ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಸಿದ್ದರಾಮಯ್ಯ ಗೈರಾಗಿದ್ಯಾಕೆ?
ಮೈಸೂರು, ಮೇ 26: ಮುಖ್ಯಮಂತ್ರಿಗಳೇ, ನೀತಿ ಆಯೋಗದ ಸಭೆಗೆ ಗೈರಾಗಲು ಕಾರಣವನ್ನು ನೀವು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ದೆಹಲಿಯಲ್ಲಿ ಮಹತ್ವದ ನೀತಿ ಆಯೋಗದ ಸಭೆ ಕರೆದಿದ್ದರು. ಆ ಸಭೆಯಲ್ಲಿ ಪ್ರಮುಖವಾಗಿ ಭಾರತವು 20247ನೇ ಇಸವಿಗೆ ಒಂದು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಆಗಬೇಕೆಂಬ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಅಭಿಪ್ರಾಯಗಳು, ಆ ರಾಜ್ಯಗಳ ದೂರದೃಷ್ಟಿತ್ವ- ಇವೆಲ್ಲವನ್ನೂ ಸಮಗ್ರವಾಗಿ ಚರ್ಚಿಸಲು ಉದ್ದೇಶಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಆ ಸಭೆಯಲ್ಲಿ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರೂ ಭಾಗವಹಿಸಿದ್ದರು. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಸಭೆಯಲ್ಲಿ ಪಾಲ್ಗೊಳ್ಳದೆ ಇರುವುದು ದುರದೃಷ್ಟದ ವಿಚಾರ ಎಂದು ನುಡಿದರು. ಸಿದ್ದರಾಮಯ್ಯನವರು ಆ ಸಭೆಗೆ ಯಾಕೆ, ಯಾವ ಕಾರಣಕ್ಕಾಗಿ ಹೋಗಿಲ್ಲ? ಬಹಿಷ್ಕಾರ ಹಾಕಿದರೇ? ಯಾವ ಕಾರಣಕ್ಕೆ ಸಭೆಯಲ್ಲಿ ಭಾಗವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನಿಸಿಲ್ಲ ಎಂದು ಕೇಳಿದರು.

ಕಾಂಗ್ರೆಸ್ ಸರಕಾರದ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆದರೆ, ಇಂಥ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿಲ್ಲವೆಂದಾದರೆ ಎಲ್ಲೋ ಒಂದು ಕಡೆ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ ಬದಿಗಿಟ್ಟು, ರಾಜಕಾರಣ ಮಾಡುವುದೇ ಇವರಿಗೆ ಆದ್ಯತೆ ಆಗಿದೆ ಎಂದು ಆಕ್ಷೇಪಿಸಿದರು. ಇದು ರಾಜ್ಯಕ್ಕೆ ಮಾಡುವ ಅನ್ಯಾಯ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಸರಕಾರದ ವಿರುದ್ಧ ಸಂಘರ್ಷದ ಹಾದಿಯನ್ನು ತಳೆದಿದ್ದಾರೆ; ತುಳಿಯುತ್ತಿದ್ದಾರೆ. ಈ ಸಂಘರ್ಷದ ಹಾದಿ ರಾಜ್ಯಕ್ಕೆ ಒಳಿತು ನೀಡದು ಎಂದು ವಿಜಯೇಂದ್ರ ಅವರು ಎಚ್ಚರಿಸಿದರು. ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪ ಮಾಡಿದ್ದೇವೆ. ಮುಖ್ಯಮಂತ್ರಿಗಳ ಈ ನಿಲುವಿನಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಯಾವ ಕಾರಣಕ್ಕೆ ಸಭೆಗೆ ಹೋಗಿಲ್ಲವೆಂದು ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಕೆಎಸ್‍ಡಿಎಲ್‍ನ ಮೈಸೂರು ಸ್ಯಾಂಡಲ್ ಸಾಬೂನಿಗೆ 6.20 ಕೋಟಿ ಕೊಟ್ಟು ನಟಿ ತಮನ್ನಾ ಭಾಟಿಯರನ್ನು ರಾಯಭಾರಿಯಾಗಿ ತರಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇದು ಗಂಭೀರ ವಿಚಾರ. ನಾಡಿನ ನೆಲ, ಜಲ, ಭಾಷೆ, ಪರಂಪರೆಯನ್ನು ಉಳಿಸಿ ಬೆಳೆಸುವುದು ರಾಜ್ಯದ ಕರ್ತವ್ಯ. ಕೆಎಸ್‍ಡಿಎಲ್ ಸಂಸ್ಥೆಯನ್ನು ಕಾಂಗ್ರೆಸ್ ಸರಕಾರ ಹುಟ್ಟು ಹಾಕಿಲ್ಲ. 1916ರಲ್ಲಿ ಅಂದಿನ ಮಹಾರಾಜರ ದೂರದೃಷ್ಟಿ- ಕನಸಿನ ಕೂಸಿದು.
ಈ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆಗಿ ಕರ್ನಾಟಕದವರು ಯಾರೂ ಸಿಗಲಿಲ್ಲವೇ? ರಾಜ್ಯದಲ್ಲಿ ಅಂಥ ಉತ್ತಮ ನಟ, ನಟಿ, ಕನ್ನಡಿಗರು ಸಿಗಲೇ ಇಲ್ಲವೇ? ಎಂದು ಪ್ರಶ್ನಿಸಿದರು.
ಪರಿಣಿತರ ಸಲಹೆ ಪಡೆದುಕೊಂಡರೆಂಬ ಸಚಿವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಇದಕ್ಯಾಕ್ರೀ ಬೇಕು ಪರಿಣಿತರ ಸಲಹೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಯಾರು ಪರಿಣಿತರು, ಯಾವುದರಲ್ಲಿ ಪರಿಣಿತರು ಎಂದು ಕೇಳಿದರಲ್ಲದೆ, ರಾಜ್ಯ ಸರಕಾರ ಈ ವಿಷಯದಲ್ಲಿ ಸ್ವೇಚ್ಛಾಚಾರದಿಂದ ನಡೆದುಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದು ಮಹಾರಾಜರಿಗೆ ಮಾಡುವ ಅವಮಾನ ಎಂದು ಖಂಡಿಸಿದರು.
ರಾಮನಗರ ಜಿಲ್ಲೆಯ ಹೆಸರು ಬದಲಿಸುವ ವಿಚಾರದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳು ಎನ್ನುವುದನ್ನೂ ಮರೆತ ಡಿ.ಕೆ.ಶಿವಕುಮಾರ್ ಅವರು, ರಿಯಲ್ ಎಸ್ಟೇಟ್ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ ಎಂದು ರಾಮನಗರ ಜಿಲ್ಲೆಯವರೂ, ರಾಜ್ಯದ ಜನತೆಯೂ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರಿಗೆ ರಾಮನಗರ ಹೆಸರಿನ ಕುರಿತು ಕೀಳರಿಮೆ ಇದೆಯೇ? ಅಥವಾ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಹೆಸರು ಸೇರಿಸದೇ ಇದ್ದಲ್ಲಿ ಅಭಿವೃದ್ಧಿಯೇ ಆಗಲಾರದೇ? ಎಂದು ಪ್ರಶ್ನಿಸಿದರು. ಇತಿಹಾಸ ಇರುವ ರಾಮನಗರ ಜಿಲ್ಲೆಯ ಹೆಸರು ಬದಲಿಸುತ್ತಾರೆ ಎಂದರೆ ಆ ಜಿಲ್ಲೆಯ ಜನರಿಗೆ ಮಾಡುವ ಅವಮಾನ. ರಿಯಲ್ ಎಸ್ಟೇಟ್ ಎಂದರೆ ಮಾತ್ರ ಅಭಿವೃದ್ಧಿಯೇ? ರಾಜ್ಯ ಸರಕಾರ ಇರುವುದೇ ರಿಯಲ್ ಎಸ್ಟೇಟ್ ಮಾಡಲೆಂದೇ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications