ತೆರಿಗೆ ಕಟ್ಟುವ ಕುಟುಂಬದವರನ್ನು ಗೃಹಲಕ್ಷ್ಮೀ ಯೋಜನೆಗೆ ಸೇರಿಸಲ್ಲ: ಸಚಿವೆ
ಬೆಂಗಳೂರು, ಜೂನ್ 9: ತೆರಿಗೆ ಪಾವತಿಸುವ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ 2,000 ರೂಪಾಯಿ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಹಿಳೆಯರು ಅವರ ಪತಿ ತೆರಿಗೆ ಪಾವತಿಸುತ್ತಿದ್ದರೆ ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ 2,000 ರೂ.ಗೆ ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರ ಈ ಹಿಂದೆ ನಿರ್ದಿಷ್ಟಪಡಿಸಿದೆ. ಯಜಮಾನಿಯ ಮಕ್ಕಳು ತೆರಿಗೆ ಪಾವತಿಸಿದರೆ ಆ ಕುಟುಂಬಕ್ಕೆ ಗೃಹಲಕ್ಷ್ಮೀ ಯೋಜನೆ ಅನ್ವಯವಾಗುತ್ತದೆ. ಪತಿ, ಪತ್ನಿ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿಸಿದರೆ ಯೋಜನೆ ಅನ್ವಯಿಸಲ್ಲ. ಈ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದಿದ್ದಾರೆ.

ಈಗ ಮಕ್ಕಳು ತೆರಿಗೆ ಪಾವತಿಸಿದರೆ ಆ ಕುಟುಂಬಕ್ಕೆ ಗೃಹಲಕ್ಷ್ಮೀ ಯೋಜನೆ ಸಿಗಲ್ಲ. ಗೃಹ ಲಕ್ಷ್ಮೀ ಯೋಜನೆ ಅಡಿ ಮನೆಯೊಡತಿಗೆ 2 ಸಾವಿರ ರೂಪಾಯಿ ಸಿಗಲ್ಲ. ಬಿಪಿಎಲ್ ಕಾರ್ಡ್ ಇಲ್ಲದ ಮಹಿಳೆಯರಿಗೂ ಯೋಜನೆ ವಿಸ್ತರಣೆಗೆ ಚಿಂತನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಹಲವರು ಈಗ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅಧಿಕಾರಿಗಳು ಸುಖಾಸುಮ್ಮನೆ ಅರ್ಜಿ ತಿರಸ್ಕರಿಸುವಂತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಸರ್ಕಾರಿ ನೌಕರರಿಗೆ ಯೋಜನೆ ಸಿಗಲ್ಲ ಎಂಬ ಪ್ರಶ್ನೆಗೆ ಯಾರಿಗೆ ಉಪಯೋಗ ಆಗಬೇಕು ಅವರಿಗೆ ಯೋಜನೆ ಸಿಗಲಿದೆ. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಹಣ ಕೊಡ್ತೀವಿ ಅಂತ ಹೇಳಿದ್ದರು. ಅವರನ್ನ ಕೇಳಿ ಎಂದು ಟಾಂಗ್ ನೀಡಿದರು. ಗೃಹಲಕ್ಷ್ಮೀ ಯೋಜನೆಗೆ ಆನ್ಲೈನ್ ಮತ್ತು ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿಯಲ್ಲಿ ನಮೂದಿಸಿರುವ ಕಾಲಂ ವಿಚಾರ ಸಿಎಂ ಗಮನಕ್ಕೆ ತಂದಿದ್ದೇವೆ. ವೋಟರ್ ಐಡಿ, ಪಾಸ್ ಬುಕ್ ಸಂಖ್ಯೆ ಬೇಡವೆಂದು ಸಿಎಂ ಹೇಳಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಬಗ್ಗೆ ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಗೃಹಲಕ್ಷ್ಮೀ ಯೋಜನೆ ಅನ್ವಯವಾಗಲಿದೆ. ತೆರಿಗೆ ಪಾವತಿದಾರರು, ಜಿಎಸ್‌ಟಿ ನೋಂದಣಿದಾರರಿಗೆ ಯೋಜನೆ ಇಲ್ಲ. ಬಾಡಿಗೆದಾರರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತೆ ಎಂದು ತಿಳಿಸಿದ್ದರು.












Click it and Unblock the Notifications