ ವಿವರ ಇಲ್ಲಿದೆ : ರಾಮಕೃಷ್ಣ ತನ್ನ ಗ್ರಾಮದ ಯುವತಿಯನ್ನು 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ವಿಷಯ ತಿಳಿದ ಮನೆಯವರು ಇಬ್ಬರ ವಿವಾಹ ನಿಶ್ಚಯ ಮಾಡಿದ್ದರು. ಆದರೆ, ಮದುವೆ ನಿಂತು ಹೋಗಿತ್ತು. ಕೆಲವು ದಿನಗಳ ಬಳಿಕ ಯುವತಿಯ ಮನೆಯವರು ಆಕೆಗೆ ಬೇರೆ ವಿವಾಹ ಮಾಡಿದ್ದರು.

ಮಾಜಿ ಪ್ರೇಯಸಿಗೆ ಮದುವೆಯಾದ ಬಳಿಕ ಬೆಂಗಳೂರಿಗೆ ಹೋಗಿದ್ದ ರಾಮಕೃಷ್ಣ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಆದರೆ, ಇಬ್ಬರ ನಡುವೆ ದೂರವಾಣಿ ಮಾತುಕತೆ ನಡೆಯುತ್ತಿತ್ತು. ಇದು ಕುಟುಂಬದವರಿಗೆ ತಿಳಿದು ರದ್ದಾಂತವಾಗಿತ್ತು. ರಾಮಕೃಷ್ಣನಿಗೆ ಮನೆಯವರು ಎಚ್ಚರಿಕೆಯನ್ನು ನೀಡಿದ್ದರು. [ಮೈಸೂರು : ಸತ್ತಂತೆ ನಾಟಕವಾಡಲು ಹೋಗಿ ಹೆಣವಾದ]
ಕೊಲೆ ಮಾಡಲು ಯತ್ನಿಸಿದ : ಮಾಜಿ ಪ್ರೇಯಸಿ ಗ್ರಾಮಕ್ಕೆ ಬಂದಿರುವ ಸುದ್ದಿ ತಿಳಿದು ಸೋಮವಾರ ರಾಮಕೃಷ್ಣ ಮೇಡಿಮಾಕಲಹಳ್ಳಿ ಗ್ರಾಮಕ್ಕೆ ಬಂದಿದ್ದ. ಮಂಗಳವಾರ ಮಾಜಿ ಪ್ರೇಯಸಿಯ ಮನೆಗೆ ನುಗ್ಗಿದ ಆತ ಒನಕೆಯಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದ. [ಮಂಗಳೂರು : ಹಾವು ಹಿಡಿಯಲು ಹೋಗಿ ಸಾವು ತಂದುಕೊಂಡ]
ಮಾಜಿ ಪ್ರೇಯಸಿ ರಕ್ತದ ಮಡುವಿನಲ್ಲಿ ಬಿದ್ದ ತಕ್ಷಣ ಆಕೆ ಸತ್ತಳೆಂದು ಆತಂಕಗೊಂಡ ರಾಮಕೃಷ್ಣ ಅವರ ಮನೆಯಲ್ಲಿಯೇ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ಈ ವಿಷಯ ತಿಳಿದು ಮನೆಗೆ ಬಂದು ನೋಡಿದಾಗ ಹಲ್ಲೆಗೊಳಾದವಳು ಬದುಕಿದ್ದಳು.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಸೇರಿಸಲಾಗಿದೆ. ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications