ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದು ದೊಡ್ಡ ತಪ್ಪು: ಸಿದ್ದರಾಮಯ್ಯ!
ಬೆಂಗಳೂರು, ಜು. 05: "ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ತಪ್ಪು" ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸಿಎಂ ಯಡಿಯೂರಪ್ಪ ನಡೆಯನ್ನು ವಿರೋಧಿಸಿದ್ದಾರೆ.
"ನಾವು ಅಣೆಕಟ್ಟು ಕಟ್ಟಲು ಅವರ ಅನುಮತಿ ಏಕೆ ಬೇಕು? ಕೋರ್ಟ್ ಆದೇಶ ಪ್ರಕಾರ ನಮ್ಮ ಕೆಲಸ ನಾವು ಮಾಡಬೇಕು" ಎಂದು ಸಿದ್ದರಾಮಯ್ಯ ಹೇಳಿದರು. "ಪತ್ರ ಬರೆದು ಅನುಮತಿ ಕೋರಿದರೆ ಯಾರೂ ಒಪ್ಪುವುದಿಲ್ಲ. ನಾವು ಅಣೆಕಟ್ಟು ಕಟ್ಟುವುದರಿಂದ ತಮಿಳುನಾಡಿಗೆ ನೀರಿನ ಸಮಸ್ಯೆ ಆಗುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ಈ ರೀತಿ ಪತ್ರ ಬರೆದು ಒಪ್ಪಿಗೆ ಕೇಳಿರಲಿಲ್ಲ" ಎಂದಿದ್ದಾರೆ.
"ನಾನು ಮುಖ್ಯಮಂತ್ರಿ ಆಗಿದಿದ್ದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿ ಮುಂದೆ ಧರಣಿ ಕೂರುತ್ತಿದ್ದೆ. ಯಡಿಯೂರಪ್ಪ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ. 15 ನೇ ಹಣಕಾಸು ಆಯೋಗದ ವರದಿಯಂತೆ ನಮಗೆ 5495 ಕೋಟಿ ಹಣ ಬರಬೇಕು. ಆದರೆ, ಯಾರು ಸಹ ತುಟಿ ಬಿಚ್ಚಲ್ಲ. ಯಡಿಯೂರಪ್ಪಗೆ ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯುತ್ತಾರೆ ಎಂಬ ಭಯ. ಇಂತಹ ಸರ್ಕಾರ ಬೇಕೇ?" ಎಂದು ಪ್ರಶ್ನಿಸಿದರು.

Recommended Video
"ಕೊರೊನಾವೈರಸ್ ಸಂಕಷ್ಟದ ಸಂಧರ್ಭದಲ್ಲಿ ಸರ್ಕಾರ ಜನರ ಸಂಕಷ್ಟ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಪ್ರತಿಯೊಬ್ಬರಿಗೂ ಹತ್ತು ಸಾವಿರ ಕೊಡಿ ಎಂದು ಒತ್ತಾಯ ಮಾಡಿದ್ದೆವು. ನಾವು ಇದ್ದಿದ್ದರೆ ಹತ್ತು ಸಾವಿರ ಪರಿಹಾರ ಕೊಡುತ್ತಿದ್ದೆವು. ಹತ್ತು ಕೆಜಿ ಕೊಟ್ಟಿದ್ರೆ ಇವರ ಗಂಟೇನು ಹೋಗುತ್ತಿತ್ತು? ಲಸಿಕೆ ಹಾಕಿಸಿಕೊಳ್ಳದವರಿಗೆ ಅದರಲ್ಲಿಯೂ ಮಕ್ಕಳಿಗೆ ಮೂರನೇ ಅಲೆ ಅಪಾಯಕಾರಿ ಆಗಬಹುದು ಎಂದು ಜಯದೇವ ಹೃದ್ರೋಗ ಸಂಸ್ಥೆಯ ಡಾ. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. ತಜ್ಞರು ಹೇಳುತ್ತಿದ್ದರೂ ಸರ್ಕಾರ ಎಚ್ಚರಿಕೆ ವಹಿಸುತ್ತಿಲ್ಲ. ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದು ನಾವು. ಆದರೆ ಈ ಸರ್ಕಾರ ಅದನ್ನು ಮುಚ್ಚಲು ಹೊರಟಿದೆ. ಇವರ ಮನೆ ಹಾಳಾಗ" ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications