Yatnal: ಹೊಸ ಪಕ್ಷ ಕಟ್ತಾರಾ ಹಿಂದುತ್ವದ ಫೈರ್ ಬ್ರ್ಯಾಂಡ್ ಯತ್ನಾಳ್?
ಬೆಂಗಳೂರು, ಮಾರ್ಚ್ 28: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಸ್ವಪಕ್ಷೀಯರ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸುತ್ತಲೇ ಸದಾ ಸುದ್ದಿಯಲ್ಲಿರುತ್ತಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಅವರನ್ನ ಬಿಜೆಪಿ ಹೈಕಮಾಂಡ್ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಹಿಂದುತ್ವ ಫೈರ್ ಬ್ರ್ಯಾಂಡ್ ಆಗಿದ್ದ ಯತ್ನಾಳ್ ಅವರ ಪರಿಸ್ಥಿತಿ ಇದೀಗ ಅತಂತ್ರವಾಗಿದೆ.
ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದ ಇಲ್ಲಿಯವರಗೂ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಾಲು ಸಾಲು ಆರೋಪಗಳನ್ನ ಮಾಡುತ್ತಾ. ಬಹಿರಂಗವಾಗಿಯೇ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಂದಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದಿಂದ ವಿಜಯೇಂದ್ರ ಅವರನ್ನ ಕೆಳಗಿಳಿಸಲು ಬಣ ಕಟ್ಟಿಕೊಂಡಿದ್ದ ಯತ್ನಾಳ್‌ಗೆ ಭಾರೀ ಹಿನ್ನಡೆಯಾಗಿದೆ.

ತಮ್ಮದೇ ಬಣ ಕಟ್ಟಿಕೊಂಡು ಯಡಿಯೂರಪ್ಪ ಕುಟುಂಬದ ವಿರುದ್ಧ ಸಾಲು ಸಾಲು ಆರೋಪಗಳನ್ನ ಯತ್ನಾಳ್ ಮಾಡಿದ್ದರು. ಅಲ್ಲದೇ ರಾಜ್ಯ ರಾಜಕೀಯದ ಬೆಳವಣಿಗೆ ಬಿಜೆಪಿ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಯತ್ನಾಳ್ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ ಪರಿಣಾಯ ಪಕ್ಷದ ಶಿಸ್ತು ಕಮಿಟಿಗೆ ಎರಡು ಬಾರಿ ಎಚ್ಚರಿಯನ್ನ ನೀಡಿ ನೋಟಿಸ್ ನೀಡಿತ್ತು. ಆದರೂ ಸಹ, ಯತ್ನಾಳ್ ಸೈಲೆಂಟ್ ಆಗದ ಹಿನ್ನೆಲೆ, ಇದೀಗ ಅವರನ್ನ ಪಕ್ಷದಿಂದ ಹೊರ ಹಾಕಿದೆ.
6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿರುವುದನ್ನ ಯತ್ನಾಳ್‌ಗೆ ಅರಗಿಸಿಕೊಳ್ಳಲಾಗಿಲ್ಲ. ಇತ್ತ ಹಿಂದುತ್ವದ ಹೆಸರಿನಲ್ಲಿ ಮುಸ್ಲಿಂರ ವಿರುದ್ಧ ಭಾಷಣ ಮಾಡುತ್ತಿದ್ದ ಯತ್ನಾಳ್ ಅವರಿಗೆ ಇದೀಗ ರಾಜಕೀಯದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಮುಂದಿನ ಭವಿಷ್ಯದ ಪ್ರಶ್ನೆಯಾಗಿದ್ದು, ಯತ್ನಾಳ್ ಅವರು ಹೊಸ ಪಕ್ಷ ಸ್ಥಾಪಿಸುತ್ತಾರಾ ಅಥವಾ ಬಿಜೆಪಿಗೆ ಮರುಳುತ್ತಾರಾ? ಅಥವಾ ಕಾಂಗ್ರೆಸ್ ಬಾಗಿಲು ತಟ್ಟುತ್ತಾರಾ? ಎಂಬ ಚರ್ಚೆ ನಡೆಯುತ್ತಿದೆ.
ಈಗಾಗಲೇ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಹೈಕಮಾಂಡ್‌ಗೆ ಟಾಂಗ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕುಟುಂಬ ರಾಜಕೀಯದ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಯತ್ನಾಳ್ ಹಂಚಿಕೊಂಡಿದ್ದಾರೆ. ಜೆ.ಪಿ ನಡ್ಡಾ ಅವರು, ದೇಶದ ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶದ ರಾಜ್ಯಗಳಲ್ಲಿನ ಕುಟುಂಬ ರಾಜಕೀಯದ ಬಗ್ಗೆ ಉದಾಹರಣೆ ನೀಡಿರುವ ವಿಡಿಯೋ ಇದಾಗಿದ್ದು. ಇದರಲ್ಲಿ ಜೆ.ಪಿ ನಡ್ಡಾ ಅವರು ಇನ್ನೆಷ್ಟು ದಿನ ಕುಟುಂಬ ರಾಜಕೀಯ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಬಿಜೆಪಿ ಹೈಕಮಾಂಡ್ ಅನ್ನು ಪ್ರಶ್ನೆ ಮಾಡುವುದಕ್ಕೆ ಇಚ್ಛಿಸುತ್ತೇನೆ. ಭ್ರಷ್ಟಾಚಾರ, ಕುಟುಂಬ ರಾಜಕೀಯ ಹಾಗೂ ಸ್ವಜನ ಪಕ್ಷಪಾತದಲ್ಲಿ ನಿಮ್ಮ ನಿಲುವೇನು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಜೆ.ಪಿ ನಡ್ಡಾ ಅವರ ವಿಡಿಯೋ ಹಂಚಿಕೊಂಡಿರುವ ಅವರು, This is highly relevant at this moment! ಎಂದು ಒಂದೇ ಸಾಲಿನಲ್ಲಿ ಟಾಂಗ್ ಕೊಟ್ಟಿದ್ದಾರೆ.
ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಚಾಟಿಸಿದ ಹಿನ್ನೆಲೆ ಪಕ್ಷದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ವಪಕ್ಷಿಯರ ವಿರುದ್ಧ ಈ ಹಿಂದೆ ರೆಬೆಲ್ ಆಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಪ್ರಯತ್ನದಲ್ಲಿದ್ದಾರಾ ಎಂಬ ಪ್ರಶ್ನೆಗೆ ಯತ್ನಾಳ್ ಉತ್ತರಿಸಿದ್ದು, ಹಿಂದುತ್ವದಿಂದ ದೂರ ಸರಿದಿರುವ ಬಿಜೆಪಿಯನ್ನು ಮತ್ತೆ ಹಿಂದುತ್ವಕ್ಕೆ ಮರಳಿ ತರುತ್ತೇವೆ. ಹೊಸ ಪಕ್ಷ ಕಟ್ಟುವುದಿಲ್ಲ ಎಂದು ಹೇಳಿದರು. ಪ್ರಾದೇಶಿಕ ಪಕ್ಷ ಹುಟ್ಟುಹಾಕುವ ಚಿಂತನೆಗಳಿವೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ನಾವು ಹೊಸ ಪಕ್ಷವನ್ನು ಕಟ್ಟುವುದಿಲ್ಲ. ಬದಲಿಗೆ ಹಿಂದುತ್ವದಿಂದ ದೂರ ಸರಿದಿರುವ ಬಿಜೆಪಿಯನ್ನು ಮತ್ತೆ ಹಿಂದುತ್ವಕ್ಕೆ ಮರಳಿ ತರುತ್ತೇವೆಂದು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ಅವನತಿ: ಯತ್ನಾಳ್
ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈ ಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ. ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ ಎಂದು ಯತ್ನಾಳ್ ಹೇಳಿದ್ದಾರೆ.
ಪಕ್ಷದ ವಿರುದ್ದ ಬಹಿರಂಗವಾಗಿ ಮಾತನಾಡಿ ಹಾಗೂ ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟನೆ ಮಾಡದೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರಿಗೆ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ. ಕಲ್ಯಾಣ ಕರ್ನಾಟಕದಲ್ಲಿ ಸಧೃಡವಾಗಿದ್ದ ಪಕ್ಷ ಲೋಕ ಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ 'ಅಡ್ಜಸ್ಟ್ಮೆಂಟ್ ರಾಜಕಾರಣದಿಂದ' ಎಂದು ಪಕ್ಷದ ಪ್ರಮುಖರು ವಿಶ್ಲೇಷಿಸಲಿ.
ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಪ್ಪ, ಡಾ ವಿ.ಎಸ.ಆಚಾರ್ಯರು ಸೇರಿದಂತೆ ಪಕ್ಷದ ಅನೇಕ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿದ ಪರಿಣಾಮದಿಂದಲೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದ್ದು. ಬಿಡಿಗಾಸಿಲ್ಲದೇ, ಕಾರ್ಯಕರ್ತರ ಓಡಾಟ, ಉಪಹಾರಕ್ಕೂ ಹಣವಿಲ್ಲದಿರುವ ಕಾಲಘಟ್ಟದಲ್ಲಿ ದಿವಂಗತ ಮಲ್ಲಿಕಾರ್ಜುನಪ್ಪನವರು ತಮ್ಮ ಸ್ವಂತ ಸಂಪನ್ಮೂಲದಿಂದ ಪಕ್ಷವನ್ನು ಮುನ್ನೆಡೆಸಿ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಿ ಸಂಘಟನೆಗೆ ಕಾರಣವಾದರು. ಮಾತು ಕಡಿಮೆಯಾದರೂ ತಮ್ಮ ಕೆಲಸದಿಂದ ಕರಾವಳಿಯಲ್ಲಿ ಪಕ್ಷವನ್ನು ಸಂಘಟಿಸಿದ್ದು ಪಕ್ಷ ಮರೆಯಲಾಗದ ಮಾಣಿಕ್ಯ ಡಾ. ವಿ.ಎಸ್.ಆಚಾರ್ಯರು. ಆಯಕಟ್ಟಿನ ಸ್ಥಾನದಲ್ಲಿದ್ದರೂ ಆಚಾರ್ಯರ ಕುಟುಂಬದವರು ಯಾರೂ ಸಹ ರಾಜಕಾರಣಕ್ಕೆ ಬರಲಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ ಎಂದರು.
ಹಿಂದುತ್ವವಾದ ಬಗ್ಗೆ ರಾಜಿ ಮಾಡಿಕೊಳ್ಳದೆ, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದ ಈಶ್ವರಪ್ಪನವರನ್ನು ಹೊರಗಿಟ್ಟರು. ನಿಸ್ವಾರ್ಥ ಕಾರ್ಯಕರ್ತರು, ತನು-ಮನ-ಧನದಿಂದ ದುಡಿದ ಮುಖಂಡರಿಂದ ಪಕ್ಷದ ಸಂಘಟನೆಯಾಯಿತೇ ಹೊರತು ಸ್ವಯಂಘೋಷಿತ 'ಪೂಜ್ಯ' ರಿಂದಲ್ಲ. ರಾಜ್ಯದಲ್ಲಿ ಪ್ರ ಪ್ರಥಮ ಬಾರಿಗೆ ವಕ್ಫ್ ಹೋರಾಟಕ್ಕೆ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು ನಾವೇ, ವಾಲ್ಮೀಕಿ ಹಗರಣ, ದಲಿತರಿಗೆ SCSP/TSP ಅನುದಾನದ ದುರ್ಬಳಕೆಯನ್ನು ಖಂಡಿಸಿದ್ದು, ಹೋರಾಟ ರೂಪಿಸಿದ್ದು, ವಕ್ಫ್ ವಿರುದ್ಧ ನಾವು ಮಾಡಿದ್ದ ಮಾಹಿತಿ ಸಂಗ್ರಹಕ್ಕೆ ಜೆ.ಪಿ.ಸಿ ಅಧ್ಯಕ್ಷರಾದ ಶ್ರೀ ಜಗದಂಬಿಕಾ ಪಾಲ್ ಅವರು ಪ್ರಶಂಸಿಸಿದ್ದರು.
ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯನ್ನು, ಕೃಷ್ಣ ಯೋಜನೆಯ ವಿಳಂಬದ ಬಗ್ಗೆ ಧ್ವನಿ ಎತ್ತಿದ್ದು ನಾವೇ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಲು ಸ್ಪರ್ಧಾರ್ಥಿಗಳ ಜೊತೆಗೆ ನಿಂತಿದ್ದು ನಾವೇ. ಬಾಣಂತಿಯರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು ನಾನೇ. ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳು ಸೂಚಿಸಿದಕ್ಕೆ ನಮ್ಮ ನಿಲುವು ಕೆಲವರಿಗೆ 'ಅಪಥ್ಯ' ವಾಗಿದೆ.












Click it and Unblock the Notifications