ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬ್ಬರ ಹಿಂದೊಬ್ಬರಂತೆ ಕಾಂಗ್ರೆಸ್ ತೊರೆಯುತ್ತಿರುವವರು

ವಿಧಾನಸಭೆ ಚುನಾವಣೆ ಗುರಾಯಿಸಿ ನೋಡುತ್ತಿರುವ ಸಂದರ್ಭದಲ್ಲಿ ಪಕ್ಷಾಂತರ ಭರ್ಜರಿಯಾಗಿ ನಡೆಯುತ್ತಿದೆ. ನಡುನೀರಿನಲ್ಲಿ ಇರುವವರು, ತ್ರಿಶಂಕು ಸ್ಥಿತಿ ತಲುಪಿದವರು, ಬಾಳೆಹಣ್ಣಿನ ಸಿಪ್ಪೆಯಂತಾದವರು ಭವಿಷ್ಯವನ್ನು ಹುಡುಕಿಕೊಂಡು ಹೊರಟಿದ್ದಾರೆ.

By Prasad
|
Google Oneindia Kannada News

ಬೆಂಗಳೂರು, ಮಾರ್ಚ್ 03 : ಹಿಂದೆ ಯಾರ ಬಗ್ಗೆ ಏನೇ ಹೇಳಿರಲಿ, ಈಗಿನ ಸಂದರ್ಭದಲ್ಲಿ ಎಲ್ಲಿ ಅನುಕೂಲಕರ ವಾತಾವರಣವಿದೆಯೋ ಆ ಪಕ್ಷ ಸೇರಿಕೊಂಡು, ಹಿಂದೆ ತೆಗಳಿದವರನ್ನೇ ವಾಚಾಮಗೋಚರವಾಗಿ ಹೊಗಳಿಕೊಂಡು ಅನುಕೂಲಸಿಂಧುವಂತೆ ವರ್ತಿಸುವುದೇ 'ನಿಜವಾದ' ರಾಜಕಾರಣ.

ಪ್ರಸ್ತುತ ಕರ್ನಾಟಕದ ರಾಜಕಾರಣದಲ್ಲಿ ಯಾವ ಪುಢಾರಿಯ ಮೂಲ ಪಕ್ಷ ಯಾವುದೆಂದು ಗುರುತಿಸುವುದೇ ದುಸ್ತರವಾಗಿದೆ. ಕೆಲವರ ಬಗ್ಗೆ ಯಾವ ಪಕ್ಷದಲ್ಲಿ ಎಷ್ಟು ದಿನವಿದ್ದು, ಅಲ್ಲಿಂದ ಎಲ್ಲೆಲ್ಲಿ ಪಕ್ಷಾಂತರ ಮಾಡಿ, ಕಡೆಗೆ ಯಾವ ಪಕ್ಷದೊಡನೆ ಗುರುತಿಸಿಕೊಂಡಿದ್ದಾರೆ ಎಂದು ಲೆಕ್ಕವಿಡುವುದೂ ಕಷ್ಟಕರ.

ಸದ್ಯಕ್ಕೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಗುರಾಯಿಸಿ ನೋಡುತ್ತಿರುವ ಸಂದರ್ಭದಲ್ಲಿ ಪಕ್ಷಾಂತರ ಭರ್ಜರಿಯಾಗಿ ನಡೆಯುತ್ತಿದೆ. ನಡುನೀರಿನಲ್ಲಿ ಇರುವವರು, ತ್ರಿಶಂಕು ಸ್ಥಿತಿ ತಲುಪಿದವರು, ಬಾಳೆಹಣ್ಣಿನ ಸಿಪ್ಪೆಯಂತಾದವರು ತಮ್ಮ ಭವಿಷ್ಯವನ್ನು ಹುಡುಕಿಕೊಂಡು, ಎಲ್ಲೆ ನೆಲೆ ಸಿಗುತ್ತದೋ ಎಂದು ನೋಡುತ್ತಿದ್ದಾರೆ.

ಸದ್ಯಕ್ಕೆ ಡೊನೇಷನ್ ಗೇಟ್ ನಲ್ಲಿ ಸಿಲುಕಿಕೊಂಡು ಸೀತೆಯಂತೆ 'ಪವಿತ್ರ'ಳಾಗಿ ಹೊರಬರಲು ನಾನಾ ಸರ್ಕಸ್ಸುಗಳನ್ನು ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಪಕ್ಷ ಪಕ್ಷಾಂತರದ ಸವಾಲುಗಳನ್ನು ಕೂಡ ಎದುರಿಸಬೇಕಾಗಿದೆ.

ಒಂದೆಡೆ ಸಿದ್ದರಾಮಯ್ಯನವರ ಕುರ್ಚಿಯೇ ಅಲುಗಾಡಿತ್ತಿದೆ, ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡಿದೆ, ಚುನಾವಣೆ ಎದುರಿಸಲು ರಣತಂತ್ರ ರೂಪಿಸಬೇಕಾಗಿದೆ, ರೈತರ ಸಾಲದ ಶೂಲೆ ತೂಗುತ್ತಿದೆ, ಮತ್ತೊಂದೆಡೆ ಬಿಜೆಪಿ ಒಳಜಗಳ ನಡುವೆಯೇ ಒಗ್ಗೂಡುತ್ತಿದೆ, ಜೆಡಿಎಸ್ ಅವಕಾಶ ಬಳಸಿಕೊಳ್ಳಲು ಹೊಂಚಿ ಕೂತಿದೆ.

ಇದೆಲ್ಲದರ ನಡುವೆ ಕೆಲ ಪ್ರಮುಖ ನಾಯಕರು 'ಕೈ' ಕೊಟ್ಟು ಬೇರೆ ಪಕ್ಷ ಹಿಡಿದಿದ್ದಾರೆ. ನಂಜನಗೂಡಿನ ಮಾಜಿ ಶಾಸಕ ವಿ. ಶ್ರೀನಿವಾಸ ಪ್ರಸಾದ್ ಅವರ ರೆಬೆಲ್ ಧೋರಣೆಯಿಂದ ಆರಂಭವಾದ ಈ ಪರ್ವ ಎಸ್ಎಂ ಕೃಷ್ಣ ಅವರಂಥ ದಿಗ್ಗಜ ಹೊರನಡೆಯುವುದರೊಂದಿಗೆ ವಿಚಿತ್ರವಾದ ತಿರುವು ಪಡೆದುಕೊಂಡಿದೆ. ಯಾಯ್ಯಾವ ಕಾಂಗ್ರೆಸ್ಸಿಗ ಪಕ್ಷ ತೊರೆದಿದ್ದಾರೆ ಎಂಬ ಪಟ್ಟಿ ಇಲ್ಲಿದೆ. [ಕಾವೇರಿ ಪಾಳೇಪಟ್ಟಿನಲ್ಲಿ ಕಳಚುತ್ತಿವೆ ಕಾಂಗ್ರೆಸ್ ಕೈ-ಕಾಲು]

ಕುಮಾರ್ ಬಂಗಾರಪ್ಪ

ಕುಮಾರ್ ಬಂಗಾರಪ್ಪ

ಕಳೆದ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಸಹೋದರ ಮಧು ಬಂಗಾರಪ್ಪನ ವಿರುದ್ಧ ಸೋತು ಠೇವಣಿ ಕಳೆದುಕೊಂಡಿದ್ದ ಕುಮಾರ್ ಬಂಗಾರಪ್ಪ ಕಾಂಗ್ರೆಸ್ಸಿನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದು ಸುಳ್ಳಲ್ಲ. ಎಸ್ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ಕುಮಾರ್, ಅವರು ಕಾಂಗ್ರೆಸ್ ನಿಂದ ಹೊರನಡೆಯುತ್ತಿದ್ದಂತೆ ತಾವು ಕೂಡ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ಸಿಗೆ ಎಷ್ಟು ಲಾಭವೋ, ಎಷ್ಟು ನಷ್ಟವೋ? [ಕಾಂಗ್ರೆಸ್ ತೊರೆದ ಮಾಜಿ ಸಚಿವ ಕುಮಾರ ಬಂಗಾರಪ್ಪ]

ಜೆಡಿ ನಾಯ್ಕ, ಭಟ್ಕಳ

ಜೆಡಿ ನಾಯ್ಕ, ಭಟ್ಕಳ

ಕಾಂಗ್ರೆಸ್ ನಾಯಕರ ಧೋರಣೆಯನ್ನು ವಿರೋಧಿಸಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿರುವ ಮತ್ತೊಬ್ಬ ಕಾಂಗ್ರೆಸ್ಸಿಗ, ಭಟ್ಕಳದ ಮಾಜಿ ಶಾಸಕ ಜೆಡಿ ನಾಯ್ಕ. ಅವರು ಕೂಡ ಕುಮಾರ್ ಬಂಗಾರಪ್ಪನವರಂತೆ ಬೇಷರತ್ ಆಗಿ ಭಾರತೀಯ ಜನತಾ ಪಕ್ಷ ಸೇರುವ ಹವಣಿಕೆಯಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಹೀನಾಯವಾಗಿ ನಾಯ್ಕ ಸೋತಿದ್ದರು.

ಎಸ್ಎಂ ಕೃಷ್ಣ, ಮಾಜಿ ಮುಖ್ಯಮಂತ್ರಿ

ಎಸ್ಎಂ ಕೃಷ್ಣ, ಮಾಜಿ ಮುಖ್ಯಮಂತ್ರಿ

ಸಜ್ಜನ ರಾಜಕಾರಣಿ, ಮುತ್ಸದ್ದಿ ಎಂಬ ಪಟ್ಟ ಪಡೆದುಕೊಂಡಿದ್ದರೂ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಮಾಜಿ ರಾಜ್ಯಪಾಲ, 84 ವರ್ಷದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಕಾಂಗ್ರೆಸ್ ನಾಯಕರಿಗೆ ಮಾತ್ರವಲ್ಲ, ಕಾಂಗ್ರೆಸ್ ಹೈಕಮಾಂಡಿಗೂ ಬೇಡವಾಗಿದ್ದರು ಎಂಬ ಮಾತು ಸತ್ಯಸ್ಯ ಸತ್ಯ. ಹೀಗಾಗಿ ಅವರಿಗೆ ತಮ್ಮ ಅಸ್ವಿತ್ವವನ್ನು ತೋರಿಸಿಕೊಳ್ಳುವುದಕ್ಕೋಸ್ಕರವಾದರೂ ಕಾಂಗ್ರೆಸ್ ಪಕ್ಷವನ್ನು ತೊರೆಯಲೇಬೇಕಾದಂಥ ಪರಿಸ್ಥಿತಿ ಎದುರಾಗಿತ್ತು. ಮುಂದಿನ ದಾರಿ ಎಲ್ಲಿಗೆ? [ಕೃಷ್ಣ ರಾಜೀನಾಮೆ: ಮಂಡ್ಯದಲ್ಲಿ ಅತಂತ್ರವಾಯ್ತು ಕಾಂಗ್ರೆಸ್!]

ವಿ. ಶ್ರೀನಿವಾಸ ಪ್ರಸಾದ, ನಂಜನಗೂಡು

ವಿ. ಶ್ರೀನಿವಾಸ ಪ್ರಸಾದ, ನಂಜನಗೂಡು

ಕಾಂಗ್ರೆಸ್ ಕಂಡ ಮತ್ತೊಬ್ಬ ಸಜ್ಜನ ರಾಜಕಾರಣಿಯೆಂದರೆ ನಂಜನಗೂಡಿನ ಮಾಜಿ ಶಾಸಕ ವಿ ಶ್ರೀನಿವಾಸ ಪ್ರಸಾದ. ಒಂದಾನೊಂದು ಕಾಲದಲ್ಲಿ ಸಿದ್ದರಾಮಯ್ಯನವರ ಆಪ್ತರಾಗಿದ್ದ ಶ್ರೀನಿವಾಸ ಪ್ರಸಾದ್ ಕಡೆಗೆ ಸಿದ್ದರಾಮಯ್ಯನವರ ವಿರುದ್ಧವೇ ತೊಡೆತಟ್ಟಿದ್ದು ವಿಪರ್ಯಾಸ. ಸಿದ್ದರಾಮಯ್ಯನವರಿಗೆ ಬುದ್ಧಿ ಕಲಿಸೇ ಕಲಿಸುತ್ತೇನೆ ಎಂದು ಅಬ್ಬರಿಸಿ ಹೊರನಡೆದಿರುವ ಶ್ರೀನಿವಾಸ ಪ್ರಸಾದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. [ಸಿದ್ದರಾಮಯ್ಯನವರದ್ದು ಅಸೂಯೆ ಬುದ್ಧಿ: ಶ್ರೀನಿವಾಸ್ ಪ್ರಸಾದ್]

ಅಂಬರೀಶ್, ಮಂಡ್ಯದ ಶಾಸಕ

ಅಂಬರೀಶ್, ಮಂಡ್ಯದ ಶಾಸಕ

ಎಸ್ಎಂ ಕೃಷ್ಣ ಅವರೇ ಕಾಂಗ್ರೆಸ್ಸಿನಿಂದ ಹೊರನಡೆದ ಮೇಲೆ ಅಂಬರೀಶ್ ಅವರಿಗೆ ಪಕ್ಷದಲ್ಲಿ ಉಳಿದಿರುವುದು ಏನೂ ಇಲ್ಲ. ಮಂತ್ರಿಗಿರಿಯನ್ನು ಕೂಡ ಕಳೆದುಕೊಂಡಿರುವ ಅಂಬರೀಶ್ ಸದ್ಯಕ್ಕೆ ಏನನ್ನೂ ನಿರ್ಧರಿಸಲಾಗದಂಥ ಸ್ಥಿತಿಯಲ್ಲಿದ್ದಾರೆ. ತಮ್ಮ ಅವಗಣನೆಯ ವಿರುದ್ಧ ಹಲವಾರು ಬಾರಿ ಮಾತನ್ನಾಡಿರುವ ಅವರು ಚುನಾವಣೆಗೆ ಮುನ್ನ ಯಾವುದೇ ಕ್ಷಣದಲ್ಲಿ ಕಾಂಗ್ರೆಸ್ ತೊರೆದು ಬೇರೆ ಪಕ್ಷ ಅಪ್ಪಿಕೊಳ್ಳುವ ಸಾಧ್ಯತೆಯಿದೆ. [ಬಳಸಿ ಬಿಸಾಡೋಕೆ ನಾನೇನು ಚಪ್ಲೀನಾ : ಶಾಲುಸುತ್ತಿ ಬಾರಿಸಿದ ಅಂಬಿ]

ಅತೃಪ್ತರ ಪಟ್ಟಿ ಇನ್ನೂ ದೊಡ್ಡದಿದೆ

ಅತೃಪ್ತರ ಪಟ್ಟಿ ಇನ್ನೂ ದೊಡ್ಡದಿದೆ

ಸಿದ್ದರಾಮಯ್ಯನವರ ವಿರುದ್ಧ ಸಿಡಿದೆದ್ದಿರುವ ಅತೃಪ್ತರ ಪಟ್ಟಿ ಕಾಂಗ್ರೆಸ್ಸಿನಲ್ಲಿ ಇನ್ನೂ ದೊಡ್ಡದಿದೆ. ಮೈಸೂರಿನ ಮಾಜಿ ಸಂಸದ ಎಚ್ ವಿಶ್ವನಾಥ್, ಮಾಜಿ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ, ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್... ಇವರೆಲ್ಲ ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಕೆಂಡ ಕಾರಿದವರು. ವಿಶ್ವನಾಥ್ ಅವರಿಗೆ ಈಗಾಗಲೆ ನೋಟೀಸ್ ಕೂಡ ಜಾರಿಯಾಗಿದೆ. [ನೋಟಿಸ್ ನೀಡುವ ಬದಲು ಪಕ್ಷದಿಂದಲೇ ತೆಗೆದುಬಿಡಿ]

English summary
V Srinivasa Prasad, SM Krishna, Kumar Bangarappa, JD Naik... These leaders have already quit Karnataka Congress. Many more who are not happy with leadership of Siddaramaiah are on their toes to say good bye to oldest party in India. ಒಬ್ಬರ ಹಿಂದೊಬ್ಬರಂತೆ ಕಾಂಗ್ರೆಸ್ ತೊರೆಯುತ್ತಿರುವವರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X