ಮಠ ಮಸೂದೆ ವಾಪಸ್ ಪಡೆಯಲು ವೀರಶೈವರ ಆಗ್ರಹ
ಬೆಂಗಳೂರು, ಡಿ. 26 : ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ 2014ನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಸರ್ಕಾರವನ್ನು ಒತ್ತಾಯಿಸಿದೆ. ಕೆಪಿಎಸ್‌ಸಿ ಸದಸ್ಯರ ನೇಮಕಾತಿಯಲ್ಲಿಯೂ ವೀರಶೈವರಿಗೆ ಸ್ಥಾನ ನೀಡಿಲ್ಲ ಎಂದು ಮಹಾಸಭಾ ಅಸಮಾಧಾನ ವ್ಯಕ್ತಪಡಿಸಿದೆ.
ಅಖಿಲ ಭಾರತ ವೀರಶೈವ ಮಹಾಸಭಾ (ರಿ)ದ ಹಿರಿಯ ಉಪಾಧ್ಯಕ್ಷರಾದ ಎನ್. ತಿಪ್ಪಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ಮಠಗಳು ಭಕ್ತರ ಆಸ್ತಿ, ಮಠಗಳು ಭಕ್ತರ ನೆರವಿನಿಂದ ಹಾಗೂ ಭಕ್ತರ ಒಳಿತಕ್ಕಾಗಿ ನಡೆಯುತ್ತಿವೆಯೇ ಹೊರತು ಸರ್ಕಾರದ ಮರ್ಜಿಯಿಂದಲ್ಲ ಎಂದು ತಿಳಿಸಿದ್ದಾರೆ. [ಮಠಗಳಿಗೆ ಮೂಗುದಾರ ಹಾಕುವ ಮಸೂದೆ ವಾಪಸ್!]

ಮಠಗಳು ಸಾರ್ವಜನಿಕವಾಗಿ ಸಲ್ಲಿಸುತ್ತಿರುವ ಸೇವೆಗಳು ತಮ್ಮ ಗಮನಕ್ಕೂ ಬಂದಿರುತ್ತವೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದು, ಮಠಗಳ ಸೇವೆ ಅದ್ಭುತ ಹಾಗೂ ಅವಿರತ. ಈ ಮಠಗಳ ವಿಷಯದಲ್ಲಿ ಸರ್ಕಾರ ಕೈಹಾಕುವ ಅಗತ್ಯವೇನಿತ್ತು? ಎಂದು ಮಹಾಸಭಾ ಪ್ರಶ್ನಿಸಿದೆ.
ಮಹಾಸಭಾದ ಅಧ್ಯಕ್ಷರೂ ಹಾಗೂ ತಮ್ಮ ಸರ್ಕಾರದಲ್ಲಿ ಸಚಿವರಾಗಿರುವ ಡಾ. ಶಾಮನೂರು ಶಿವಶಂಕರಪ್ಪನವರು ಮಸೂದೆಯನ್ನು ವಾಪಾಸ್ ಪಡೆದು ಮುಂದಾಗುವ ಅನಾವಶ್ಯಕ ಅನಾಹುತಗಳನ್ನು ತಪ್ಪಿಸಬೇಕೆಂದು ತಮ್ಮಲ್ಲಿ ವಿನಂತಿಸಿದ್ದಾರೆ. [ಮಠಗಳಿಗೆ ಮೂಗುದಾರ, ಸಚಿವರ ಸ್ಪಷ್ಟನೆಗಳು]
ಮಸೂದೆ ವಾಪಸ್ ಪಡೆಯುತ್ತೇವೆ ಎಂದು ನೀವು ಹೇಳಿದ್ದೀರಿ. ಆದರೆ, ಇನ್ನೂ ವಾಪಸ್ ಪಡೆದಿಲ್ಲ. ದಯವಿಟ್ಟು ತಕ್ಷಣ ಮಸೂದೆ ವಾಪಾಸ್ ಪಡೆದು ಮುಂದೆ ನಡೆಯಬಹುದಾದ ಅನಾಹುತ/ಅಶಾಂತಿಯನ್ನು ತಪ್ಪಿಸಬೇಕಾಗಿ ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವೀರಶೈವ-ಲಿಂಗಾಯತ ಧರ್ಮ ಎಂದೂ ಯಾರಿಗೂ ಅನಾವಶ್ಯಕವಾಗಿ ತೊಂದರೆ ಕೊಟ್ಟಿಲ್ಲ, ಕೊಡುವುದಿಲ್ಲ. ಶತಶತಮಾನಗಳಿಂದಲೂ ಶಾಂತಿ, ಧರ್ಮ, ನ್ಯಾಯ, ನೀತಿಯನ್ನು ಪಾಲಿಸುತ್ತಲೇ ಬಂದಿದೆ. ವಿನಾಕಾರಣ ಆ ಧರ್ಮಕ್ಕೆ ತೊಂದರೆಯಾದರೆ ಆಗುವ ಪರಿಣಾಮ ಅಗಾಧವಾದದ್ದು. ತಮಗೆ ಇದೆಲ್ಲದರ ಪರಿಚಯವೂ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. [ಮಠಗಳ ಮೇಲೆ ಹಿಡಿತಕ್ಕೆ ಸಜ್ಜಾದ ಸರ್ಕಾರ]
ಜನವರಿ 4ರಂದು ಮಹಾಸಭಾದ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದ್ದು, 13 ಸಾವಿರಕ್ಕೂ ಹೆಚ್ಚು ಸದಸ್ಯರು ಹಾಗೂ ನೂರಾರು ಮಠಾಧೀಶರೂ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಯಾವ ವಿಷಯಗಳ ಬಗ್ಗೆ ಚರ್ಚೆಯಾಗಬಹುದೆಂದು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಯಾವುದೂ ವಿನಾಕಾರಣ ವಿಕೋಪಕ್ಕೆ ಹೋಗುವುದಕ್ಕೆ ಮುಂಚೆ ಮಸೂದೆ ವಾಪಸ್ ಪಡೆಯಬೇಕು ಎಂದು ವಿನಂತಿಸಲಾಗಿದೆ.
ಕೆಪಿಎಸ್‌ಸಿ ನೇಮಕ : ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಶಿಫಾರಸು ಕಳಿಸಲಾಗಿದೆ. ಇದು ಒಂದು ಬಹುಮುಖ್ಯವಾದ ಮತ್ತು ಎಲ್ಲಾ ಜನಾಂಗದವರಿಗೆ ನ್ಯಾಯ ಒದಗಿಸಬೇಕಾದ ಸಂಸ್ಥೆ. ರಾಜ್ಯದ ಸುಮಾರು 2 ಕೋಟಿ ವೀರಶೈವ-ಲಿಂಗಾಯತರ ಹಿತಕಾಪಾಡಲು ಒಬ್ಬ ವೀರಶೈವ-ಲಿಂಗಾಯತ ಸದಸ್ಯ ತಮಗೆ ದೊರಕಲಿಲ್ಲವೇ? ಇದು ಏನನ್ನು ತೋರಿಸುತ್ತದೆ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.












Click it and Unblock the Notifications