ವರವರ ರಾವ್ ಬಂಧನ ಮಾಡುವುದಿಲ್ಲ-ಹೈಕೋರ್ಟ್‌ಗೆ ಸರ್ಕಾರದ ಹೇಳಿಕೆ
ಬೆಂಗಳೂರು ಮಾ.25. 2005 ರ ನಕ್ಸಲರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿಯ ನ್ಯಾಯಾಲಯವು ಹೊರಡಿಸಿದ ಜಾಮೀನು ರಹಿತ ವಾರಂಟ್ (ಎನ್ ಬಿಡಬ್ಲೂ)ಆಧಾರದ ಮೇಲೆ ತೆಲುಗು ಕವಿ ಮತ್ತು ಹೋರಾಟಗಾರ ವರವರ ರಾವ್ ಅವರನ್ನು ಬಂಧಿಸುವುದಿಲ್ಲ ಎಂದು ರಾಜ್ಯ ಸರ್ಕಾರ, ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಮಧುಗಿರಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದರೂ ಸಹ ಮುಂಬೈನ ನ್ಯಾಯಾಲಯದಿಂದ ಅನುಮತಿ ಪಡೆಯುವವರೆಗೆ ವರವರರಾವ್ ಅವರ ಬಂಧನ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದೆ.
ಮಧುಗಿರಿ ಸೆಷನ್ಸ್ ನ್ಯಾಯಾಲಯ ತಮ್ಮ ವಿರುದ್ಧ 2022ರ ಫೆ.11ರಂದು ಹೊರಡಿಸಿದ್ದ ಜಾಮೀನು ರಹಿತ ಬಂಧನ ವಾರೆಂಟ್ ಅನ್ನು ವರವರರಾವ್ ಆದೇಶವನ್ನು ಪ್ರಶ್ನಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠದ ಮುಂದೆ ಸರ್ಕಾರ ಈ ಭರವಸೆ ನೀಡಿದೆ.

ಮಧುಗಿರಿ ಸೆಷನ್ಸ್ ನ್ಯಾಯಾಲಯ ಹಿಂದೆ ನೀಡಲಾದ ಜಾಮೀನು ರಹಿತ ಬಂಧನ ವಾರೆಂಟ್ ಅನ್ನು ವಾಪಸ್ ಪಡೆಯಬೇಕೆನ್ನುವ ಮನವಿಯನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ, 25, 000 ರೂ. ದಂಡ ವಿಧಿಸುವಾಗ ಅವರ ವಿರುದ್ಧ ಹೊಸದಾಗಿ ಜಾಮೀನು ರಹಿತ ಬಂಧನ ವಾರೆಂಟ್ ಅನ್ನು ಸಹ ಹೊರಡಿಸಿತು.
ವರವರ ರಾವ್ ಪರ ವಕೀಲರು, ಮುಂಬೈನ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣಗಳ ವಿಶೇಷ ನ್ಯಾಯಾಲಯದ ವ್ಯಾಪ್ತಿಯನ್ನು ತೊರೆಯದಂತೆ ಬಾಂಬೆ ಹೈಕೋರ್ಟ್ ಷರತ್ತು ವಿಧಿಸಿರುವುದರಿಂದ ಮಧುಗಿರಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ವಾದಿಸಿದ್ದರು. ಅಲ್ಲದೆ, ಭೀಮಾ-ಕೋರೆಂಗಾವ್ ಹಿಂಸಾಚಾರ ಪ್ರಕರಣದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ರಾವ್ ಅವರಿಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿ, ಮಧುಗಿರಿ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸಲು ಅವರನ್ನು ಹಾಜರುಪಡಿಸಲು ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ರಾಜ್ಯ ಪೊಲೀಸರು ಬಾಂಬೆ ಹೈಕೋರ್ಟ್ ಅಥವಾ ಮುಂಬೈನ ಎನ್‌ಐಎ ನ್ಯಾಯಾಲಯಕ್ಕೆ ಮೊರೆ ಹೋಗಲಿದ್ದಾರೆ ಎಂದು ತಿಳಿಸಿದರು.
ಆ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವರವರ ರಾವ್ ಅವರ ಅರ್ಜಿಯನ್ನು ವಿಲೇವಾರಿ ಮಾಡಿತು.
ಪ್ರಕರಣದ ಹಿನ್ನೆಲೆ:
2005ರ ಫೆಬ್ರವರಿ 5 ರಂದು ಚಿಕ್ಕಮಗಳೂರು ಜಿಲ್ಲೆಯ ಮೆಣಸಿನಹಾಡ್ಯದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್‌ನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಅದೇ ವರ್ಷ ಫೆಬ್ರವರಿ 10ರಂದು ನಕ್ಸಲರು ತುಮಕೂರಿನ ಪಾವಗಡದ ವೆಂಕಟಮ್ಮನಹಳ್ಳಿ ಶಾಲೆ ಬಳಿ ದಾಳಿ ಮಾಡಿದ್ದರು. ಘಟನೆಯಲ್ಲಿ 7 ಕೆಎಸ್ಆರ್ ಪಿ ಪೊಲೀಸರು ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಕವಿ ವರವರ ರಾವ್ ಅವರನ್ನು ಆರೋಪಿಯನ್ನಾಗಿಸಲಾಗಿದೆ.
ಮಧುಗಿರಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 21ರಂದು ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ನ್ಯಾಯಾಲಯದ ಎದುರು ಹಾಜರಾಗಲು ಸಾಧ್ಯವಿಲ್ಲ. ಆದ್ದರಿಂದ, ತಮ್ಮ ವಿರುದ್ಧ ಹೊರಡಿಸಿರುವ ಬಂಧನ ವಾರಂಟ್ ರದ್ದುಪಡಿಸಬೇಕು ಮತ್ತು ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಾಗಲು ಅವಕಾಶ ನೀಡಬೇಕು ಎಂದು ವರವರ ರಾವ್ ಅರ್ಜಿಯಲ್ಲಿ ಮನವಿ ಮಾಡಿದ್ದರು.












Click it and Unblock the Notifications