ಕರ್ನಾಟಕ ಚುನಾವಣೆ : ಯೋಗಿ ಆದಿತ್ಯನಾತ್ ಸ್ಟಾರ್ ಪ್ರಚಾರಕ
ಬೆಂಗಳೂರು, ಜನವರಿ 01 : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರು. ರಾಜ್ಯದಲ್ಲಿ ಹಲವು ಸಮಾವೇಶ ಉದ್ದೇಶಿಸಿ ಅವರು ಪ್ರಚಾರ ಭಾಷಣ ಮಾಡಲಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ 35 ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ್ದರು. ಕರ್ನಾಟಕದಲ್ಲಿಯೂ ಅವರನ್ನು ಕರೆಸಿ ಪ್ರಚಾರ ನಡೆಸಲು ಪಕ್ಷ ನಿರ್ಧರಿಸಿದೆ.
ಪಕ್ಷ ಆಂತರಿಕ ಸಮೀಕ್ಷೆಯನ್ನು ನಡೆಸಿ ರಾಜ್ಯದ 224 ಕ್ಷೇತ್ರಗಳನ್ನು ಮೂರು ವಿಭಾಗಗಳಾಗಿ ವಿಂಗಡನೆ ಮಾಡಿದೆ. ಸುಲಭವಾಗಿ ಜಯಗಳಿಸಬಹುದು (ಎ), ಸ್ಪರ್ಧೆ ಇರುವ ಕ್ಷೇತ್ರ (ಬಿ), ಅತೀ ಕಷ್ಟದ ಕ್ಷೇತ್ರ (ಸಿ).

ಯೋಗಿ ಆದಿತ್ಯನಾಥ್ ಬಿ ಮತ್ತು ಸಿ ವಿಭಾಗಗಳಲ್ಲಿ ಬರುವ ಕ್ಷೇತ್ರಗಳಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಡಿಸೆಂಬರ್ 21ರಂದು ಯೋಗಿ ಆದಿತ್ಯನಾಥ್ ಹುಬ್ಬಳ್ಳಿಯಲ್ಲಿ ಪರಿವರ್ತನಾ ಯಾತ್ರೆ ಉದ್ದೇಶಿಸಿ ಭಾಷಣ ಮಾಡಿದ್ದರು. ಹಿಂದುತ್ವ ಅಜೆಂಡಾವನ್ನು ಜನರ ಮುಂದಿಟ್ಟು, ಟಿಪ್ಪು ಜಯಂತಿ ಆಚರಣೆ ಮಾಡುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎ ವಿಭಾಗದಲ್ಲಿ ಬರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಪ್ರಚಾರಕ್ಕೆ ಈಗಾಗಲೇ ಪಕ್ಷ ಯೋಜನೆ ತಯಾರಿಸುತ್ತಿದೆ.












Click it and Unblock the Notifications