ಅಧಿಕಾರದ ಕಿತ್ತಾಟ... ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ...!
ಮೈಸೂರು, ಆಗಸ್ಟ್ 27: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದರ ಮೇಲೊಂದರಂತೆ ಅಗ್ನಿ ಪರೀಕ್ಷೆಗಳಾಗುತ್ತಿವೆ. ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದುಕೊಂಡೇ ಸಿಎಂ ಆಗಲೇಬೇಕೆಂಬ ಹಟಕ್ಕೆ ಬಿದ್ದು ಮಾಡಬಾರದ ಕಸರತ್ತನ್ನು ಮಾಡಿ ಹೇಗೋ ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಸಿಎಂ ಗಾದಿಗೇರಿದ್ದೂ ಆಯಿತು.
ವೇದಿಕೆಯಲ್ಲಿ 3 ಡಿಸಿಎಂಗಳಿದ್ದರೂ ಒಬ್ಬರ ಹೆಸರು ಮಾತ್ರ ಉಲ್ಲೇಖಿಸಿದ ಸಿಎಂ
ಆದರೆ ಇದೀಗ ಸಿಎಂ ಗಾದಿ ಸುಖಾಸನವಲ್ಲ, ಮುಳ್ಳಿನ ಕುರ್ಚಿ ಎಂಬುದು ಅರಿವಾಗಿದೆ. ಒಂದೆಡೆ ಹೈಕಮಾಂಡ್ ಅಸಹಕಾರ, ಮತ್ತೊಂದೆಡೆ ಬೆನ್ನಿಗೆ ನಿಂತಿದ್ದ ನಾಯಕರೇ ಅಸಮಾಧಾನಿತರಾಗಿ ಚುಚ್ಚುತ್ತಿದ್ದಾರೆ. ಇದೆಲ್ಲವನ್ನು ನೋಡುತ್ತಿರುವ ಯಡಿಯೂರಪ್ಪ ಅವರಿಗೆ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದ್ದರೆ ನೆಮ್ಮದಿಯಿತ್ತು ಎಂದೆನಿಸಿದ್ದರೂ ಅಚ್ಚರಿಯಿಲ್ಲ.

ಅಂದುಕೊಂಡಂತೆ ಆಗಲಿಲ್ಲ ಎಲ್ಲವೂ
ಮೈತ್ರಿ ಸರ್ಕಾರದಲ್ಲಿದ್ದ ಅಸಮಾಧಾನವನ್ನು ಉಪಯೋಗಿಸಿಕೊಂಡು ಅತೃಪ್ತ ಶಾಸಕರು ರಾಜೀನಾಮೆ ಕೊಡಿಸುವಂತೆ ಮಾಡಿ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೇರುವಾಗ ಇದ್ದ ಹುರುಪು, ಹುಮ್ಮಸ್ಸು, ಉತ್ಸಾಹ ಯಾವುದೂ ಇದೀಗ ಯಡಿಯೂರಪ್ಪರವರಲ್ಲಿ ಇಲ್ಲದಾಗಿದೆ. ಅವರು ಅಧಿಕಾರವಿಲ್ಲದಾಗ ತೆಪ್ಪಗೆ ಕುಳಿತಿದ್ದ ಬಿಜೆಪಿ ಶಾಸಕರು ಮುಂದೆ ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಹೀಗೆಯೇ ಇರುತ್ತಾರೆ ಎಂದು ನಂಬಿದ್ದರು. ಜತೆಗೆ ಸರ್ಕಾರ ಉರುಳಿಸುವಾಗ ಬಿಜೆಪಿ ಶಾಸಕರಲ್ಲಿದ್ದ ಒಗ್ಗಟ್ಟು, ಪಕ್ಷ ಮತ್ತು ನಾಯಕರ ಬಗೆಗಿನ ನಿಷ್ಠೆ ಯಡಿಯೂರಪ್ಪ ಅವರಿಗೆ ಯುದ್ಧೋನ್ಮಾದವನ್ನು ನೀಡಿತ್ತು. ಮುಂದೆಯೂ ಇವರೆಲ್ಲ ಹೀಗೆಯೇ ಇರುತ್ತಾರೆ. ಇದರಿಂದ ರಾಜ್ಯದಲ್ಲಿ ಒಂದೊಳ್ಳೆ ಆಡಳಿತ ನಡೆಸಬಹುದು ಎಂದು ನಂಬಿದ್ದರು. ಆದರೆ ಎಲ್ಲವೂ ಉಲ್ಟಾ ಆಗಿದೆ.

ಬಿಜೆಪಿಯಲ್ಲೂ ಹೊಗೆಯಾಡಿದೆ ಅಸಮಾಧಾನ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದಲೇ ಹೈಕಮಾಂಡ್ ಇವರ ಮೇಲೆ ನಿಯಂತ್ರಣ ಸಾಧಿಸುತ್ತಾ ಬಂದಿದೆ. ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರಾಗಲೀ. ಗೃಹಸಚಿವ ಅಮಿತ್ ಶಾ ರವರಾಗಲೀ ಬಿಡುತ್ತಿಲ್ಲ. ಸುಮಾರು ಒಂದು ತಿಂಗಳ ಕಾಲ ಸಂಪುಟ ರಚನೆ ಮಾಡಲಾಗದೆ ಅಡ್ಡಾಡಿದ್ದು, ಪ್ರವಾಹ ಪರಿಸ್ಥಿತಿಯನ್ನು ಏಕಾಂಗಿಯಾಗಿ ನಿಭಾಯಿಸಿದ್ದು ಎಲ್ಲವನ್ನೂ ಜನ ನೋಡಿದ್ದಾರೆ.
ಮೈತ್ರಿ ಸರ್ಕಾರ ಪತನಗೊಳ್ಳುವ ತನಕ ಇದ್ದ ಬಿಜೆಪಿ ಶಾಸಕರ ಒಗ್ಗಟ್ಟು ಅಧಿಕಾರ ಕೈಗೆ ಬರುತ್ತಿದ್ದಂತೆಯೇ ಇಲ್ಲದಾಗಿದೆ. ತನಗೂ ಸಚಿವ ಸ್ಥಾನಬೇಕೆಂಬ ಬಯಕೆ ಒಳಗೊಳಗೆ ಸಚಿವ ಸ್ಥಾನಕ್ಕೆ ಬೇಕಾದ ಲಾಬಿ ನಡೆಸುವಂತೆ ಮಾಡಿತ್ತು. ಈಗ ಸಚಿವ ಸ್ಥಾನ ಸಿಗದಿದ್ದಾಗ ತಮ್ಮ ಅಸಮಾಧಾನವನ್ನು ತಮಗೆ ತೋಚಿದಂತೆ ಹೊರಹಾಕಿದ್ದಾರೆ. ಇದಾದ ಬಳಿಕ ಸಚಿವ ಸ್ಥಾನ ಪಡೆದ ಸಚಿವರು ಕೂಡ ತಮಗೆ ಇಂತಹದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿರುವುದು, ನಮಗೆ ತಕ್ಕುದಾದ ಖಾತೆ ಸಿಕ್ಕಿಲ್ಲ, ನನ್ನನ್ನು ಡಿಸಿಎಂ ಮಾಡಿಲ್ಲ ಎಂಬಿತ್ಯಾದಿ ಆರೋಪಗಳನ್ನು ಮಾಡುತ್ತಾ ಪಕ್ಷದ ಮತ್ತು ನಾಯಕರ ಬಗ್ಗೆಯೇ ತಿರುಗಿ ಬಿದ್ದಿರುವುದು ಈಗ ಕಾಣಿಸುತ್ತಿರುವ ವಿದ್ಯಮಾನವಾಗಿದೆ.
ಎದುರಾಳಿಯಾದರೂ ಯಡಿಯೂರಪ್ಪ ಮೇಲೆ ಅನುಕಂಪ ಎಂದ ಸಿದ್ದರಾಮಯ್ಯ

ಅನರ್ಹ ಶಾಸಕರ ಮುಂದಿನ ನಡೆಯೇನು?
ತಾವು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರದಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತುಕೊಳ್ಳಬಹುದೆಂದು ಕನಸು ಕಂಡಿದ್ದ ಅನರ್ಹ ಶಾಸಕರು ಇದೀಗ ಬಿಜೆಪಿ ಸರ್ಕಾರದಲ್ಲಿ ಶಾಸಕರು, ಸಚಿವರು ಬಂಡಾಯ ಎದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಅವರಿಗೆ ಈಗ ತಮ್ಮ ರಾಜಕೀಯ ಭವಿಷ್ಯದ ಚಿಂತೆ ಶುರುವಾಗಿದೆ.
ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದು ತೀರ್ಪು ಬರುವ ತನಕ ಅವರ ರಾಜಕೀಯ ನಡೆ ಏನೆಂಬುದೇ ತಿಳಿಯದಾಗಿದೆ. ಒಂದು ವೇಳೆ ಇನ್ನು ಆರು ತಿಂಗಳಲ್ಲಿ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಭುಗಿಲೆದ್ದು ಸರ್ಕಾರ ಕಳಚಿ ಬಿದ್ದರೆ ಮಧ್ಯಂತರ ಚುನಾವಣೆ ನಡೆಯುವುದು ಖಚಿತ. ಈ ವೇಳೆ ಇವರು ಅತ್ತ ಮಾತೃಪಕ್ಷಕ್ಕೂ ಹೋಗಲಾಗದೆ ಇತ್ತ ಬಿಜೆಪಿಯಲ್ಲಿಯೂ ಅವಕಾಶವಿಲ್ಲದೆ ತ್ರಿಶಂಕು ಸ್ಥಿತಿ ನಿರ್ಮಾಣವಾದರೂ ಅಚ್ಚರಿಪಡಬೇಕಾಗಿಲ್ಲ.

ಒಬ್ಬರಿಗೂ ಇಲ್ಲ ಜನರ ಕಣ್ಣೀರೊರೆಸುವ ಮನಸ್ಸು
ಇನ್ನು ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನದ ಹೊಗೆಯನ್ನು ತಣ್ಣಗೆ ಮಾಡಿ ಸಂಘಟನೆ ಮಾಡುವ ಜವಾಬ್ದಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಗೆ ವಹಿಸಿಕೊಡಲಾಗುತ್ತಿದೆ. ಅವರು ಎಷ್ಟರ ಮಟ್ಟಿಗೆ ನಾಯಕರನ್ನು ಒಟ್ಟಿಗೆ ಕೊಂಡೊಯ್ಯುತ್ತಾರೋ ಗೊತ್ತಿಲ್ಲ. ಏಕೆಂದರೆ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡುವುದೇ ಹಲವು ಮುಖಂಡರಿಗೆ ಇಷ್ಟವಿರಲಿಲ್ಲ. ಅಷ್ಟೇ ಅಲ್ಲದೆ ಕೆಲವು ಹಿರಿಯ ಮುಖಂಡರು ತಾವು ರಾಜ್ಯಾಧ್ಯಕ್ಷರಾಗುವ ಕನಸು ಕಂಡಿದ್ದರು. ಆದರೆ ಈಗಿನ ಪರಿಸ್ಥಿತಿಯನ್ನು ನೋಡಿದರೆ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಂತು ಸ್ಪಷ್ಟವಾಗುತ್ತಿದೆ.
ಒಂದೆಡೆ ಬರ, ಮತ್ತೊಂದೆಡೆ ಪ್ರವಾಹಕ್ಕೆ ಸಿಲುಕಿ ಜನ ನಲುಗಿ ಹೋಗಿದ್ದಾರೆ. ತಲೆಗೆ ಸೂರಿಲ್ಲ, ಹೊಟ್ಟೆಗೆ ಅನ್ನವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣಕ್ಕೆ ಸಿಕ್ಕ ಅಧಿಕಾರವನ್ನು ಬಳಸಿಕೊಂಡು ಬಡ ಜನರ ಕಣ್ಣೀರು ಒರೆಸಲು ಮುಂದಾಗೋಣ ಎಂಬ ಆಲೋಚನೆ ಒಬ್ಬನೇ ಒಬ್ಬ ಶಾಸಕ, ಸಚಿವನಿಗೆ ಇಲ್ಲವಾಗಿದೆ. ಅವರೆಲ್ಲ ಕೇವಲ ತಮ್ಮ ಅಧಿಕಾರದ ಚಿಂತೆಯಲ್ಲಿ ಮುಳುಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಮತ ಹಾಕಿದ ಸಾಮಾನ್ಯ ಜನರ ಗತಿಯೇನು?