ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ: ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಆಘಾತ ಎದುರಾಗಿದೆ. ಡಿಸೆಂಬರ್ ಅಂತ್ಯದವರೆಗೆ ತಮಿಳುನಾಡಿಗೆ ದಿನಕ್ಕೆ 3,128 ಕ್ಯೂಸೆಕ್ ನೀಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಮಂಗಳವಾರ ಶಿಫಾರಸು ಮಾಡಿದೆ. ಇದಕ್ಕೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದರು, ರಾಜ್ಯದಿಂದ ನೀರು ಹರಿಸಲು ಕೇಳಿರುವುದು ಅನ್ಯಾಯ ಎಂದಿದ್ದಾರೆ. " ದಕ್ಷಿಣ ಲಂಕೆಯ ಕರಾವಳಿಯಲ್ಲಿ ಚಂಡಮಾರುತ ಸಂಚಾರದಿಂದ ತಮಿಳು ನಾಡಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಎರಡು ವಾರಗಳ ಹಿಂದೆಯಾದ ವಾಯುಭಾರ ಕುಸಿತ ಹಾಗೂ ಈಗ ಚಂಡಮಾರುತ ಸಂಚಾರದಿಂದ ತಮಿಳು ನಾಡಿಗೆ ಸಾಕಷ್ಟು ನೀರು ಸಂಗ್ರಹವಾಗಲಿದ್ದು, ನೆರೆ ರಾಜ್ಯವಾದ ತಮಿಳು ನಾಡಿನಲ್ಲಿ ಸಾಕಷ್ಟು ನೀರು ಸಂಗ್ರಹವಿರಬೇಕಾದರೆ ನಮ್ಮ ಕಾವೇರಿ ನೀರನ್ನು ಅವರ ಹಕ್ಕಾಗಿ ಕೇಳುವುದು ನ್ಯಾಯಸಮ್ಮತವಾದದ್ದಲ್ಲ." ಎಂದಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಕೂಡಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಉತ್ತಮ ಮಳೆಯಿಂದ ತಮಿಳು ನಾಡಿಗೆ ನೀರಿನ ಅವಶ್ಯಕತೆ ಇರದ ಕಾರಣ ಹಾಗೂ ನಮಗೆ ನೀರಿನ ಅವಶ್ಯಕತೆ ಹೆಚ್ಚು ಇರುವುದರಿಂದ ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ಪ್ರಾಧಿಕಾರಕ್ಕೆ ತಿಳಿಸಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ಸಲಹೆ ನೀಡಿದ್ದಾರೆ.
ಕಾನೂನು ತಂಡ ನಿಷ್ಕ್ರಿಯ
ಕಾವೇರಿ ಪರ ಹೋರಾಟ ಮಾಡುತ್ತಿರುವ ನಮ್ಮ ಕಾನೂನಿನ ತಂಡ ಬಹುತೇಕ ನಿಷ್ಕ್ರಿಯವಾಗಿದೆ. ಗ್ರೌಂಡ್ ರಿಯಾಲಿಟಿಯನ್ನು ನ್ಯಾಯಾಲಯದ ಸಮಕ್ಷಮಕ್ಕೆ ತೋರಿಸುವುದಲ್ಲಿ ಬಹುತೇಕ ವಿಫಲವಾಗಿದೆ. ಕಾನೂನು ಸಚಿವರು, ಮುಖ್ಯಮಂತ್ರಿಗಳು ಇದರ ಬಗ್ಗೆ ಕೂಡಲೇ ಗಮನಹರಿಸಿ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಹೇಳಿದ್ದೇನು?
ಡಿಸೆಂಬರ್ 31 ರವರೆಗೆ ಬಿಳಿಗುಂಡ್ಲು ಅಂತರ-ರಾಜ್ಯ ನೀರಿನ ಮಾಪಕದಲ್ಲಿ ದಿನಕ್ಕೆ 3,128 ಕ್ಯೂಸೆಕ್ ಮತ್ತು 2024 ರ ಜನವರಿಯ ಸಂಪೂರ್ಣ ತಿಂಗಳಲ್ಲಿ ದಿನಕ್ಕೆ 1,030 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ. ಬರದಿಂದ ತತ್ತರಿಸುತ್ತಿರುವ ರಾಜ್ಯಕ್ಕೆ ಇದು ಆಘಾತವಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ ನೀರು ಮತ್ತು ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ನಡೆಸಿತು. ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕವು ಅಂತರ-ರಾಜ್ಯ ಸಂಪರ್ಕ ಬಿಂದು ಬಿಳಿಗುಂಡ್ಲುನಲ್ಲಿ ನಿಗದಿತ ಪ್ರಮಾಣದ ಹರಿವನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ಆಧಾರದ ಮೇಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.
ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ವಾದಿಸಿದ ಕರ್ನಾಟಕ, ರಾಜ್ಯದ ನಾಲ್ಕು ಕಾವೇರಿ ಜಲಾನಯನ ಜಲಾಶಯಗಳು ಸಂಚಿತ ಒಳಹರಿವಿನಲ್ಲಿ 52.82% ಕೊರತೆಯನ್ನು ಎದುರಿಸುತ್ತಿವೆ ಎಂದು ಹೇಳಿದೆ. ತಮಿಳುನಾಡಿನ ಕುರುವಾಯಿ ಬೆಳೆ ಸೆಪ್ಟೆಂಬರ್ ಅಂತ್ಯಕ್ಕೆ ಕೊಯ್ಲಿಗೆ ಬಂದಿದ್ದು, ಡಿಸೆಂಬರ್ ಮೊದಲ ವಾರದ ಅಂತ್ಯಕ್ಕೆ ಸಾಂಬಾ ಬೆಳೆ ಕಟಾವಿಗೆ ಬಂದಿದೆ. ಹೀಗಾಗಿ ಈ ಬೆಳೆಗಳಿಗೆ ನೀರಿನ ಅವಶ್ಯಕತೆ ಇಲ್ಲ ಎಂದು ಕರ್ನಾಟಕ ವಾದ ಮಂಡಿಸಿತು. ಆದರೂ ರಾಜ್ಯದ ಮನವಿಗೆ ಯಾವ ಬೆಲೆಯೂ ಸಿಗಲಿಲ್ಲ.












Click it and Unblock the Notifications