ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಅಭಿಪ್ರಾಯವೇ ಅಪವಿತ್ರದ್ದು: ಅಮಿತ್ ಶಾಗೆ ಕುಮಾರಸ್ವಾಮಿ ತಿರುಗೇಟು

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 21: ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಅಪವಿತ್ರ ಎಂದ ಬಿಜೆಪಿ ರಾಷ್ಟ್ರೀಯ ಅಮಿತ್ ಶಾರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಕುಮಾರಸ್ವಾಮಿ, "ಚುನಾವಣೆ ಫಲಿತಾಂಶ ಬಂದು ನಾಳೆಗೆ (ಮಂಗಳವಾರ) ಒಂದು ವಾರವಾಗುತ್ತಿದ್ದರೂ ಕರ್ನಾಟಕದ ಜನರ ಪಾಲಿಗಂತೂ ಕಣ್ಮರೆಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇಂದು ದೀಢೀರ್ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿ ಕರ್ನಾಟಕದ ಮೈತ್ರಿ ಕೂಟವನ್ನು ಟೀಕಿಸಿರುವುದು ನನ್ನ ಗಮನಕ್ಕೆ ಬಂದಿತು. ನೀವು (ಮೈತ್ರಿ ಕೂಟ ಪಕ್ಷಗಳು) ಏನನ್ನು ಸಂಭ್ರಮಿಸುತ್ತಿದ್ದೀರಿ ಎಂದು ಷಾ ಅವರು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಜಾತ್ಯತೀತ ಸರ್ಕಾರವೊಂದನ್ನು ರಚಿಸುತ್ತಿರುವ ಕಾರಣಕ್ಕಾಗಿ ಮತ್ತು ಧರ್ಮದ ಆಧಾರದಲ್ಲಿ ಜನರು, ಸಮುದಾಯಗಳನ್ನು ಒಡೆದು ಆಳುವ ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ," ಎಂದು ತಿರುಗೇಟು ನೀಡಿದ್ದಾರೆ.

Your opinion is unholy, Kumaraswamy’s befitting reply to Amit Shah

"ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಅಪವಿತ್ರ ಎಂಬುದು ನಿಮ್ಮ ವಾದ. ಹಾಗಾದರೆ ಪವಿತ್ರವಾದದ್ದು ಯಾವುದು? ನಮ್ಮ ಪಕ್ಷಗಳ ಚಿಹ್ನೆಯಿಂದ ಆಯ್ಕೆಯಾದವರನ್ನು ಖರೀದಿಸಲು ಮುಂದಾಗಿದ್ದು ಪವಿತ್ರವಾದ ಕಾರ್ಯವೇ? ಬಹುಮತವಿಲ್ಲದ ಸರ್ಕಾರವನ್ನು ಉಳಿಸಿಕೊಳ್ಳಲು ಬೇರೆ ಪಕ್ಷಗಳ ಶಾಸಕರನ್ನು ಖರೀದಿಸಲು ಹೊಂಚು ಹಾಕಿದ್ದು, ಅವರಿಗೆ ನೂರು ಕೋಟಿ ಆಮಿಷ ಒಡ್ಡಿದ್ದು, ಅವರ ಮೂಲಕ ರಾಜೀನಾಮೆ ಕೊಡಿಸಲು ಪ್ರಯತ್ನಿಸಿದ್ದು ಅಪವಿತ್ರ ಕಾರ್ಯವಲ್ಲವೇ? ಒಬ್ಬೊಬ್ಬ ಶಾಸಕರನ್ನು ಖರೀದಿಸಲು ನೂರು ಕೋಟಿ ಖರ್ಚು ಮಾಡಲು ನಿರ್ಧರಿಸಿದ್ದ ನಿಮ್ಮ ಪಕ್ಷ ಆ ದುಡ್ಡನ್ನು ಎಲ್ಲಿಂದ ಹೊಂದಿಸಿತ್ತು? ಅದು ಸಕ್ರಮ ಹಣವೋ? ಅಕ್ರಮವೋ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಜನಾದೇಶಕ್ಕೆ ವಿರುದ್ಧ: ಅಮಿತ್ ಶಾಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಜನಾದೇಶಕ್ಕೆ ವಿರುದ್ಧ: ಅಮಿತ್ ಶಾ

"ರಾಜ್ಯದಲ್ಲಿ ಯಾರಿಗೂ ಬಹುಮತ ಬಂದಿಲ್ಲ. ನಿಮಗೂ ಕೂಡ. ಆ ಕಾರಣಕ್ಕಾಗಿಯೇ ಜಾತ್ಯತೀತ ತತ್ವದ ಅಡಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದಾಗಿದೆ. ನಮ್ಮ ಮೈತ್ರಿಗೆ ಒಂದು ನೆಲೆ ಇದೆ. ಸರ್ವರ ಹಿತ ಕಾಯುವ, ಎಲ್ಲರನ್ನೂ ಒಳಗೊಂಡಂತೆ ಪ್ರಗತಿ ಕಡೆಗೆ ಹೆಜ್ಜೆ ಹಾಕುವುದು ನಮ್ಮ ಈ ಮೈತ್ರಿ ಕೂಟದ ಮೂಲ ನೆಲೆ. ಅದನ್ನು ಅಪವಿತ್ರ ಮೈತ್ರಿ ಎನ್ನುತ್ತಿರುವ ನಿಮ್ಮ ಅಭಿಪ್ರಾಯ ಅಪವಿತ್ರವಾದದ್ದು ಎಂದು ನಾನು ಭಾವಿಸುತ್ತೇನೆ," ಎಂದಿದ್ದಾರೆ.

"ಬಿಜೆಪಿಗೆ ಬಹುಮತವಿಲ್ಲ ಎಂದು ತಿಳಿದಿದ್ದರೂ, ಸರ್ಕಾರ ರಚಿಸಿದರೆ ಅದು ಉರುಳುತ್ತದೆ ಎಂದು ಗೊತ್ತಿದ್ದರೂ, ಅತುರಕ್ಕೆ ಬಿದ್ದವರಂತೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಿರಿ. ಕೊನೆಗೆ ಅವರು ರಾಜೀನಾಮೆ ನೀಡುವಂತೆ ಮಾಡಿ ಅವರಿಗೆ ಅಪಮಾನ ಮಾಡಿದಿರಿ. ಈ ಮೂಲಕ ಅವರು ಪ್ರತಿನಿಧಿಸುವ ಸಮುದಾಯವನ್ನೇ ಬಿಜೆಪಿ ಅಪಮಾನ ಮಾಡಿದೆ. ಬಿಜೆಪಿಗೆ ಯಡಿಯೂರಪ್ಪ ಅವರ ಮೇಲೆ ಅಷ್ಟು ಕಾಳಜಿ ಇದ್ದಿದ್ದರೆ ಅಸ್ತಿರ ಸರ್ಕಾರ ರಚನೆಗೆ ಏಕೆ ಅವಕಾಶ ಮಾಡಿಕೊಟ್ಟಿತು. ಸೋಲಾಗುತ್ತದೆ ಎಂದು ಗೊತ್ತಿದ್ದರೂ ಇಂಥ ದುಸ್ಸಾಹಸಕ್ಕೆ ಏಕೆ ಕೈ ಹಾಕಿಸಿತು. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಸಂಭ್ರಮಿಸುವುದು ಬಿಜೆಪಿಯ ಎಂದಿನ ಪರಿಪಾಠವಲ್ಲವೇ? ಅದನ್ನೇ ಯಡಿಯೂರಪ್ಪ ಅವರ ವಿಚಾರದಲ್ಲೂ ಬಿಜೆಪಿ ಮಾಡಿದೆ," ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೊಸ ರಾಜಕೀಯ ಭಾಷ್ಯ ಬರೆಯುತ್ತಾ?ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೊಸ ರಾಜಕೀಯ ಭಾಷ್ಯ ಬರೆಯುತ್ತಾ?

"ಚುನಾವಣೆ ಮುಗಿದಾಗಿನಿಂದಲೂ ನಮ್ಮದು ಏಕೈಕ ದೊಡ್ಡ ಪಕ್ಷ, ನಾವೇ ಸರ್ಕಾರ ಮಾಡಬೇಕಿತ್ತು ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ಅಡಿಯಲ್ಲಿ ಬಹುಮತ ಇರುವವರು ಸರ್ಕಾರ ರಚಿಸಬೇಕೆ ವಿನಾ ಏಕೈಕ ದೊಡ್ಡ ಪಕ್ಷವಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ 2.25 ಕೋಟಿ ಮತ ಪಡೆದಿದೆ. ಬಿಜೆಪಿ ಪಡೆದಿರುವುದು 1.31 ಕೋಟಿ ಮತ. ಯಾರಿಗೆ ಬಹುಮತ ಇದೆ ಎಂದು ಬಿಜೆಪಿ ಅರಿಯಲಿ. ಈ ಕನಿಷ್ಠ ವಿಚಾರವನ್ನು ಬಿಜೆಪಿಗೆ ತಿಳಿಸಿಕೊಡಬೇಕಾಗಿ ಬಂದಿರುವುದು ಬೇಸರದ ಸಂಗತಿ," ಎಂದು ನಿಯೋಜಿತ ಮುಖ್ಯಮಂತ್ರಿ ವ್ಯಂಗ್ಯವಾಡಿದ್ದಾರೆ.

English summary
The BJP's National Amit Shah has said that JDS-Congress alliance in Karnataka is unholy. About this HD Kumaraswamy said that, Shah’s opinion is unholy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X