Prajwal Revanna Case: ಪ್ರಜ್ವಲ್, ರೇವಣ್ಣರನ್ನು ಈವರೆಗೂ ಬಂಧಿಸದೇ ಇರಲು ಕಾರಣವೇನು?
ಬೆಂಗಳೂರು, ಮೇ 01: ಹಾಸನದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯ ಮಾತ್ರವಲ್ಲದೇ, ದೇಶದಾದ್ಯಂತ ಸಂಚಲನ ಮೂಡಿಸಿದೆ. ಈಗಾಗಲೇ ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚಿಸಲಾಗಿದ್ದು, ತನಿಖೆ ಕೂಡ ಆರಂಭವಾಗಿದೆ. ಪ್ರಕರಣದಲ್ಲಿ ಎ1 ಆರೋಪಿ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಎ2 ಆರೋಪಿ ಪ್ರಜ್ವಲ್ ರೇವಣ್ಣ ಎಂದು ದಾಖಲಿಸಲಾಗಿದೆ.
ಸದ್ಯ ತನಿಖೆ ನಡೆಯುತ್ತಿದ್ದು, ಪ್ರಕರಣ ಇಷ್ಟೊಂದು ಗಂಭೀರವಾಗಿದ್ದರೂ ಎ1 ಆರೋಪಿ ಹೆಚ್.ಡಿ ರೇವಣ್ಣ ಹಾಗೂ ಎ2 ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಯಾಕೆ ಬಂಧಿಸಿಲ್ಲ ಎನ್ನುವ ಪ್ರಶ್ನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಉತ್ತರ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸವಿರವಾಗಿ ಉತ್ತರಿಸಿರುವ ಅವರು, ಯಾರನ್ನೇ ಆದರೂ ಏಕಾಏಕಿ ಬಂಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾವೆಗಳು, ದೂರಿನಲ್ಲಿ ಏನು ಹೇಳಿರುತ್ತಾರೆ ಎಂಬುದೆಲ್ಲ ಮುಖ್ಯವಾಗುತ್ತವೆ. ಪ್ರಕರಣ ಯಾವ ಸೆಕ್ಷನ್ ಅಡಿಯಲ್ಲಿ ಬರುತ್ತದೆ? ಅದರಲ್ಲಿ ಬಂಧಿಸಲು ಅವಕಾಶ ಇದೆಯೇ? ಜಾಮೀನು ಪಡೆಯುವಂಥ ಪ್ರಕರಣವೇ? ಅಥವಾ ಜಾಮೀನು ಸಿಗದಂತಹ ಪ್ರಕರಣವೇ? ಈ ಅಂಶಗಳನ್ನೆಲ್ಲ ನೋಡಬೇಕಾಗುತ್ತದೆ ಎಂದು ಹೇಳಿದರು.
ಅಪರಾಧ ದಂಡಸಂಹಿತೆಯ (CRPC) ಸೆಕ್ಷನ್ 41ಎ ಅಡಿ ನೊಟೀಸ್ ಕೊಟ್ಟಿದ್ದಾರೆ. ಅದರಂತೆ, ಆರೋಪಿಗಳು 24 ಗಂಟೆಯ ಒಳಗೆ ಬಂದು ವಿಚಾರಣೆಗೆ ಹಾಜರಾಗಬೇಕು. ವಿಚಾರಣೆಗೆ ಹಾಜರಾಗದೇ ಹೋದರೆ ಎಸ್‌ಐಟಿ ತಂಡ ಮುಂದಿನ ಪ್ರಕ್ರಿಯೆ ಮಾಡಲಿದೆ. ನಾವು ಪ್ರಕರಣ ಬೆಳಕಿಗೆ ಬಂದ ತಕ್ಷಣ ಎಸ್‌ಐಟಿ ರಚನೆ ಮಾಡಿದೆವು. ಬೇಗ ತನಿಖೆ ಶುರುವಾಗಿದೆ. ಏನು ಮಾಡಿಲ್ಲ ಅಂತಾ ಹೇಳಲಾಗದು ಎಂದರು.
ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ನಾನು ಅದನ್ನು ಗಮನಿಸಿದೆ. ಆ ರೀತಿ ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವಂತಹದ್ದು ಏನೂ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಕ್ರಮ ಮುಂದುವರಿದಿದೆ. ಇದರಲ್ಲಿ ಬಹಳ ಜನರ ಜೀವನ ಕೂಡ ಇದೆ. ಹೀಗಾಗಿ ಇಷ್ಟ ಬಂದ ಹಾಗೆ ತನಿಖೆ ಮಾಡಲು ಆಗುವುದಿಲ್ಲ. ಹಾಗಾಗಿಯೇ ಎಸ್‌ಐಟಿ ರಚನೆ ಮಾಡಿದ್ದೇವೆ. ಎಸ್‌ಐಟಿ ತನಿಖೆ ಆರಂಭ ಮಾಡಿದ್ದಾರೆ. ನೋಟಿಸ್ ಕೊಟ್ಟಿದ್ದಾರೆ. ದೂರುದಾರರ ಹೇಳಿಕೆ ಪಡೆದುಕೊಂಡಿದ್ದಾರೆ. ಕ್ರಮ ಪ್ರಕಾರ ಎಸ್‌ಐಟಿ ತಂಡ ತನಿಖೆ ಮಾಡುತ್ತಿದೆ ಎಂದು ತಿಳಿಸಿದರು.












Click it and Unblock the Notifications