Dk Shivakumar: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ರಾಜೀನಾಮೆ ಕೊಡ್ತಾರಾ, ಮುಂದಿನ ಅಧ್ಯಕ್ಷ ಯಾರು ?
ಕರ್ನಾಟಕದ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ಭುತವಾದ ಸಾಧನೆ ಮಾಡಿದೆ. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಅವರು ರಾಜೀನಾಮೆ ಕೊಡಲಿದ್ದಾರೆ ಎನ್ನುವ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಈಚೆಗೆ ನಡೆದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಿರೀಕ್ಷೆಗೂ ಮೀರಿ ಗೆದ್ದಿದೆ. ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಮುಡಾ & ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಭ್ರಷ್ಟಾಚಾರ ಹಾಗೂ ಅವ್ಯವಹಾರದ ಆರೋಪಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿ ಬರ್ತಿದೆ. ಇಂತಹ ಗಂಭೀರ ಆರೋಪಗಳ ನಡುವೆಯೂ ಕಾಂಗ್ರೆಸ್ ಗೆದ್ದಿದೆ. ಆದರೆ, ಅದರ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ರಾಜೀನಾಮೆಯ ಬಗ್ಗೆ ಚರ್ಚೆಯಾಗುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪಾತ್ರ ತುಂಬಾ ದೊಡ್ಡದು. ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಮೇಕೆದಾಟು ಯೋಜನೆಯ ಬಗ್ಗೆ ಈ ಇಬ್ಬರು ನಾಯಕರು ತೀವ್ರವಾಗಿ ಹೋರಾಟ ನಡೆಸಿದ್ದರು. ಅಲ್ಲದೇ ಪೇ ಸಿಎಂ ಅಭಿಯಾನವು ರಾಷ್ಟ್ರದಾದ್ಯಂತ ಭಾರೀ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಜಂಟಿ ಹೋರಾಟವು ಸಾಕಷ್ಟು ಪ್ರಭಾವವನ್ನು ಬೀರಿತ್ತು.

ಆದರೆ, ಚುನಾವಣೆ ಫಲಿತಾಂಶದ ನಂತರ ಇಬ್ಬರು ನಾಯಕರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಆದರೆ, ಆ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಇನ್ನು ರಾಜ್ಯದಲ್ಲಿ ಒಬ್ಬರಿಗೆ ಒಂದು ಹುದ್ದೆ ಎನ್ನುವ ವಿಚಾರವು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಚರ್ಚೆಯಾಗುತ್ತಿದೆ. ಆದರೆ, ವಿವಿಧ ಕಾರಣಗಳಿಂದ ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಡಿ.ಕೆ ಶಿವಕುಮಾರ್ ಅವರು ರಾಜೀನಾಮೆ ಕೊಟ್ಟಿರಲಿಲ್ಲ.
ಇದೀಗ ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಹತ್ವದ ಉಪ ಚುನಾವಣ ಮುಕ್ತಾಯವಾದ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಎನ್ನುವ ವಿಷಯ ಚರ್ಚೆಯಾಗುತ್ತಿದೆ. ಎಲ್ಲವೂ ಅಂದಕೊಂಡಂತೆ ಆದರೆ, ಮುಂದಿನ ವರ್ಷ ಸಂಕ್ರಾಂತಿಯ ಒಳಗಾಗಿ, ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಉಪ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ ಶಿವಕುಮಾರ್ ಅವರು ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಕೆಪಿಸಿಸಿ ಮುಂದಿನ ಅಧ್ಯಕ್ಷ ಯಾರು ?
ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮುಂದೆ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಕೆಪಿಸಿಸಿ ಅಧ್ಯಕ್ಷ ಎನ್ನುವುದು ಜವಾಬ್ದಾರಿಯ ಹುದ್ದೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಈ ಹುದ್ದೆಯಲ್ಲಿ ಇರುವವರ ಪಾತ್ರ ಪ್ರಮುಖವಾಗಿರುತ್ತದೆ. ಇನ್ನು ಡಿ.ಕೆ ಶಿವಕುಮಾರ್ ಅವರು ರಾಜೀನಾಮೆ ಕೊಟ್ಟರೆ ಮುಂದೆ ಯಾರು ಅಧ್ಯಕ್ಷರಾಗಲಿದ್ದಾರೆ ಎನ್ನುವ ವಿಷಯವು ಚರ್ಚೆಯಾಗುತ್ತಿದೆ. ಇದೀಗ ಸಚಿವರಾದ ಈಶ್ವರ್ ಖಂಡ್ರೆ ಅಥವಾ ಸತೀಶ್ ಜಾರಕಿಹೊಳಿ ಅವರ ಹೆಸರು ಈ ವಿಷಯದಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ.
ಇನ್ನು ಈ ಬಗ್ಗೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ಕಾಂಗ್ರೆಸ್ ಹೈಕಮಾಂಡ್ ಮುಂದೆ ಸದ್ಯಕ್ಕೆ ಈ ವಿಚಾರ ಇಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ನಿರ್ಧಾರ ತೆಗೆದುಕೊಂಡರೆ ನೋಡೋಣ ಎಂದಷ್ಟೇ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರು ಸಮರ್ಥವಾಗಿ ನಡೆಸಿದ್ದರು. ಹೀಗಾಗಿ, ಮುಂದಿನ ದಿನಗಳಲ್ಲಿ ಯಾರು ಈ ಹುದ್ದೆಗೆ ಆಯ್ಕೆಯಾಗಲಿದ್ದಾರೆ ಎನ್ನುವ ಕೂತುಹಲವಿದೆ.












Click it and Unblock the Notifications