"ರಾಹುಲ್ ಗಾಂಧಿ ಹೈಕಮಾಂಡ್ ಆದ್ರೆ ಎಐಸಿಸಿ ಅಧ್ಯಕ್ಷ ಖರ್ಗೆ ಕೆಲಸವೇನು?"
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನನಗೇನೂ ಗೊತ್ತಿಲ್ಲ, ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ವಿಪಕ್ಷಗಳು ಖರ್ಗೆ ಅವರ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಅನ್ನು ದಲಿತ ವಿರೋಧಿ ಎಂದು ದೂರುತ್ತಿದೆ. ರಾಹುಲ್ ಗಾಂಧಿ ಹೈಕಮಾಂಡ್ ಆದರೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಕೆಲಸವೇನು? ಎಂದು ಜೆಡಿಎಸ್ ಪಕ್ಷ ಕೂಡ ಕೇಳಿದೆ.
ಕಾಂಗ್ರೆಸ್ ಪಕ್ಷ ದಲಿತರ ಬಗ್ಗೆ ತೋರುವ ಕಾಳಜಿ ಕೇವಲ ಬೂಟಾಟಿಕೆ. ಸಂವಿಧಾನ ಉಳಿಸುತ್ತೇವೆ ಎಂದು ಹಾದಿ ಬೀದಿಯಲ್ಲಿ ನಾಟಕ ಪ್ರದರ್ಶಿಸುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರೇ, ದಲಿತ ನಾಯಕರನ್ನು ಅಧ್ಯಕ್ಷ ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡರೆ ಸಾಕೇ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಯಾವುದೇ ಅಧಿಕಾರ, ಜವಾಬ್ದಾರಿ, ನಿರ್ಣಯ ಕೈಗೊಳ್ಳುವ ಸ್ವಾತಂತ್ರ್ಯ ನೀಡದೆ ಕೀಲು ಗೊಂಬೆ ಮಾಡಿಕೊಂಡಿರುವುದು ಕಾಂಗ್ರೆಸ್ ಢೋಂಗಿತನಕ್ಕೆ ನಿದರ್ಶನ ಎಂದು ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಪಕ್ಷಕ್ಕೆ ದಲಿತರು ಕೇವಲ ವೋಟ್ ಬ್ಯಾಂಕ್ ಅಷ್ಟೇ. ದಲಿತರನ್ನು ಉದ್ಧಾರ ಮಾಡುತ್ತೇವೆ ಎಂದು ಬಿಂಬಿಸಿಕೊಂಡೇ ಕಾಂಗ್ರೆಸ್ ಹಾಗೂ ನಕಲಿ ಗಾಂಧಿ ಕುಟುಂಬ ಅಂದಿನಿಂದ ಇಂದಿನವರೆಗೂ ಅಧಿಕಾರ ಅನುಭವಿಸುತ್ತಿದೆ. ರಾಹುಲ್ ಗಾಂಧಿ ಹೈಕಮಾಂಡ್ ಆದರೆ, ಎಐಸಿಸಿ ಅಧ್ಯಕ್ಷರ ಕೆಲಸವೇನು? ಅವರು ತೀರ್ಮಾನ ಕೈಗೊಳ್ಳಲು ಅಸಮರ್ಥರೇ? ಎಂದು ಪ್ರಶ್ನಿಸಿದೆ.
ಮಲ್ಲಿಕಾರ್ಜುನ್ ಖರ್ಗೆ ಸಾಹೇಬರೇ, ತಾವು ಕಾಂಗ್ರೆಸ್ ಪಕ್ಷದ ಅಧ್ಯಕ್ಷರೋ? ಅಥವಾ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯೋ? ಅಧ್ಯಕ್ಷರಾಗಿದ್ದರೂ ನಿಮಗೆ ಚಲಾಯಿಸಲು ಯಾವುದೇ ಅಧಿಕಾರ ಇಲ್ಲ ಎಂಬುದು ನಿಮ್ಮ ಈ ಅಸಹಾಯಕತೆಯ ಮಾತುಗಳಿಂದ ತಿಳಿಯುತ್ತದೆ. ತಾವೊಬ್ಬ "ರಬ್ಬರ್ ಸ್ಟಾಂಪ್ ಅಧ್ಯಕ್ಷ" ಎಂಬುದು ಸಾಬೀತಾಗುತ್ತಿದ್ದು, ಜೊತೆಗೆ ಕಾಂಗ್ರೆಸ್ ಪಕ್ಷದ ಗುಲಾಮಿತನವನ್ನು ಜಗಜ್ಜಾಹೀರುಗೊಳಿಸಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌ನಲ್ಲಿ ಪಾಳೆಗಾರಿಕೆ
ನಾನೇನೂ ಹೇಳಲ್ಲ, ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯು ಕಾಂಗ್ರೆಸ್ಸಿನಲ್ಲಿರುವ ಪಾಳೇಗಾರಿಕೆಯನ್ನು ತೋರಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷರಾಗಿದ್ದುಕೊಂಡು, ದೇಶದ ಪ್ರಭಾವಿ ಮತ್ತು ಹಿರಿಯ ದಲಿತ ನಾಯಕರಾಗಿದ್ದುಕೊಂಡು ಗುಲಾಮಿ ಮನಸ್ಥಿತಿಗೆ ಬಲಿಯಾಗಿರುವುದು ಖರ್ಗೆ ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದು ರಾಜ್ಯ ಬಿಜೆಪಿ ಕೂಡ ಖಂಡಿಸಿದೆ.
ಈ ಹಿಂದೆ ದೇಶದ ಪ್ರಧಾನಿಯನ್ನೇ "ಕಂಟ್ರೋಲ್" ಮಾಡುತ್ತಿದ್ದ ನಕಲಿ ಗಾಂಧಿ ಕುಟುಂಬ ಈಗ ಎಐಸಿಸಿ ಅಧ್ಯಕ್ಷರನ್ನೂ ಹಾಗೆಯೇ ನಡೆಸಿಕೊಳ್ಳುತ್ತಿದೆ. ಅಸಹಾಯಕರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್ಸಿನ ಬಣಗಳು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರೆ, ಖರ್ಗೆ ಅವರಾದರೂ ಏನು ಮಾಡೋದು? ಎಂದು ವ್ಯಂಗ್ಯ ಮಾಡಿದೆ.












Click it and Unblock the Notifications