ಜಯಲಲಿತಾ ಮೇಲ್ಮನವಿ ತೀರ್ಪು ಏ.30ಕ್ಕೆ?
ಬೆಂಗಳೂರು, ಏ. 27 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ವಿಶೇಷ ನ್ಯಾಯಪೀಠ ಏ.30ರಂದು ಪ್ರಕಟಿಸುವ ಸಾಧ್ಯತೆ ಇದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಈಗಾಗಲೇ ಪೂರ್ಣಗೊಳಿಸಿದ್ದಾರೆ.
ಮೇ 1ರಿಂದ ಒಂದು ತಿಂಗಳ ಕಾಲ ಹೈಕೋರ್ಟ್‌ಗೆ ಬೇಸಿಗೆ ರಜೆ ಇದೆ. ಆದ್ದರಿಂದ, ಏ.30ರಂದು ತೀರ್ಪು ಪ್ರಕಟವಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಪ್ರಕರಣದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಪ್ರಕಟಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. [ಜಯಲಲಿತಾ ಕೇಸ್ ತೀರ್ಪು ಪ್ರಕಟಿಸಲು ಸುಪ್ರೀಂ ಒಪ್ಪಿಗೆ]

ಏ.15ರಂದು ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಪ್ರಕರಣದ ತೀರ್ಪು ನೀಡಲು ಇನ್ನೂ 15 ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದ್ದರು. ಪ್ರಕರಣದ ವಕೀಲರಾಗಿರುವವರು ಏ.30ರಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. [ಆಸ್ತಿಗಳಿಕೆ ಪ್ರಕರಣ, ಜಯಾ ತೀರ್ಪು ಕಾಯ್ದಿರಿಸಿದ ಕೋರ್ಟ್]
ಅಕ್ರಮ ಆಸ್ತಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖಂಡ ಅನ್ಬಳಗನ್ ಅವರು ನೀಡಿರುವ ಸಾಕ್ಷಿ ಹಾಗೂ ಇತ್ತೀಚಿನ ಮನವಿಯನ್ನು ಪರಿಗಣಿಸಿ ತೀರ್ಪು ಪ್ರಕಟಿಸಬಹುದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. 80 ಪುಟಗಳ ದಾಖಲೆಗಳನ್ನು ಅನ್ಬಳಗನ್ ಅವರು ಸೋಮವಾರ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಲ್ಲಿಸಿದ್ದಾರೆ.
ಮಂಗಳವಾರ ಸರ್ಕಾರದ ದಾಖಲೆ ಸಲ್ಲಿಕೆ : ಈ ಪ್ರಕರಣದ ಕುರಿತು ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಮಂಗಳವಾರ ಸರ್ಕಾರ ದಾಖಲೆಗಳನ್ನು ಸಲ್ಲಿಕೆ ಮಾಡಲಿದೆ. ಇದನ್ನು ಪರಿಶೀಲನೆ ಮಾಡಿದ ಬಳಿಕ ನ್ಯಾಯಮೂರ್ತಿಗಳು ಏ.30ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಏನಿದು ತೀರ್ಪು? : 2014ರ ಸೆ. 27ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ.ಕುನ್ಹ ಅವರು, ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಇಳವರಸಿ ಮತ್ತು ವಿ.ಎನ್.ಸುಧಾಕರನ್ ತಪ್ಪಿತಸ್ಥರು ಎಂದು ಆದೇಶಿದ್ದರು.
ಜಯಲಲಿತಾ ಅವರಿಗೆ 100 ಕೋಟಿ ಹಾಗೂ ಇತರರಿಗೆ ತಲಾ 10 ಕೋಟಿ ದಂಡ ಮತ್ತು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಜಯಲಲಿತಾ ಮತ್ತು ಇತರ ಮೂವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ವಿಶೇಷ ಈ ತೀರ್ಪನ್ನು ಪ್ರಶ್ನಿಸಿದ್ದರು, ಜಾಮೀನು ನೀಡುವಂತೆ ಮನವಿ ಮಾಡಿದ್ದರು.
ಸುಪ್ರೀಂಕೋರ್ಟ್ ಎಲ್ಲರಿಗೂ ಜಾಮೀನು ನೀಡಿತ್ತು ಮತ್ತು ಪ್ರಕರಣದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಲು ವಿಶೇಷ ಪೀಠವನ್ನು ರಚನೆ ಮಾಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿತ್ತು. ಆದರಂತೆ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕ ಸದಸ್ಯ ಪೀಠ ರಚನೆಯಾಗಿತ್ತು.












Click it and Unblock the Notifications