Get Updates
Get notified of breaking news, exclusive insights, and must-see stories!

ಚುನಾವಣೆ ಹೊತ್ತಲ್ಲೇ ಗಡಿ ಭಾಗಗಳಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದೇಕೆ..? ಅವರ ಹಿನ್ನಲೆ ಏನು?

ಮಡಿಕೇರಿ, ಮಾರ್ಚ್ 19: ಮೊದಲಿಗೆ ಹೋಲಿಸಿದರೆ ನಕ್ಸಲರ ಜಂಘಾಬಲ ಅಡಗಿ ಹೋಗಿದೆ. ಆದರೂ ಕೆಲವೊಮ್ಮೆ ಅಲ್ಲಲ್ಲಿ ಕಾಣಿಸಿಕೊಳ್ಳುವುದರ ಮೂಲಕ ನಾವಿನ್ನು ಫೀಲ್ಡ್ ನಲ್ಲಿದ್ದೇವೆ ಎಂಬ ಸಂದೇಶವನ್ನು ಸಾರುತ್ತಾ ಬರುತ್ತಿದ್ದಾರೆಯಾದರೂ ಲೋಕಸಭಾ ಚುನಾವಣೆ ಹೊತ್ತಲ್ಲಿ ಕಾಣಿಸಿಕೊಂಡಿರುವುದು ವಿಧ್ವಂಸಕ ಕೃತ್ಯಕ್ಕೆ ನಕ್ಸಲ್ ನಾಯಕ ವಿಕ್ರಂಗೌಡ ಸ್ಕೆಚ್ ಹಾಕುತ್ತಿದ್ದಾನಾ? ಎಂಬ ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿವೆ.

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದ ಕೂಜಿಮಲೆ ವ್ಯಾಪ್ತಿಯಲ್ಲಿ ನಕ್ಸಲರ ಚಲನವಲನ ಕಂಡು ಬಂದಿರುವುದು ಆತಂಕ ತಂದಿದೆಯಲ್ಲದೆ ನಕ್ಸಲ್ ವಿಶೇಷಪಡೆ ಅಲರ್ಟ್ ಆಗುವಂತೆ. ಮಾಡಿದೆ. ನಕ್ಸಲರು ಈಗಾಗಲೇ ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪದೇಶ ವ್ಯಾಪ್ತಿಯ ಗಡಿಪ್ರದೇಶದಲ್ಲಿದ್ದು ಕೊಂಡು ಹಲವು ಕುಕೃತ್ಯಗಳನ್ನು ನಡೆಸಿದ್ದು ಹಲವು ನಾಯಕರು ಹತರಾಗಿದ್ದರೆ, ಇನ್ನು ಕೆಲವರು ಜೈಲ್ ಸೇರಿದ್ದಾರೆ. ಇವರ ನಡುವೆ ಇನ್ನೊಂದಷ್ಟು ಮಂದಿ ಅಲ್ಲಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

Why Naxals Are Found In The Border Areas During Lok Sabha Elections

ಈಗ ಇಡೀ ದೇಶ ಚುನಾವಣೆಯ ಗುಂಗಿನಲ್ಲಿದೆ. ಹೀಗಿರುವಾಗ ನಕ್ಸಲರು ಪ್ರತ್ಯಕ್ಷರಾಗಿರುವುದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಇವರು ಯಾವಾಗ ಏನು ಮಾಡುತ್ತಾರೆಂಬುದನ್ನು ಹೇಳಲಾಗುವುದಿಲ್ಲ. ಹೀಗಾಗಿ ನಕ್ಸಲ್ ನಿಗ್ರಹಪಡೆಯ ಅಧಿಕಾರಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಅವರ ಹುಡುಕಾಟ ನಡೆಸುತ್ತಿದ್ದಾರೆ. ಈಗ ಕಾಣಿಸಿಕೊಂಡ ತಂಡದಲ್ಲಿ ಎಂಟು ಮಂದಿ ಇದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ.

ಉಡುಪಿಯಲ್ಲಿ ಪ್ರತ್ಯಕ್ಷರಾಗಿದ್ದ ನಕ್ಸಲರು!

ನಕ್ಸಲರು ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಬೈಂದೂರು, ಜಡ್ಕಲ್ ಭಾಗದಲ್ಲಿ ಕಾಣಿಸಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಆದರೆ ಇವರು ಕಾಣಿಸಿಕೊಂಡ ಸ್ಥಳದಲ್ಲಿಯೇ ಇರುವ ಅಸಾಮಿಗಳಲ್ಲ ಹೀಗಾಗಿ ಅವರೇ ಈಗ ಕೂಜಿಮಲೆ ವ್ಯಾಪ್ತಿಯಲ್ಲಿ ಪ್ರತ್ಯಕ್ಷರಾದರಾ? ಅಥವಾ ಆ ಮಾರ್ಗವಾಗಿ ಕೇರಳದ ಕಡೆಗೆ ಪ್ರಯಾಣ ಬೆಳೆಸಿದ್ದಾರಾ? ಅವರ ಉದ್ದೇಶ ಏನಿರಬಹುದು? ಹೀಗೆ ಹತ್ತಾರು ಪ್ರಶ್ನೆ ಗಳು ನಕ್ಸಲರ ಸುತ್ತ ಗಿರಕಿ ಹೊಡೆಯಲಾರಂಭಿಸಿವೆ.

ನಕ್ಸಲರು ಕಳೆದ ಲೋಕಸಭಾ ಚುನಾವಣೆ ವೇಳೆ ಅಂದರೆ ಐದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಸುಳ್ಯದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡಿದ್ದಾರೆ. ಸುಮಾರು ಎಂಟು ಮಂದಿ ಇರುವ ತಂಡ ಮಾರ್ಚ್ 16ರಂದು ಅಂಗಡಿಯೊಂದಕ್ಕೆ ತೆರಳಿ ಸುಮಾರು ನಾಲ್ಕು ಸಾವಿರ ರೂಪಾಯಿಯಷ್ಟು ಮೌಲ್ಯದ ದಿನಸಿ ಖರೀದಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಕ್ಸಲರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಈ ವ್ಯಾಪ್ತಿಯ ಕೆಲವು ಪ್ರದೇಶ ಕೊಡಗು ಜಿಲ್ಲೆಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ.

Why Naxals Are Found In The Border Areas During Lok Sabha Elections

ಕೊಡಗಿನಲ್ಲಿ ನಕ್ಸಲರ ಹೆಜ್ಜೆಗುರುತು

ಕೊಡಗಿನಲ್ಲಿ ನಕ್ಸಲರ ಹೆಜ್ಜೆಗುರುತುಗಳನ್ನು ನೋಡುವುದಾದರೆ 2012ರಲ್ಲಿ ಮಡಿಕೇರಿ ಸನಿಹದ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷರಾಗಿದ್ದರು. ಇದಾದ ನಂತರ 2018ರ ಫೆಬ್ರವರಿ ತಿಂಗಳಿನಲ್ಲಿ ಇದೇ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭ ಪ್ರತಿ ಬಾರಿಯೂ ಇವರು ಕಾಣಿಸಿಕೊಳ್ಳುವುದರಿಂದ ಏನಾದರೂ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾರಾ? ಎಂಬ ಸಂಶಯ ಹುಟ್ಟಿಕೊಳ್ಳಲಾರಂಭಿಸಿದೆ.

ನಕ್ಸಲರ ಚಲನವಲನ ಗಮನಿಸಿ ಹೇಳುವುದಾದರೆ ಇವರು ಕಳೆದ ತಿಂಗಳು ಫೆಬ್ರವರಿಯಲ್ಲಿ ಕೇರಳದಿಂದ ಉಡುಪಿ ಜಿಲ್ಲೆಯ ಬೈಂದೂರುಗೆ ಆಗಮಿಸಿರುವ ಅನುಮಾನವಿದೆ. ಹೀಗೆ ಬಂದವರು ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮದ ಸುತ್ತಮುತ್ತ ಸಂಚರಿಸಿರುವ ಸಾಧ್ಯತೆಯಿದೆ. ಇನ್ನು ಈ ನಕ್ಸಲರನ್ನು ಸಮಯ ಸಿಕ್ಕಾಗಲೆಲ್ಲ ನಕ್ಸಲ್ ನಿಗ್ರಹ ಪಡೆ ಸದೆ ಬಡಿದಿದೆ.

ಭೀಕರ ರಕ್ತಪಾತ ನಡೆಸಿದ್ದ ನಕ್ಸಲರು

ರಾಜ್ಯದಲ್ಲಿ ಸುಮಾರು 19 ವರ್ಷಗಳ ಹಿಂದೆ ಅಂದರೆ 2005ರಲ್ಲಿ ನಕ್ಸಲರು ಭೀಕರ ರಕ್ತಪಾತ ನಡೆಸಿದ್ದರು. ಆ ಘಟನೆ ಇವತ್ತಿಗೂ ಮೈಬೆವರಿಳಿಸುತ್ತದೆ. ಆಂಧ್ರಪ್ರದೇಶ-ಕರ್ನಾಟಕದ ಗಡಿ ಭಾಗದಲ್ಲಿ ಹೆಚ್ಚಾಗಿದ್ದ ನಕ್ಸಲರ ಹಾವಳಿ ನಿಗ್ರಹಿಸಲು ನಕ್ಸಲ್ ನಿಗ್ರಹ ಪಡೆ ವೆಂಕಟಮ್ಮನಹಳ್ಳಿಯಲ್ಲಿ ಬಿಡಾರ ಹೂಡಿತ್ತು. ಈ ಸಂದರ್ಭ 2005ರ ಫೆಬ್ರವರಿ 11ರಂದು ರಾತ್ರಿ ಲಾರಿಯಲ್ಲಿ ಬಂದಿಳಿದ ನಕ್ಸಲರ ಗುಂಪು ವೆಂಕಟಮ್ಮನಹಳ್ಳಿ ಶಾಲೆಯ ಆವರಣದಲ್ಲಿದ್ದ ಪೊಲೀಸ್ ಕ್ಯಾಂಪ್ ಮೇಲೆ ಏಕಾಏಕಿ ದಾಳಿ ನಡೆಸಿತ್ತು.

Why Naxals Are Found In The Border Areas During Lok Sabha Elections

ಈ ವೇಳೆ ಕ್ಯಾಂಪ್‌ಗೆ ನುಗ್ಗಿದ ನಕ್ಸಲೀಯರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ದೋಚಿದ ನಂತರ ಪೊಲೀಸರ ಮೇಲೆ ಗುಂಡಿನ ಮಳೆಗರೆದಿದ್ದರು. ದಾಳಿಯಲ್ಲಿ ಏಳು ಪೊಲೀಸರು ಮತ್ತು ಒಬ್ಬ ನಾಗರಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಹೊಸದಾಗಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ 42 ಆರೋಪಿಗಳನ್ನು ಹೆಸರಿಸಲಾಗಿತ್ತು.

ಈ ಪ್ರಕರಣದ 11ನೇ ಆರೋಪಿ, ಕ್ರಾಂತಿಕಾರಿ ಗಾಯಕ ಗದ್ದರ್ 2019ರ ನವೆಂಬರ್ನಲ್ಲಿ ಪಾವಗಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆ ನಂತರ ಅವರು ಮೃತಪಟ್ಟಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ವರವರರಾವ್ ಅವರನ್ನು ಮಹಾರಾಷ್ಟ್ರದ ಜೈಲಿನಿಂದ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಇತ್ತೀಚೆಗೆ ಆಂಧ್ರಪ್ರದೇಶದ ಗಂತಿಮೇರಿಯ ನಾಗರಾಜು (40), ಧರ್ಮಾವರಂನ ಪದ್ಮ (35), ರಾಮಗಿರಿ ತಲ್ಲಿಮಡುಗುವಿನ ಬೋಯ ಓಬಳೇಶ್ (40), ರಾಮಮೋಹನ್ (42) ಮತ್ತು ಆಂಜನೇಯುಲು (44) ಅವರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದರು. ಹೀಗೆ ಹಲವು ಪ್ರಕರಣದಲ್ಲಿ ನಕ್ಸಲರಿಗೆ ಗತಿ ಕಾಣಿಸುತ್ತಾ ಬರಲಾಗಿದ್ದು, ಇದರಿಂದ ಅವರ ಸಾಮರ್ಥ್ಯವೂ ತಗ್ಗಿದೆ.

ನಕ್ಸಲ್ ನಾಯಕನಾಗಿ ವಿಕ್ರಂಗೌಡ

ರಾಜ್ಯದ ಮಟ್ಟಿಗೆ ಹೇಳುವುದಾದರೆ, ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್‍ ಕೌಂಟರ್ ಬಳಿಕ ಆತನ ಗರಡಿಯಲ್ಲಿ ಪಳಗಿದ್ದ ವಿಕ್ರಂಗೌಡ ಈಗ ನಕ್ಸಲರನ್ನು ಮುನ್ನಡೆಸುತ್ತಿರುವ ನಾಯಕನಾಗಿದ್ದಾನೆ. ಈತ ತನ್ನ ನಾಯಕನ ಹತ್ಯೆಗೆ ರಿವೇಂಜ್ ತೀರಿಸುವ ಸಲುವಾಗಿ ಹೊಂಚು ಹಾಕುತ್ತಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಲ್ಲಿ ಸಾಕೇತ್ ರಾಜನ್ ಬಗ್ಗೆ ಹೇಳಬೇಕಾಗುತ್ತದೆ. ನಕ್ಸಲ್ ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವ ಹೆಸರು ನಕ್ಸಲ್ ನಾಯಕ ಸಾಕೇತ್ ರಾಜನ್.

ಈತನ ಕಾಲದಲ್ಲಿ ನಕ್ಸಲ್ ಚಟುವಟಿಕೆ ಉತ್ತುಂಗದಲ್ಲಿತ್ತು. ಹಲವರು ಇವನೊಂದಿಗೆ ಗುರುತಿಸಿಕೊಂಡು ತಮ್ಮನ್ನು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. 19 ವರ್ಷಗಳ ಹಿಂದೆ ಅಂದ್ರೆ 2005 ರ ಫೆಬ್ರವರಿ 5ರ ಮಧ್ಯರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮೆಣಸಿನ ಹಾಡ್ಯದಲ್ಲಿ ಎನ್‌ಕೌಂಟರ್‌ ನಡೆದಿತ್ತು. ಈ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮುಖಂಡ ಸಾಕೇತ್ ರಾಜನ್ ಹತನಾಗಿದ್ದನು. ಈ ವೇಳೆ ಸಾಕೇತ್ ರಾಜನ್ ಜೊತೆಯಲ್ಲಿದ್ದ ವಿಕ್ರಮ್ ಗೌಡ ಅಲ್ಲಿಂದ ತಪ್ಪಿಸಿಕೊಂಡಿದ್ದನು.

ವಿಕ್ರಂ ಗೌಡನಿಗಾಗಿ ತೀವ್ರ ಶೋಧ

ಇದಾದ ನಂತರ ಆತನ ಸಾವಿಗೆ ಪ್ರತಿಕಾರಕ್ಕಾಗಿ ಕಾಯುತ್ತಲೇ ಬರುತ್ತಿರುವ ವಿಕ್ರಂ ಗೌಡ, ಸಾಕೇತ್ ರಾಜನ್ ಬಳಿಕ ನಾಯಕನಾಗಿ ಬೆಳೆದಿದ್ದಾನೆ ಅಷ್ಟೇ ಅಲ್ಲದೇ ಸಾಕೇತ್ ರಾಜನ್ ಸಾವಿಗೆ ರೆಡ್ ಸೆಲ್ಯೂಟ್ ದಿನ ಆಚರಿಸಲು ನಕ್ಸಲರು ತಯಾರಿ ನಡೆಸಿದ್ದರು. ಇದರ ಜೊತೆಗೆ ಸಾಕೇತ್ ರಾಜನ್ ನೆನಪಿಗಾಗಿ ಪ್ರತಿ ವರ್ಷ ನಕ್ಸಲರು ಹುತಾತ್ಮ ದಿನಾಚರಣೆ ನಡೆಸುತ್ತಾ ಬರುತ್ತಿದ್ದಾರೆ.

ಇನ್ನು ಮೋಸ್ಟ್ ವಾಂಟೆಡ್ ಆಗಿರುವ ವಿಕ್ರಂ ಗೌಡನ ಬಗ್ಗೆ ನೋಡುವುದಾದರೆ ಈತ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೂಡ್ಲ ಸಮೀಪದ ನಾಡ್ವಾಲು ಗ್ರಾಮದವನು. ಸದ್ಯಕ್ಕೆ ಈತ ಸುಮಾರು 20ಕ್ಕೂ ಹೆಚ್ಚು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ. ಕಳೆದ 20 ವರ್ಷಗಳಿಂದ ನಕ್ಸಲೈಟ್ ಆಗಿ ತಲೆಮರೆಸಿಕೊಂಡಿದ್ದು, ಕೇರಳದಲ್ಲಿ ಈತ ತನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದನಾದರೂ ಅಲ್ಲಿಂದ ಕರ್ನಾಟಕದತ್ತ ಮುಖ ಮಾಡಿ ತನ್ನ ಚಟುವಟಿಕೆ ಶುರು ಮಾಡಿದ್ದಾನಾ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+