ಮುಂಗಾರು ಮಳೆ ತಡವಾದರೆ ಕುಡಿಯೋದಕ್ಕೂ ನೀರು ಸಿಗಲ್ವಾ?

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಮಾರುತಗಳು ಸದ್ದೇ ಮಾಡುತ್ತಿಲ್ಲ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ರಾಜ್ಯದ ಮೂಲೆ ಮೂಲೆಯಲ್ಲಿ ಮಳೆ ಆರ್ಭಟ ಜೋರಾಗಿ ಇರಬೇಕಿತ್ತು. ಆದರೆ ಇನ್ನೂ ಕೇರಳದ ಕರಾವಳಿಗೆ ಮುಂಗಾರು ಮಾರುತಗಳು ಎಂಟ್ರಿ ಕೊಟ್ಟಿಲ್ಲ. ಹೀಗಾಗಿ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿದೆ.

ಮನುಷ್ಯನ ಅತಿಯಾದ ದುರಾಸೆ ಹಾಗೂ ಪ್ರಕೃತಿ ಮೇಲೆ ಅತಿಯಾದ ಒತ್ತಡ ಹಾಕುತ್ತಿರುವ ಪರಿಣಾಮ ವಾತಾವರಣದಲ್ಲಿ ಭಾರಿ ಬದಲಾವಣೆ ಎದುರಾಗಿದೆ. ಅದ್ರಲ್ಲೂ ಮಳೆ ವಿಚಾರ ಗೊಂದಲ ಸೃಷ್ಟಿ ಮಾಡುತ್ತಿದ್ದು ಮಳೆ ಬರಬೇಕಾದ ವೇಳೆ ಸರಿಯಾಗಿ ಮಳೆಯೇ ಬರ್ತಿಲ್ಲ. ಇನ್ನು ಮಳೆಗಾಲದ ಹೊರತು ಬೇರೆ ಸಮಯದಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮ ಎಲ್ಲಾ ಅಯೋಮಯವಾಗಿದೆ. ಈ ಸಂದರ್ಭದಲ್ಲೇ ಮುಂಗಾರು ಮಳೆಗೂ ದೊಡ್ಡ ಅಡ್ಡಿ ಎದುರಾಗಿದೆ ಅನ್ನೋ ಆತಂಕ ಶುರುವಾಗಿದೆ (Monsoon Rain).

Why monsoon rain is getting delay to enter Kerala

ಮುಂಗಾರು ಮಳೆ ತಡವಾಗಲು ಕಾರಣವೇನು?

ಅಂದಹಾಗೆ ಹವಾಮಾನ ಇಲಾಖೆಯ ಪ್ರಕಾರ ಜೂನ್ 4ಕ್ಕೆ ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಎಂಟ್ರಿ ಕೊಡಲಿವೆ ಎನ್ನಲಾಗಿತ್ತು. ಈಗಿನ ಲೆಕ್ಕಾಚಾರ ನೋಡಿದರೆ 4-5 ದಿನಗಳ ತನಕ ಮುಂಗಾರು ಮಾರುತಗಳ ಎಂಟ್ರಿ ತಡವಾಗುವ ಲಕ್ಷಣ ಗೋಚರಿಸುತ್ತಿದೆ. 4 ವರ್ಷದ ನಂತರ ಮುಂಗಾರು ಮಾರುತಗಳ ಆಗಮನ ಈ ರೀತಿ ತಡವಾಗುತ್ತಿದೆ. ರೈತರಲ್ಲಿ ಈ ಸುದ್ದಿ ಆತಂಕ ಮೂಡಿಸಿರುವ ಜೊತೆಗೆ, ಮಳೆ ತಡವಾಗಲು ಕಾರಣವೇನು? ಎಂಬ ಪ್ರಶ್ನೆ ಕೂಡ ಮೂಡಿದೆ. ಆಗ್ನೇಯ ಅರೇಬಿಯನ್ ಸಮುದ್ರ ಮೇಲಿನ ಒತ್ತಡದ ಏರಿಳಿತವೇ ಇದಕ್ಕೆ ಕಾರಣ ಎನ್ನಲಾಗಿದೆ. ಹಾಗದ್ರೆ ಮುಂದಿನ ಪರಿಸ್ಥಿತಿ ಏನು? ತಿಳಿಯೋಣ ಬನ್ನಿ.

ಮುಂಗಾರು ಬರಬೇಕಿತ್ತು.. ಆದ್ರೆ ಇನ್ನೂ ಬಂದಿಲ್ಲ!

ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ರೂಪುಗೊಳ್ಳುತ್ತಿರುವ ಚಂಡಮಾರುತದ ಪರಿಚಲನೆಯು ಇನ್ನೆರಡು ದಿನಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಆ ನಂತರ ಕೇರಳ ಕರಾವಳಿ ಮುಂಗಾರು ಮಾರುತಗಳು ಎಂಟ್ರಿ ಕೊಡಲಿವೆ. ಈ ಬೆಳವಣಿಗೆ ಪರಿಣಾಮ ಕೇರಳ ಕರಾವಳಿಗೆ ಮುಂಗಾರು ಮಾರುತಗಳು ಬರುವುದು ಸ್ವಲ್ಪ ತಡವಾಗಿದೆ. ಆದರೆ ಇನ್ನೂ ಕೆಲವೇ ದಿನದಲ್ಲಿ ಕೇರಳಕ್ಕೆ ಮುಂಗಾರು ಮಾರುತಗಳು ಬರಲಿದ್ದು, ಬಳಿಕ ಕರ್ನಾಟಕದಲ್ಲೂ ಮಳೆಯ ಆರ್ಭಟ ಶುರುವಾಗಲಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದ ಒಳಗಾಗಿ ಮುಂಗಾರು ಮಳೆಯ ಮಾರುತಗಳು ಕೇರಳಕ್ಕೆ ಎಂಟ್ರಿ ಕೊಡುತ್ತವೆ.

2019ರ ಪರಿಸ್ಥಿತಿ ಮತ್ತೆ ನಿರ್ಮಾಣ?

2019ರಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿತ್ತು. 2022ರಲ್ಲಿ ಇದೇ ಮುಂಗಾರು ಮಾರುತಗಳು ಮೇ 29ಕ್ಕೆ ಕೇರಳ ಪ್ರವೇಶ ಮಾಡಿದ್ದವು. 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1ರಂದು ಹಾಗೂ 2019ರಲ್ಲಿ ಜೂನ್ 8 ರಂದು ಮತ್ತು 2018ರಲ್ಲಿ ಮೇ 29 ರಂದು ಕೇರಳ ಕರಾವಳಿಗೆ ಬಂದಿದ್ದವು. ಆದರೆ ಈಗ ಮತ್ತೆ 2019ರ ಪರಿಸ್ಥಿತಿ ಬಂದಿದ್ದು, ಎಲ್ಲಿ ಬರದ ಪರಿಸ್ಥಿತಿ ಎದುರಾಗುತ್ತೋ? ಅನ್ನೋ ಭಯ ಕಾಡುತ್ತಿದೆ. ಆದರೆ ಈ ಬಾರಿ ಉತ್ತಮ ಮಳೆ ಆಗುವ ನಿರೀಕ್ಷೆಯನ್ನೇ ಹವಾಮಾನ ಇಲಾಖೆ ಹೊಂದಿದೆ. ಹೀಗಾಗಿ ರೈತರಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.

Why monsoon rain is getting delay to enter Kerala

ಸಾಮಾನ್ಯ ಮಳೆ ಬಿದ್ದರೆ ಬಚಾವ್!

2023ರಲ್ಲಿ ಹವಾಮಾನ ಇಲಾಖೆ ಹೇಳಿರುವ ಮಳೆ ಭವಿಷ್ಯ ಹೀಗಿದೆ, ವಾಯುವ್ಯ ಭಾರತದ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಬೀಳುವ ನಿರೀಕ್ಷೆ ಇದೆ. ಆದರೆ ಪೂರ್ವ & ಈಶಾನ್ಯ ಸೇರಿದಂತೆ ಮಧ್ಯ ಮತ್ತು ದಕ್ಷಿಣ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಸರಾಸರಿ 87 ಸೆಂಟಿಮೀಟರ್‌ ಅಂದರೆ 94ರಿಂದ 106ರಷ್ಟು ಸಾಮಾನ್ಯ ಮಳೆಯೇ ಬೀಳಲಿದೆ. ಸಾಮಾನ್ಯ ಮಳೆ ಬಿದ್ದರೆ ಮಾತ್ರ ಭಾರತದಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯತೆಗೆ ತಕ್ಕಷ್ಟು ನೀರು ಸಿಗಲಿದೆ. ಇಲ್ಲವಾದರೆ ಕುಡಿಯುವ ನೀರಿಗೂ ಪರದಾಟ ಶುರುವಾಗಲಿದೆ.

ಆಹಾರ ಉತ್ಪಾದನೆಯಲ್ಲೂ ಮುಂಗಾರು ಮುಖ್ಯ

ಈ ಲೆಕ್ಕಾಚಾರದಲ್ಲಿ ಹೇಳುವುದಾದರೆ ಭಾರತದ ಆಹಾರ ಉತ್ಪಾದನೆಯಲ್ಲಿ ಮಳೆಯಾಶ್ರಿತ ಕೃಷಿ ಪದ್ಧತಿ ಶೇಕಡಾ 40ರಷ್ಟು ಪಾಲು ಹೊಂದಿದೆ. ಅಂದರೆ ಶೇಕಡಾ 40ರಷ್ಟು ಆಹಾರ ಧಾನ್ಯ ಮಳೆಯನ್ನೇ ನಂಬಿಕೊಂಡಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಬೀಳುವ ಮಳೆ ಇಡೀ ದೇಶದ ಆಹಾರ ಉತ್ಪಾದನೆ ಸಾಮರ್ಥ್ಯ ನಿರ್ಧಾರ ಮಾಡಲಿದೆ. ಈ ಕಾರಣಕ್ಕೆ ಭಾರತದ ಪಾಲಿಗೆ ಮುಂಗಾರು ಮಳೆಯ ಮಾರುತಗಳು ನಿರ್ಣಾಯಕ ಎನ್ನಬಹುದು.

ರಾಜ್ಯದಲ್ಲಿ ಭರ್ಜರಿ ಮಳೆ ಗ್ಯಾರಂಟಿ

ಜೂನ್ ತಿಂಗಳಲ್ಲಿ ಮುಂಗಾರು ರಾಜ್ಯಕ್ಕೆ ಎಂಟ್ರಿ ಕೊಟ್ಟು ಬಿತ್ತನೆಯೂ ಆರಂಭವಾಗುತ್ತದೆ. ಜೂನ್‌ ಆರಂಭದಲ್ಲಿ ಕೇರಳಕ್ಕೆ ಮುಂಗಾರು ಮಳೆ ಎಂಟ್ರಿ ಕೊಡುವುದು ವಾಡಿಕೆ. ಈ ಬಾರಿ 7 ದಿನ ಲೇಟ್ ಆಗಿ ಮುಂಗಾರು ಮಾರುತಗಳು ಎಂಟ್ರಿ ಕೊಡುತ್ತಿವೆ. ಕೆಲವು ಸಂದರ್ಭದಲ್ಲಿ ಇದೇ ರೀತಿ ಮಳೆ ಮಾರುತ ಆಗಮನ ತಡವಾಗಿ ಬರದ ಪರಿಸ್ಥಿತಿ ಎದುರಾಗಿತ್ತು. ಈಗಲೂ ಮುಂಗಾರು ಮಳೆ ಮಾರುತಗಳು ಎಂಟ್ರಿ ಕೊಡುತ್ತಿರುವುದು ಲೇಟ್ ಆಗಿದೆ. ಹೀಗಾಗಿ ಮತ್ತೆ ರಾಜ್ಯಕ್ಕೆ ಬರ ಬಂತಾ? ಅನ್ನೋ ಪ್ರಶ್ನೆ ಮೂಡಿತ್ತು. ಆದರೆ ಮಳೆ ಲೇಟ್ ಆದ್ರೂ ಚೆನ್ನಾಗಿ ಬೀಳುತ್ತೆ ಅನ್ನೋ ಧೈರ್ಯ ಸಿಕ್ಕಿದೆ.

Why monsoon rain is getting delay to enter Kerala

ಮಳೆ ಬಗ್ಗೆ ಸಿಕ್ಕಿದೆ ಮುನ್ಸೂಚನೆ!

ಮುಂಗಾರು ಮಳೆ ತಡವಾಗಿ ಎಂಟ್ರಿ ಕೊಟ್ಟರೂ 2023ರಲ್ಲಿ ಕರ್ನಾಟಕದಲ್ಲಿ ಉತ್ತಮವಾಗಿ ಮಳೆಯಾಗುತ್ತದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ವಾರ್ಷಿಕ ಮಳೆ ಪ್ರಮಾಣದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಧೈರ್ಯ ಸಿಕ್ಕಿದೆ. ಇನ್ನೊಂದ್ಕಡೆ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲೂ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಹಾಗೇ ಮುಂದಿನ 48 ಗಂಟೆಯಲ್ಲಿ ರಾಜ್ಯದ ಕರಾವಳಿ & ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಹಾಗೂ ಉತ್ತರ ಒಳನಾಡಿನಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಮೀನುಗಾರರಿಗೆ ಮುನ್ಸೂಚನೆ

ಇನ್ನು ರಾಜ್ಯ ಕರಾವಳಿ ಭಾಗದಲ್ಲಿ ಮಳೆ ಜೊತೆ ಭಾರಿ ಗಾಳಿ ಬೀಸುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮೀನುಗಾರರಿಗೂ ಈ ಕುರಿತು ಮಾಹಿತಿ ನೀಡಲಾಗಿದ್ದು, ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಲಿದೆ. ಗಂಟೆಗೆ 40 ರಿಂದ 45 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಬಹುದು ಎನ್ನಲಾಗಿದೆ. ಹಾಗೇ ಗಾಳಿಯ ವೇಗ 55 ಕಿಲೋ ಮೀಟರ್ ತನಕ ಹೆಚ್ಚಬಹುದು. ಈ ಕಾರಣಕ್ಕೆ ರಾಜ್ಯದ ಕರವಾಳಿ ಮೀನುಗಾರರಿಗೆ ಮಾಹಿತಿ ನೀಡಲಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.

ಮುಂಗಾರು ಮಳೆಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ನಡುವೆ ಒಂದೆರಡು ದಿನ ಕಾದರೆ ಭರ್ಜರಿ ಮಳೆ ಶುರುವಾಗುವ ನಿರೀಕ್ಷೆ ಕೂಡ ಇದೆ. ರೈತರು ಕೂಡ ಭೂಮಿ ಸ್ವಲ್ಪ ಒದ್ದೆಯಾದರೆ ಸಾಕು, ಬಿತ್ತನೆ ಮಾಡೋಣ ಅಂತಾ ಕಾಯುತ್ತಿದ್ದಾರೆ. ಹೀಗಾಗಿ ಮಳೆರಾಯ ಬೇಗ ಬಾರಯ್ಯ ಅಂತಾ ಬೇಡಿಕೊಳ್ಳುತ್ತಿದ್ದಾರೆ. ಹೀಗೆ ಅನ್ನದಾತನ ಮನವಿಗೆ ಬೆಲೆಕೊಟ್ಟು, ರಾಜ್ಯದಲ್ಲಿ ಮುಂಗಾರು ಮಾರುತಗಳು ಅದೆಷ್ಟು ಬೇಗ ಎಂಟ್ರಿ ಕೊಡಲಿವೆ ಅನ್ನೋದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+