ಸಿದ್ದರಾಮಯ್ಯರನ್ನ ಬ್ರೇಕ್‌ಫಾಸ್ಟ್‌ಗೆ ಕರೆದಿರುವುದು ಈ ಕಾರಣಕ್ಕೆ: ಗುಟ್ಟು ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿ ಇದೀಗ ಬ್ರೇಕ್‌ಫಾಸ್ಟ್ ರಾಜಕಾರಣ ಹೆಚ್ಚು ಚರ್ಚೆಯಲ್ಲಿರುವ ವಿಷಯ. ಇಲ್ಲಿವರೆಗೆ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಸದ್ದು ಮಾಡುತ್ತಿತ್ತು. ಈಗ ಅದನ್ನು ಸೆಡ್ಡು ಹೊಡೆದು ಬ್ರೇಕ್‌ಫಾಸ್ಟ್ ಮೀಟಿಂಗ್ ಮುಂಚೂಣಿಯಲ್ಲಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಸಿಎಂ ಕುರ್ಚಿ ಕಿತ್ತಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಬ್ರೇಕ್‌ಫಾಸ್ಟ್‌ಗೆ ಸೇರಿ ಚರ್ಚೆ ನಡೆಸಿ ಒಮ್ಮತಕ್ಕೆ ಬರುವಂತೆ ಸೂಚಿಸಿತ್ತು. ಇದೀಗ ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್ ಬ್ರೇಕ್‌ಫಾಸ್ಟ್‌ಗೆ ಆಹ್ವಾನಿಸಿದ್ದಾರೆ. ಇದರ ಹಿಂದಿನ ಕಾರಣವೇನು? ಎಂಬುದನ್ನು ತಿಳಿಸಿದ್ದಾರೆ.
ಮೊದಲಿಗೆ ಸಿದ್ದರಾಮಯ್ಯ ಅವರು ತಮ್ಮ ನಿವಾಸಕ್ಕೆ ಬ್ರೇಕ್‌ಫಾಸ್ಟ್‌ಗೆ ಬರುವಂತೆ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದ್ದರು. ಇಬ್ಬರೂ ಒಟ್ಟಿಗೆ ಉಪಹಾರ ಸವಿದು ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದರು. ಪಕ್ಷದ ವರಿಷ್ಠರ ತೀರ್ಮಾನ ಹಾಗೂ ಸೂಚನೆಯಂತೆ ನಾನು ಹಾಗೂ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ ಎಂದು ನಾವಿಬ್ಬರೂ ತೀರ್ಮಾನಿಸಿದ್ದೇವೆ. ಸಚಿವರಾಗಲಿ, ಶಾಸಕರಾಗಲೀ ಯಾರೂ ನಮ್ಮ ಸರ್ಕಾರದ ವಿರುದ್ಧವಿಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದ್ದರು.

ಅಧಿವೇಶನ ಇರುವುದರಿಂದ ಇಬ್ಬರಿಗೂ ಗೊಂದಲ ತಿಳಿಗೊಳಿಸುವಂತೆ ಹೈಕಮಾಂಡ್ ಸೂಚಿಸಿತ್ತು. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ನಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಲಾಗುವುದು. ಆದರೆ ಕೆಲ ಮಾಧ್ಯಮಗಳಿಂದ ಗೊಂದಲ ಸೃಷ್ಟಿಯಾಗಿದೆ. ಕೆಲವು ಶಾಸಕರು ಸಚಿವ ಸಂಪುಟ ಪುನರ್ ರಚನೆ ಸಂಬಂಧ ದೆಹಲಿಗೆ ಭೇಟಿ ನೀಡಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದಿದ್ದರು.
ಪಕ್ಷದ ವರಿಷ್ಠರ ಸೂಚನೆಯಂತೆ ಡಿ.ಕೆ.ಶಿವಕುಮಾರ್ ಮತ್ತು ನಾನು ನಮ್ಮನೆಯಲ್ಲಿ ಒಟ್ಟಿಗೆ ಉಪಹಾರ ಸೇವಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣವಾಗಿದ್ದು, 2028ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳಾದ ಕಾರ್ಪೋರೇಷನ್, ತಾಲ್ಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳು ಬಹಳ ಮುಖ್ಯ. ಹೀಗಾಗಿ 2023ರ ಚುನಾವಣೆಯಲ್ಲಿ ಕೆಲಸ ಮಾಡಿದಂತೆಯೇ ಮುಂದೆಯೂ ಒಟ್ಟಿಗೆ ಸಾಗುವ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದರು.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಉಂಟಾಗಿರುವ ಗೊಂದಲಗಳಿಗೆ ಮಾಧ್ಯಮಗಳೇ ಕಾರಣ. ವಿರೋಧ ಪಕ್ಷಗಳು ಏನೇ ಸುಳ್ಳು ಆರೋಪಗಳನ್ನು ಮಾಡಿದರೂ ಅವನ್ನೆಲ್ಲಾ ಸಮರ್ಥವಾಗಿ ಎದುರಿಸುವ ಕೆಲಸ ಮಾಡುತ್ತೇವೆ ಎಂದಿದ್ದರು.
ಡಿಕೆಶಿ ನಿವಾಸದಲ್ಲೂ ಬ್ರೇಕ್‌ಫಾಸ್ಟ್
ಸಿಎಂ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲೂ ಬ್ರೇಕ್‌ಫಾಸ್ಟ್ ಮೀಟಿಂಗ್ ಫಿಕ್ಸ್ ಆಗಿದೆ. ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು ಉಪಹಾರಕ್ಕೆ ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಕರ್ನಾಟಕಕ್ಕೆ ನಮ್ಮ ಭರವಸೆಗಳನ್ನು ಈಡೇರಿಸಲು ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಚರ್ಚಿಸಲು ಮತ್ತು ಬಲಪಡಿಸಲು ಮಾನ್ಯ ಮುಖ್ಯಮಂತ್ರಿಗಳನ್ನು ಉಪಾಹಾರಕ್ಕೆ ಆಹ್ವಾನಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕವಾದರೂ ಕುರ್ಚಿ ಕಿತ್ತಾಟಕ್ಕೆ ಬ್ರೇಕ್ ಬೀಳಲಿದೆಯಾ? ಕಾದು ನೋಡೋಣ..












Click it and Unblock the Notifications