DK Shivakumar: ನೀವೆಲ್ಲರೂ ರಾಜಕೀಯವಾಗಿ ಸಮಾಧಿಯಾಗುತ್ತೀರಿ : ಡಿ ಕೆ ಶಿವಕುಮಾರ್ ಹೀಗೆ ಹೇಳಿದ್ದು ಯಾರಿಗೆ?
ಬೆಂಗಳೂರು, ಮಾರ್ಚ್ 03: ಕಾಂಗ್ರೆಸ್ ಪಕ್ಷ ತನಗೆ ಅವಕಾಶ ಸಿಕ್ಕಾಗಲೆಲ್ಲಾ ಜನಪರವಾದ ಕೆಲಸಗಳನ್ನು ಮಾಡಿದೆ. ಆದರೆ ಬಿಜೆಪಿಯವರ ಸಾಧನೆ ಕೇವಲ ಆಪರೇಷನ್ ಕಮಲ. ಬಿಜೆಪಿ ಸಂಸದ ಸುಧಾಕರ್ ಅವರು ನಮ್ಮನ್ನು ರಾಜಕೀಯ ಸಮಾಧಿ ಮಾಡಿದರು ಎಂದು ಮಾತನಾಡಿದ್ದನ್ನು ಇತ್ತೀಚಿಗೆ ಎಲ್ಲರೂ ಕೇಳಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದಾಗ ನಾನು ಆಪರೇಷನ್ ಕಮಲಕ್ಕೆ ಒಳಗಾದವರಿಗೆ ಒಂದು ಮಾತು ಹೇಳಿದ್ದೆ. ನೀವೆಲ್ಲರೂ ರಾಜಕೀಯವಾಗಿ ಸಮಾಧಿಯಾಗುತ್ತೀರಿ ಎಂದು ಹೇಳಿದ್ದೆ. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ 17 ಜನ ನಾಯಕರು ಬಿಜೆಪಿಗೆ ಸೇರ್ಪಡೆ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು
ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ ನೀವೆಲ್ಲರೂ ರಾಜಕೀಯವಾಗಿ ಸಮಾಧಿಯಾಗುತ್ತೀರಿ ಎಂದು ಹೇಳಿದ್ದೆ. ಈಗ ಎಷ್ಟು ಜನ ಗೆದ್ದಿದ್ದಾರೆ, ಸೋತಿದ್ದಾರೆ ಎನ್ನುವುದನ್ನು ನೋಡಬೇಕು. ಬಿಜೆಪಿಯವರು ಅಚಾನಕ್ ಆಗಿ ಅಧಿಕಾರಕ್ಕೆ ಬಂದಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ದೀರ್ಘ ಇತಿಹಾಸವಿದೆ. ಜನ ಪರವಾಗಿ ಕೆಲಸ ಮಾಡಿರುವವರು ನಾವು ಮಾತ್ರ. ಬಿಜೆಪಿಯವರು ಒಂದೇ ಒಂದು ಜನಪರ ಕೆಲಸ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ಪರಶುರಾಮನ ಪ್ರತಿಮೆಯನ್ನು ಯಾವ ಸ್ಥಿತಿಗೆ ಬಿಜೆಪಿಯವರು ತಂದಿದ್ದಾರೆ ಎಂದು ಜಿಲ್ಲೆಯ ಜನರಿಗೆ ಕಾಂಗ್ರೆಸ್ ನಾಯಕರು ಪ್ರವಾಸ ಏರ್ಪಡಿಸಿ ತೋರಿಸಬೇಕು. ಇಂತಹ ಪುಣ್ಯಭೂಮಿಯಲ್ಲಿ ದೇವರನ್ನು ಕೆಟ್ಟ ಸ್ಥಿತಿಗೆ ಬಿಜೆಪಿಯವರು ತಂದಿದ್ದಾರೆ. ಹಿಂದುತ್ವದ ಭೂಮಿಗೆ ಸ್ವಾಗತ ಎಂದು ಬಿಜೆಪಿಯ ಸುನೀಲ್ ಕುಮಾರ್ ಅವರು ಹೇಳಿದ್ದರು. ಅದಕ್ಕೆ ಪಕ್ಷದ ಮುಖಂಡರಾದ ಸುದೀರ್ ಕುಮಾರ್ ಮುರೊಳ್ಳಿ ಅವರು ಅತ್ಯುತ್ತಮವಾಗಿ ಉತ್ತರ ನೀಡಿದ್ದಾರೆ. ಬಿಜೆಪಿಯವರು ಮೊದಲು ಅವರ ಮನೆಯನ್ನು ರಿಪೇರಿ ಮಾಡಿಕೊಳ್ಳಲಿ.
ಬಿಜೆಪಿಯವರ ಎಲ್ಲಾ ಹೇಳಿಕೆಗೂ ನಾನು ಉತ್ತರ ನೀಡಲು ಹೋಗುವುದಿಲ್ಲ. ಬಿಜೆಪಿಯ ಸುನೀಲ್ ಕುಮಾರ್ ಹಾಗೂ ನಮ್ಮ ಸುಧೀರ್ ಕುಮಾರ್ ಅವರನ್ನು ಒಂದು ವೇದಿಕೆಯಲ್ಲಿ ಎದುರು ಬದುರು ನಿಲ್ಲಿಸೋಣ. ನಮ್ಮ ಕಾಂಗ್ರೆಸ್ ಪಕ್ಷದ ಸಾಧನೆ ಸೇರಿದಂತೆ ಎಲ್ಲದರ ಬಗ್ಗೆ ಉತ್ತರ ನೀಡಲು ಸುಧೀರ್ ಕುಮಾರ್ ಒಬ್ಬರೇ ಸಾಕು. ಮಾಧ್ಯಮದವರಲ್ಲಿ ಮನವಿ ಮಾಡುತ್ತೇನೆ. ಈ ಇಬ್ಬರಿಗೂ ಒಂದು ವೇದಿಕೆಯಲ್ಲಿ ಚರ್ಚೆ ಏರ್ಪಡಿಸಿ. ಬಿಜೆಪಿಯವರು ನಮ್ಮ ಯೋಜನೆಗಳ ಬಗ್ಗೆ ಏನು ಬೇಕಾದರೂ ಟೀಕೆ ಮಾತನಾಡಿಕೊಳ್ಳಲಿ ಕಾಂಗ್ರೆಸ್ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದು ಬೇಡ. ನಾವು ನಮ್ಮ ಕೆಲಸವನ್ನು ಮಾಡುತ್ತಾ ಹೋಗೋಣ. ಪ್ರತಿ ಬೂತ್ ಮಟ್ಟದಲ್ಲಿ ಜನರ ಹೃದಯವನ್ನು ಗೆಲ್ಲಬೇಕು. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು. ಕಾರ್ಕಳದಿಂದ ಮುಂದಿನ ಬಾರಿ ವಿಧಾನಸಭೆಯಲ್ಲಿ ಶಾಸಕರು ಕುಳಿತುಕೊಳ್ಳುವಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬಿಜೆಪಿಯವರು ದೇವರ ಹೆಸರಿನಲ್ಲಿ ಕೇವಲ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಧರ್ಮ, ಆಚರಣೆ ಇವೆಲ್ಲವೂ ವೈಯಕ್ತಿಕವಾದ ಸಂಗತಿಗಳು. ಬಿಜೆಪಿಯವರು ಹಿಂದು ನಾವು ಮುಂದು ಎಂದು ಹೇಳುತ್ತಾರೆ. ನಾವು ಈ ರೀತಿ ಹೇಳುವುದಿಲ್ಲ. ಏಕೆಂದರೆ ನಾವು ಇಲ್ಲಿ ಎಲ್ಲಾ ಧರ್ಮದ ಜಾತಿಯ ಜನರು ಇದ್ದೇವೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಲಿಂಗಾಯತ, ಒಕ್ಕಲಿಗ, ಬಂಟ, ಪೂಜಾರಿ, ಶೆಟ್ಟಿಗಳು ಇದ್ದೇವೆ" ಎಂದರು.
ನಾವು ಶಾಲೆಗೆ ಹೋಗುವ ಸಮಯದಲ್ಲಿ ನಮ್ಮೆಲ್ಲರಿಗೆ ಜಾತಿ ತಿಳಿದಿತ್ತೇ? ಸೂರ್ಯ, ಚಂದ್ರ, ಗಾಳಿ, ನೀರು, ಬೆಳಕಿಗೆ ಜಾತಿ ಇದೆಯೇ? ನಾವುಗಳು ಯಾರೂ ಸಹ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಎಷ್ಟೋ ಜನ ನಮಗೆ ಜಾತಿ,ಧರ್ಮ ಯಾವುದೂ ಬೇಡ ಎಂದು ಹೇಳುತ್ತಾರೆ. ಆದರೆ ಮಗ ಹುಟ್ಟಿದಾಗ ಕಿವಿ ಚುಚ್ಚುವುದು, ಉಡಿದಾರ ಕಟ್ಟುವುದು, ನಾಮಕರಣ ಮಾಡುವುದು ಸೇರಿದಂತೆ ಅಂತರರ್ಜಾತಿ ವಿವಾಹ ಆದವರು ಮುಪ್ಪಾಗಿ ತೀರಿ ಹೋದಾಗ ಅವರನ್ನು ಯಾವ ರೀತಿ ಸಂಸ್ಕಾರ ಮಾಡಬೇಕು ಎಂದು ಧರ್ಮ ತೀರ್ಮಾನ ಮಾಡುತ್ತದೆ ಎಂದರು.
ಜಾತಿ- ಧರ್ಮ ರಾಜಕಾರಣದಿಂದ ಈ ದೇಶಕ್ಕೆ ಒಳ್ಳೆಯದು ಆಗುವುದಿಲ್ಲ. ಶಾಲಾ ಮಕ್ಕಳಿಗೆ ಜಾತಿ ನೋಡಿ ಕ್ರೀಡೆಗಳನ್ನು ಆಯೋಜನೆ ಮಾಡಲಾಗುತ್ತದೆಯೇ? ಪರೀಕ್ಷೆಗಳಲ್ಲಿ ಅಂಕ ನೀಡಲಾಗುತ್ತದೆಯೇ? ಉತ್ತಮ ಕಲೆ, ಸಾಹಿತ್ಯವನ್ನು ಜಾತಿ ಮೇಲೆ ನೋಡಲಾಗುತ್ತದೆಯೇ ಎಂದು ಡಿಕೆ ಶಿವಕುಮಾರ್ ಹೇಳಿದರು.
ದಾನ, ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ತಕ್ಷಣ ಕ್ಯಾಬಿನೆಟ್ ಸಭೆ ಮಾಡಿ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದೆವು. ಅನೇಕ ಕಾರ್ಯಕರ್ತರು ಇದು ಸಾಧ್ಯವಿಲ್ಲ ಎಂದುಕೊಂಡಿದ್ದರು. ಆದರೆ ನಾವು ಇಂದು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿದರೆ ಏನೂ ಆಗುವುದಿಲ್ಲ. ಅವರಿಗೆ ಅವಕಾಶ ಸಿಕ್ಕಾಗ ಈ ರೀತಿಯ ಕೆಲಸ ಮಾಡಿದ್ದರೆ, ಒಂದೇ ಒಂದು ಉದಾಹರಣೆ ನೀಡಲಿ. ಕಾಂಗ್ರೆಸ್ ಕೊಟ್ಟಿರುವ ಯೋಜನೆಗಳನ್ನು ಜನರು ಅನುಭವಿಸಬೇಡಿ ಎಂದು ಬಿಜೆಪಿಯವರು ಜನರಿಗೆ ಎಲ್ಲಾ ಯೋಜನೆಗಳನ್ನು ಬಿಟ್ಟು ಬಿಡಿ ಎಂದು ಹೇಳುವ ಬದ್ದತೆ ತೋರಿಸಲಿ. ಈ ಕೆಲಸ ಅವರಿಂದ ಸಾಧ್ಯವಿಲ್ಲ ಎಂದರು.
ಈ ವರ್ಷ ಪಕ್ಷ ಸಂಘಟನೆಯ ವರ್ಷ. ಕಾಂಗ್ರೆಸ್ ಅಧ್ಯಕ್ಷನಾಗಿ ಬ್ಲಾಕ್ ಕಾಂಗ್ರೆಸ್ ಸೇರಿದಂತೆ ಎಲ್ಲಾ ಸ್ಥಳೀಯ ನಾಯಕರಿಗೆ ನಾನು ಪ್ರಮಾಣ ವಚನ ಬೋಧನೆ ಮಾಡಿದ್ದು ಸಂತಸ ತಂದಿತು. ಪರಾಜಿತ ಅಭ್ಯರ್ಥಿಗಳು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಬ್ಲಾಕ್ ಮಟ್ಟದ ಅಧ್ಯಕ್ಷರು ಸೇರಿದಂತೆ ಎಲ್ಲರು ತಮ್ಮ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಬೇಕು. ಆಸ್ಪತ್ರೆ, ಆರಾಧನಾ, ಬಗರ್ ಹುಕುಂ, ಆಶ್ರಯ ಸಮಿತಿಯವರೆಲ್ಲಾ ಸೇರಿ ಸಭೆಗಳಲ್ಲಿ ಭಾಗವಹಿಸಬೇಕು. ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಬೇಕು ಎಂದರು.












Click it and Unblock the Notifications