ಮಾಜಿ ಸಚಿವ ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣ: ಅಧಿವೇಶನದಲ್ಲಿ ಅಚ್ಚರಿ ಮೂಡಿಸಿದ ಕಾಂಗ್ರೆಸ್ ನಾಯಕರ ನಡೆ!
ಬೆಂಗಳೂರು, ಮಾ. 18: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರ ನಡೆ ತೀವ್ರ ಅಚ್ಚರಿಗೆ ಕಾರಣವಾಗಿದೆ. ಮಾರ್ಚ್ 4 ರಂದು ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದೆ. ಅದಕ್ಕೂ ಎರಡು ದಿನಗಳ ಮೊದಲು ಅಂದರೆ ಮಾರ್ಚ್ 2ರಂದು 'ಸಿಡಿ' ಬಿಡುಗಡೆ ಆಗಿತ್ತು. ಹೀಗಾಗಿ ವಿಧಾನಸಭೆ ಅಧಿವೇಶನದಲ್ಲಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ಮೇಲೆ ಮುಗಿಬೀಳಲಿದೆ ಎಂದೇ ಭಾವಿಸಲಾಗಿತ್ತು.
'ಸಿಡಿ' ಪ್ರಕರಣ ಎರಡೂ ಸದನಗಳಲ್ಲಿ ಚರ್ಚೆಗೆ ಬಂದು ಮಹಾಸ್ಫೋಟವಾಗಲಿದೆ. ಆ ಮೂಲಕ ಮೌಲ್ಯಾಧಾರಿತ ರಾಜಕಾರಣಕ್ಕೆ ಹೊರ ಭಾಷ್ಯೆ ಬರೆಯಬಹುದು ಎಂದುಕೊಂಡಿದ್ದವರು ಆಶ್ಚರ್ಯಗೊಳ್ಳುವಂತೆ ಕಾಂಗ್ರೆಸ್ ಸದನದಲ್ಲಿ ನಡೆದುಕೊಳ್ಳುತ್ತಿದೆ.
'ಸಿಡಿ' ಬಿಡುಗಡೆಯ ಬಳಿಕ ಮಾರ್ಚ್ 3 ರಂದು ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮರುದಿನ ಅಂದರೆ ಮಾರ್ಚ್ 4 ರಂದು ಸದನ ಆರಂಭವಾಗುತ್ತಿದ್ದಂತೆಯೆ ಸದನದಲ್ಲಿ 'ಸಿಡಿ' ಸಿಡಿಯಲಿದೆ ಅಂದುಕೊಂಡವರಿಗೆ ಅಚ್ಚರಿ ಕಾಯ್ದಿತ್ತು.

'ಸಿಡಿ' ವಿಚಾರ ಪ್ರಸ್ತಾಪಿಸಲೇ ಇಲ್ಲ!
ಸದನ ಆರಂಭವಾಗುತ್ತಿದ್ದಂತೆಯೆ ಕಾಂಗ್ರೆಸ್ ನಾಯಕರು, ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 'ಸಿಡಿ' ವಿಚಾರವನ್ನು ಪ್ರಸ್ತಾಪಿಸಲೇ ಇಲ್ಲ. ಬದಲಿಗೆ 'ಒಂದು ರಾಷ್ಟ್ರ-ಒಂದು ಚುನಾವಣೆ' ಆರ್‌ಎಸ್‌ಎಸ್ ಅಜೆಂಡಾ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿತು. ಬಳಿಕ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರು ತಮ್ಮ ವೈಯಕ್ತಿಕ ವಿಚಾರಕ್ಕೆ ಸದನದ ಗಮನ ಸೆಳೆಯಲು ಅಂಗಿ ಬಿಚ್ಚಿದ್ದು ದೊಡ್ಡ ಪ್ರಮಾದವಾಗಿ, ಅವರನ್ನು ಸದನದಿಂದ ಒಂದು ವಾರ ಉಚ್ಚಾಟಿಸಲಾಯ್ತು.
ಆ ಬಳಿಕ ಕಾಂಗ್ರೆಸ್ ನಾಯಕರು ಶಾಸಕ ಸಂಗಮೇಶ್ ಅವರ ಅಮಾನತು ವಿಚಾರನ್ನು ಮುಂದಿಟ್ಟುಕೊಂಡು ಸದನದಲ್ಲಿ ಎರಡು ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡಿದರು. ಅಸಲಿಗೆ 'ಸಿಡಿ' 'ಸಿಡಿ' ಎಂದು ಕಾಂಗ್ರೆಸ್ ಶಾಸಕರು ಆಗಾಗ ಘೋಷಣೆ ಹಾಕಿದರಾದರೂ, ಉಳಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಚ್‌ಕೆ ಪಾಟೀಲ್, ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ತನ್ವೀರ್ ಸೇಠ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು 'ಸಿಡಿ'ಗೆ ಸಂಬಂಧಿಸಿದಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಲೇ ಇಲ್ಲ!

ಸಂತ್ರಸ್ತ ಯುವತಿ ಹೇಳಿದ ಮೇಲಾದರೂ?
ಕಾಂಗ್ರೆಸ್ ನಾಯಕರ ಈ ನಿರ್ಲಿಪ್ತ ಧೋರಣೆ 'ಸಿಡಿ' ಬಿಡುಗಡೆ ಕುರಿತು ಮತ್ತೊಂದು ಮಜಲಿನ ಚರ್ಚೆಗೆ ನಾಂದಿ ಹಾಡಿತು ಎಂದರೂ ತಪ್ಪಾಗಲಿಕ್ಕಿಲ್ಲ. ಅಷ್ಟಕ್ಕೂ ಕಾಂಗ್ರೆಸ್ ನಾಯಕರು, ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ 'ಸಿಡಿ' ಸಿಡಿಸಲು ಮುಂದಾಗದೇ ಇರಲು ಅದೇ ಕಾರಣವಿರಬಹುದಾ ಎಂಬ ಚರ್ಚೆಯನ್ನು ಕಾಂಗ್ರೆಸ್ ಶಾಸಕರೇ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.
'ಸಿಡಿ' ಬಿಡುಗಡೆಯ ಬಳಿಕ ಆ ವಿಚಾರವನ್ನು ಕಾಂಗ್ರೆಸ್ ಪ್ರಸ್ತಾಪಿಸಲಿಲ್ಲ. ಅದಕ್ಕೆ ಕಾರಣ ಅದು ನಕಲಿಯೋ ಅಸಲಿಯೋ ಎಂಬ ಗೊಂದಲ ಕಾರಣವಾಗಿರಬಹುದು.
ಆದರೆ ಯಾವಾಗ ಸ್ವತಃ 'ಸಿಡಿ'ಯಲ್ಲಿನ ಸಂತ್ರಸ್ತ ಯುವತಿಯೇ ನನಗೇ ಅನ್ಯಾಯವಾಗಿದೆ. ಕೆಲಸ ಕೊಡಿಸುವ ನೆಪದಲ್ಲಿ ನನ್ನನ್ನು ಮಾಜಿ ಸಚಿವರು ಬಳಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರೋ, ಆಗಲಾದರೂ ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಬಹುದು ಎಂಬ ಚರ್ಚೆ ನಡೆದಿತ್ತು. ಸಂತ್ರಸ್ತ ಯುವತಿಯ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್ ಉಭಯ ಸದನಗಳಲ್ಲಿ ಹಂಗಾಮ ಮಾಡಲಿದೆ ಎಂಬ ಮಾಹಿತಿ ಕಾಂಗ್ರೆಸ್ ವಲಯದಿಂದಲೇ ಕೇಳಿ ಬಂದಿತ್ತು. ಆದರೆ ಸದನದಲ್ಲಿ ಆಗಿದ್ದೆ ಬೇರೆ!

ಸೋಮವಾರ ಪ್ರಸ್ತಾಪಿಸುತ್ತೇನೆ ಎಂದಿದ್ದ ಸಿದ್ದರಾಮಯ್ಯ
ಸಂತ್ರಸ್ತ ಯುವತಿಯೇ ತನಗೆ ಅನ್ಯಾಯವಾಗಿದೆ ಎಂದು ವಿಡಿಯೋ ಹರಿಬಿಟ್ಟಾಗಲೂ ಕಾಂಗ್ರೆಸ್ ಅದನ್ನು ಸದನದಲ್ಲಿ ಪ್ರಸ್ತಾಪಿಸಲು ಮುಂದಾಗಲಿಲ್ಲ. ಕಳೆದ ರವಿವಾರ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ 'ಸಿಡಿ' ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದರು. ಆದರೆ ಸೋಮವಾರ ಬೆಳಗ್ಗೆ ಸದನ ಆರಂಭವಾಗುವ ಮೊದಲು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ 'ಸಿಡಿ' ವಿಚಾರವನ್ನು ಸದನದಲ್ಲಿ ಪಸ್ತಾಪಿಸುವ ಕುರಿತು ಮಹತ್ವದ ಚರ್ಚೆ ನಡೆದಿದೆ ಎಂಬ ಮಾಹಿತಿಯಿದೆ.
'ಸಿಡಿ' ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆಗ ಮಧ್ಯ ಪ್ರವೇಶ ಮಾಡಿದ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಮಾಜಿ ಸಚಿವರುಗಳು ಈ ವಿಚಾರ ಪ್ರಸ್ತಾಪಿಸುವ ಮೊದಲು ಸತ್ಯಾಸತ್ಯತೆ ತಿಳಿದುಕೊಳ್ಳಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರಂತೆ. ಅದರಿಂದ ಸಿದ್ದರಾಮಯ್ಯ ಅವರು ಸದನದಲ್ಲಿ 'ಸಿಡಿ' ವಿಚಾರ ಪ್ರಸ್ತಾಪಿಸುವುದರಿಂದ ಹಿಂದೆ ಸರಿದರು ಎಂಬ ಮಾಹಿತಿ ಬಂದಿದೆ.

ಕಾಂಗ್ರೆಸ್ ಪಕ್ಷದಲ್ಲಿದ್ದಾರಾ ಆ 'ಮಹಾನ್ ನಾಯಕ'?
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 'ಸಿಡಿ' ವಿಚಾರ ಪ್ರಸ್ತಾಪಿಸದ್ದರಿಂದ, ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಆರೋಪಿಸಿರುವ 'ಸಿಡಿ' ರೂವಾರಿ ಮಹಾನ್ ನಾಯಕ ಕಾಂಗ್ರೆಸ್ ಪಕ್ಷದಲ್ಲಿದ್ದಾರಾ? ಎಂಬ ಚರ್ಚೆಗಳು ಶುರುವಾಗಿವೆ. ಸಂಶಯ ನಾಡಿನ ಜನರಲ್ಲಿ ಉಂಟಾಗಿದೆ. ಇದೇ ಸಂಶಯವನ್ನು ಕಾಂಗ್ರೆಸ್ ಪಕ್ಷದ ಕೆಲವು ಶಾಸಕರೂ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಹೀಗಾಗಿ 'ಸಿಡಿ' ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಬೂಮರಾಂಗ್ ಆಗುವ ಸಾಧ್ಯತೆಗಳಿವೆ ಎಂಬ ಮಾಹಿತಿಯಿದೆ.
ಹೀಗಾಗಿಯೇ ಕಾಂಗ್ರೆಸ್ ನಾಯಕರು ಸದನದಲ್ಲಿ 'ಸಿಡಿ' ಸಿಡಿಸಲು ಮುಂದಾಗುತ್ತಿಲ್ಲ ಎಂಬ ವರದಿಗಳಿವೆ. ಅದೆನೇ ಇರಲಿ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ 'ಸಿಡಿ' ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಬೇಕಿತ್ತು. ಆದರೆ ಯಾಕೆ ಪ್ರಸ್ತಾಪಿಸುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಇದೀಗ ಚರ್ಚೆ ಮಾಡುತ್ತಿದ್ದಾರೆ.
Recommended Video

ರಾಜ್ಯಾದ್ಯಂತ ಕಾಯುತ್ತಿದ್ದಾರೆ 'ಕೈ' ಕಾರ್ಯಕರ್ತರು!
'ಸಿಡಿ' ವಿಚಾರವನ್ನು ಸದಸನದಲ್ಲಿ ಪ್ರಸ್ತಾಪಿಸಲು ಯಾವುದೇ ಕಾನೂನಾತ್ಮಕ ತೊಂದರೆಗಳು ಇಲ್ಲ. ಜೊತೆಗೆ 'ಸಿಡಿ' ಬಿಡುಗಡೆಯ 12 ದಿನಗಳ ಬಳಿಕ ಎಫ್‌ಐಆರ್ ಆಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ 'ಸಿಡಿ' ವಿಚಾರವಾಗಿ ಕಾಯ್ದು ನೋಡುವ ತಂತ್ರಕ್ಕೆ ಶರಣಾಗಿದೆ ಎಂಬ ವರದಿಗಳು ಬರುತ್ತಿವೆ. ಒಂದಿಮ್ಮೆ ಬಿಜೆಪಿ ಆರೋಪಿಸುತ್ತಿರುವಂತೆ ಆ 'ಮಹಾನ್ ನಾಯಕ' ಏನಾದರೂ ಕಾಂಗ್ರೆಸ್ ಪಕ್ಷದವರಾಗಿದ್ದರೆ ಅದನ್ನು ಪ್ರಸ್ತಾಪ ಮಾಡುವುದರಿಂದ ಪಕ್ಷಕ್ಕೆ ಮುಜುಗುರಚವಾಗುತ್ತದೆ. ಹೀಗಾಗಿ ಈ ವಿಚಾರದ ಸುದ್ದಿಯೇ ಬೇಡ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಬಂದಂತಿದೆ.
ಒಟ್ಟಾರೆ ವಿರೋಧ ಪಕ್ಷದ ಸ್ಥಾನದಲ್ಲಿ ಬಿಜೆಪಿ ಏನಾದರೂ ಇದ್ದಿದ್ದರೇ ಇದನ್ನು ದೊಡ್ಡ ವಿಚಾರವನ್ನಾಗಿ ಮಾಡಿ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಯುವಂತೆ ಪಟ್ಟು ಹಿಡಿಯುತ್ತಿತ್ತು. ಆದರೆ ಗಾಜಿನ ಮನೆಯಲ್ಲಿ ಕೂತು ಮತ್ತೊಬ್ಬರ ಮನೆಗೆ ಕಲ್ಲು ಹೊಡೆಯುವುದು ಬೇಡ ಎಂಬಂತಿದೆ ಕಾಂಗ್ರೆಸ್ ನಾಯಕರ ನಡೆ. ಇದಕ್ಕೆ ತಮ್ಮ ನಾಯಕರೇ ಉತ್ತರ ಹೇಳಬಹುದು ಎಂದು ಕಾಂಗ್ರೆಸ್ ಕಾರ್ಯಕರ್ತರು ಇಡೀ ರಾಜ್ಯಾದ್ಯಂತ ಕಾಯುತ್ತಿದ್ದಾರೆ!












Click it and Unblock the Notifications