ನಾಲ್ಕು ವಿಮಾನ ನಿಲ್ದಾಣದ ಕನಸು ನನಸಾಗೋಲ್ಲ!

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಾರ್ತಾ ಮತ್ತು ಮೂಲಭೂತ ಸೌಕರ್ಯ ಸಚಿವ ಸಂತೋಷ್ ಲಾಡ್, ಶಿವಮೊಗ್ಗ, ಗುಲ್ಬರ್ಗ, ಬಿಜಾಪುರ, ಹಾಸನ ವಿಮಾನ ನಿಲ್ದಾಣ ಸ್ಥಾಪನೆಯ ಸಹಭಾಗಿತ್ವ ವಹಿಸಿಕೊಳ್ಳಲು ಖಾಸಗಿ ಕಂಪನಿಗಳು ಮುಂದಾಗುತ್ತಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಯೋಜನೆ ಸ್ಥಗಿತಗೊಳ್ಳುವುದು ಬಹುತೇಕ ಖಚಿತವಾಗಿದೆ.
ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಖಾಸಗಿ ಕಂಪನಿಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಶೇ.50ರಷ್ಟು ಪ್ರಕ್ರಿಯೆ ನಂತರ ಸಂಸ್ಥೆ ಯೋಜನೆಯಿಂದ ಹಿಂದೆ ಸರಿದಿದೆ. ಆದ್ದರಿಂದ ನಾಲ್ಕು ವಿಮಾನ ನಿಲ್ದಾಣಗಳ ಪ್ರಸ್ತಾವನೆ ಕೈ ಬಿಟ್ಟಂತೆಯೇ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಒಂದು ವೇಳೆ ಖಾಸಗಿ ಕಂಪನಿಯೊಂದು ಗುಲ್ಬರ್ಗ, ಶಿವಮೊಗ್ಗ, ಬಿಜಾಪುರ, ಹಾಸನ ಜಿಲ್ಲೆಗಳ ವಿಮಾನ ನಿಲ್ದಾಣಗಳ ಸಂಸ್ಥೆ ಮುಂದಾಗಿ ಒಪ್ಪಂದ ಮಾಡಿಕೊಂಡರೆ ಆ ಯೋಜನೆ ಮುಂದುವರಿಸುವ ಸಾಧ್ಯತೆಯಿದೆ ಎಂದರು. ಕೆಲವು ದಿನಗಳ ಹಿಂದೆ ಸಹ ಸಚಿವ ಸಂತೋಷ್ ಲಾಡ್ ವಿಮಾನ ನಿಲ್ದಾಣ ಯೋಜನೆ ಕೈ ಬಿಡುವ ಬಗ್ಗೆ ಸುಳಿವು ನೀಡಿದ್ದರು. ಸದ್ಯ ಅದನ್ನೇ ಪುನರುಚ್ಚರಿಸಿದ್ದಾರೆ. ಆದ್ದರಿಂದ ಯೋಜನೆ ಸ್ಥಗಿತಗೊಳ್ಳುವುದು ಖಚಿತವಾಗಿದೆ.
ಸೆ.17ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಸಂತೋಷ್ ಲಾಡ್ ಗುಲ್ಬರ್ಗ, ಶಿವಮೊಗ್ಗ, ಬಿಜಾಪುರ, ಬಳ್ಳಾರಿ ಹಾಗೂ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳಲು ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ನಗರಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಲಾಭದಾಯಕವಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯವಿಲ್ಲ ಎಂದು ವಿಮಾನ ನಿಲ್ದಾಣ ಪ್ರಾಧಿಕಾರವೇ ಸರ್ಕಾರಕ್ಕೆ ವರದಿ ನೀಡಿದೆ. ಅಲ್ಲದೇ ಇಲ್ಲಿಯ ಭೂ ಸ್ವಾಧೀನ ಪ್ರಕ್ರಿಯೆ ಸಹ ಮುಗಿದಿಲ್ಲ. ಆದ್ದರಿಂದ ಯೋಜನೆಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು. (ಜಿಲ್ಲೆಗಳ ಮಿನಿ ಏರ್ ಪೋರ್ಟ್ ಕನಸು ದೂರ)
ಎರಡನೇ ಹಂತದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರ ಶಿವಮೊಗ್ಗ, ಬಳ್ಳಾರಿ, ಗುಲ್ಬರ್ಗ, ಬಿಜಾಪುರ ಮತ್ತು ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಜಾರಿಗೆ ತಂದಿತ್ತು. ಸದ್ಯ ಖಾಸಗಿ ಸಹಭಾಗಿತ್ವ ದೊರೆಯದ ಕಾರಣ ಕಾಂಗ್ರೆಸ್ ಸರ್ಕಾರ ಯೋಜನೆ ಸ್ಥಗಿತಗೊಳಿಸಲು ಚಿಂತನೆ ನಡೆಸುತ್ತಿದೆ.












Click it and Unblock the Notifications