ಹೆಲಿಕಾಪ್ಟರ್ ತರಬೇತಿ ವಿಭಾಗ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರ
ಬೆಂಗಳೂರು, ಡಿಸೆಂಬರ್ 29 : ವಾಯುಪಡೆಯ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರಿಗೆ ಸ್ಥಳಾಂತರ ಮಾಡಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ವಾಯುಪಡೆಯೇ ಬೆಂಗಳೂರಿನಿಂದ ಮೈಸೂರಿಗೆ ಘಟಕ ಸ್ಥಳಾಂತರ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಕೈಗಾರಿಕೆ ಹಾಗೂ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದ್ದರು. ರಾಜ್ಯದ ವಿಮಾನನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ.
ಸಚಿವರ ಭೇಟಿಯ ವೇಳೆ ಬೆಂಗಳೂರಿನ ಯಲಹಂಕದಲ್ಲಿರುವ ವಾಯುಪಡೆ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರಿಗೆ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಪ್ರಾಧಿಕಾರದ ಸ್ವಾಧೀನದಲ್ಲಿ ಮೈಸೂರು ವಿಮಾನ ನಿಲ್ದಾಣವಿದೆ. ವಾಯುಪಡೆಗೆ ಅದನ್ನು ಸ್ಥಳಾಂತರ ಮಾಡಿ ಹೆಲಿಕಾಪ್ಟರ್ ತರಬೇತಿ ಕಾರ್ಯಕ್ಕೆ ಬಳಸಿಕೊಂಡು ಅಭಿವೃದ್ಧಿ ಪಡಿಸುವಂತೆ ಪ್ರಾಧಿಕಾರಕ್ಕೆ ಸೂಚಿಸಬೇಕು ಎಂದು ಕರ್ನಾಟಕ ಸರ್ಕಾರ ಮನವಿ ಮಾಡಿದೆ.
ಶ್ರೀನಗರ, ಪುಣೆ, ಚಂಡೀಗಡ ಮಾದರಿಯಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು ತನ್ನದೇ ವೆಚ್ಚದಲ್ಲಿ ಅಭಿವೃದ್ಧಿ ಮಾಡುವುದು. ನಾಗರಿಕರ ಹಾಗೂ ಮಿಲಿಟರಿ ಬಳಕೆಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಲು ವಾಯುಪಡೆಯು ಒಪ್ಪಿಗೆ ನೀಡಿದೆ.
ಕರ್ನಾಟಕ ಸರ್ಕಾರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೈಸೂರು ವಿಮಾನ ನಿಲ್ದಾಣವನ್ನುಅಭಿವೃದ್ಧಿ ಪಡಿಸಲಿದೆ. ಮೈಸೂರಿಗೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ ಸಂಪರ್ಕ ಕಲ್ಪಿಸಬೇಕು ಎಂಬುದು ರಾಜ್ಯ ಸರ್ಕಾರದ ಆಶಯವಾಗಿದೆ.












Click it and Unblock the Notifications