ದೆಹಲಿಗೆ ಯಡಿಯೂರಪ್ಪ; ಸಂಪುಟ ವಿಸ್ತರಣೆ ಲೆಕ್ಕಾಚಾರಗಳು
Recommended Video
ಬೆಂಗಳೂರು, ಜನವರಿ 29 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೆಹಲಿಗೆ ಹೋಗುವುದಾಗಿ ಘೋಷಣೆ ಮಾಡಿದ್ದಾರೆ. ದೆಹಲಿ ಭೇಟಿಯ ವಿಚಾರ ತಿಳಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಲೆಕ್ಕಾಚಾರಗಳು ಆರಂಭವಾಗಿವೆ.
ಬುಧವಾರ ಸಂಜೆ ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, "ಗುರುವಾರ 11 ಗಂಟೆಗೆ ದೆಹಲಿಗೆ ತೆರಳಿ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಜೆ. ಪಿ. ನಡ್ಡಾರನ್ನು ಭೇಟಿ ಮಾಡಿ ಅಭಿನಂದಿಸಿ ಶುಭ ಕೋರುತ್ತೇನೆ. ಬಳಿಕ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿಗಳಾದ ಅಮಿತ್ ಶಾರನ್ನು ಭೇಟಿ ಮಾಡಲಾಗುವುದು" ಎಂದರು.
"ಸಚಿವ ಸಂಪುಟ ವಿಸ್ತರಣೆ ಮಾಡಲು ಇನ್ನೆರಡು ದಿನದಲ್ಲಿ ಪ್ರಯತ್ನ ಮಾಡಲಾಗುವುದು. ಜನವರಿ 31ರಂದು ರಾಜ್ಯಕ್ಕೆ ವಾಪಸ್ ಆಗುತ್ತೇನೆ" ಎಂದು ಯಡಿಯೂರಪ್ಪ ಹೇಳಿದರು. ಯಡಿಯೂರಪ್ಪ ಹೇಳಿಕೆ ಬಳಿಕ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಯ ಲೆಕ್ಕಾಚಾರಗಳು ಆರಂಭವಾಗಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ 16 ಸಚಿವ ಸ್ಥಾನಗಳು ಖಾಲಿ ಇವೆ. ಖಾಲಿ ಇರುವ ಸ್ಥಾನಕ್ಕಾಗಿ 2 ಡಜನ್‌ಗೂ ಅಧಿಕ ಆಕಾಂಕ್ಷಿಗಳಿದ್ದಾರೆ. ಅದರಲ್ಲೂ ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿದ್ದಾರೆ. ಮೂಲ ಬಿಜೆಪಿ ಶಾಸಕರು ಸಹ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಯಡಿಯೂರಪ್ಪ ಹೇಳಿಕೆ
ಬುಧವಾರ ಬೆಳಗಾವಿ ಪ್ರವಾಸ ಕೈಗೊಂಡಿದ್ದ ಯಡಿಯೂರಪ್ಪ ಅವರು, ಉಪ ಚುನಾವಣೆಯಲ್ಲಿ ಗೆದ್ದ ಒಂದಿಬ್ಬರು ಶಾಸಕರನ್ನು ಹೊರತುಪಡಿಸಿದರೆ ಬಹುತೇಕರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಸುಳಿವು ನೀಡಿದ್ದಾರೆ. ಆದರೆ, ಮತ್ತೊಂದು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ಪಟ್ಟಿಗಳು ಸಿದ್ಧ
ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಎರಡು ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಒಂದು ಪಟ್ಟಿಯಲ್ಲಿ ಉಪ ಚುನಾವಣೆಯಲ್ಲಿ ಗೆದ್ದ 7 ಶಾಸಕರಿಗೆ ಸಚಿವ ಸ್ಥಾನ ಸಿಕ್ಕಲಿದೆ ಎಂದು ತಿಳಿದುಬಂದಿದೆ. 50:50 ಸಚಿವ ಸ್ಥಾನ ಸಿಗಬಹುದು ಎಂಬ ಶಾಸಕರ ಹೆಸರುಗಳು ಪಟ್ಟಿಯಲ್ಲಿವೆ.

ಸಂಭ್ಯಾವ್ಯ ಶಾಸಕರ ಪಟ್ಟಿ
ಸಂಭಾವ್ಯ ಪಟ್ಟಿಯ ಪ್ರಕಾರ ರಮೇಶ್ ಜಾರಕಿಹೊಳಿ, ಬಿ. ಸಿ. ಪಾಟೀಲ್, ಎಸ್. ಟಿ. ಸೋಮಶೇಖರ್, ಬೈರತಿ ಬಸವರಾಜ, ಗೋಪಾಲಯ್ಯ, ಸುಧಾಕರ್, ಆನಂದ್ ಸಿಂಗ್‌ಗೆ ಸಚಿವ ಸ್ಥಾನ ಸಿಗಲಿದೆ. ಶಿವರಾಂ ಹೆಬ್ಬಾರ್, ನಾರಾಯಣ ಗೌಡ, ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದೆ.

ಬಿಜೆಪಿಯಿಂದ ಯಾರಿಗೆ ಸ್ಥಾನ?
ಮೂಲ ಬಿಜೆಪಿ ಶಾಸಕರಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಾಲಪ್ಪ ಆಚಾರ್ ಹೆಸರು ಕೇಳಿ ಬರುತ್ತಿದೆ. ಇವರಲ್ಲಿ ಯಾರು ಸಂಪುಟ ಸೇರಲಿದ್ದಾರೆ? ಎಂದು ಕಾದು ನೋಡಬೇಕು.












Click it and Unblock the Notifications