ಭ್ರಷ್ಟರೆಂದರೆ ಕರ್ನಾಟಕ ಬಿಜೆಪಿಗೆ ಇಷ್ಟೊಂದು ಪ್ರೀತಿ ಏಕೆ?
ಬೆಂಗಳೂರು, ಏಪ್ರಿಲ್ 14; ಈ ಬಾರಿಯ ಕರ್ನಾಟಕದ ಚುನಾವಣೆಗೆ ಬಿಜೆಪಿ 189 ಮತ್ತು 23 ಅಭ್ಯರ್ಥಿಗಳ ಎರಡು ಪಟ್ಟಿ ಪ್ರಕಟಿಸಿದೆ. ಪಟ್ಟಿಯಲ್ಲಿ ಭಾರೀ ಬದಲಾವಣೆಗಳಿದ್ದು, ಹಾಲಿ ಶಾಸಕರು ಟಿಕೆಟ್ ಕಳೆದುಕೊಂಡಿದ್ದಾರೆ. ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಆದರೆ ಪಟ್ಟಿಯಲ್ಲಿ ಭ್ರಷ್ಟರು ಇದ್ದಾರೆ ಎಂದು ಪ್ರತಿಪಕ್ಷ ಟ್ವೀಟ್ ಬಾಣ ಬಿಟ್ಟಿದೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್,'IMA ಹಗರಣ ಹೊರಬಂದಾಗ BJP Karnataka ನಾಯಕರು ಬೀದಿಯಲ್ಲಿ ಉರುಳಾಡಿ, ಹೊರಳಾಡಿ ಬಾಯಿ ಬಡಿದುಕೊಂಡಿದ್ದರು. ಈಗ ಅದೇ ಹಗರಣದ ರೋಷನ್ ಬೇಗ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅದೇ ಅಕ್ರಮದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಅಧಿಕಾರಿ ಎಲ್. ಸಿ. ನಾಗರಾಜ್‌ಗೆ ಟಿಕೆಟ್ ನೀಡಿದೆ. ಭ್ರಷ್ಟರೆಂದರೆ ಬಿಜೆಪಿಗೆ ಇಷ್ಟೊಂದು ಪ್ರೀತಿ ಏಕೆ?' ಎಂದು ಕೇಳಿದೆ.

ಬಿಜೆಪಿ ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರಕ್ಕೆ ಎಲ್. ಸಿ. ನಾಗರಾಜ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ನಿವೃತ್ತ ಕೆಎಎಸ್ ಅಧಿಕಾರಿಯಾದ ಎಲ್. ಸಿ. ನಾಗರಾಜ್ ಹೆಸರು ಐಎಂಎ ವಂಚನೆ ಪ್ರಕರಣ ಬೆಳಕಿಗೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಐಎಂಎಎ ಪರವಾಗಿ ವರದಿ ನೀಡಲು 4.5 ಕೋಟಿ ರೂ. ಲಂಚ ಸ್ವೀಕಾರ ಮಾಡಿದ್ದಾರೆ ಎಂಬುದು ಆರೋಪ.
ಐಎಂಎ ಹಗರಣದ ತನಿಖೆ ನಡೆಯುವಾಗ ಎಲ್. ಸಿ. ನಾಗರಾಜ್ ಬಂಧನವೂ ಆಗಿತ್ತು. ಬಳಿಕ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿತ್ತು. ಅವರು ವೈಯಕ್ತಿಕ ಕಾರಣದಿಂದ ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗೆ ಮಾರ್ಚ್ 9ರಂದು ರಾಜೀನಾಮೆ ನೀಡಿದ್ದರು. ಆ ರಾಜೀನಾಮೆಯೂ ಅಂಗೀಕಾರವಾಗಿದೆ. ಈಗ ಅವರು ಬಿಜೆಪಿಯ ಅಭ್ಯರ್ಥಿ.

1998ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿ ಎಲ್. ಸಿ. ನಾಗರಾಜ್ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆಗ ಐಎಂಎ ಪರವಾಗಿ ವರದಿ ನೀಡಲು ಮೂರು ಕಂತುಗಳಲ್ಲಿ 4.5 ಕೋಟಿ ರೂ. ಲಂಚ ಪಡೆದಿದ್ದರು ಎಂಬುದು ಆರೋಪ. ಈ ಪ್ರಕರಣದ ತನಿಖೆ ನಡೆಯುವಾಗ ಅವರ ನಿವಾಸದ ಮೇಲೆ ದಾಳಿಯನ್ನು ಸಹ ನಡೆಸಲಾಗಿತ್ತು.
ಬಿಜೆಪಿ ಟಿಕೆಟ್ ಹಂಚಿಕೆ ಕೋಟಾ; ಶುಕ್ರವಾರ ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'BJP Karnatakaದ ಸಾಮಾಜಿಕ ನ್ಯಾಯ ವಿಭಿನ್ನವಾದುದು. ಭ್ರಷ್ಟಾಚಾರದ ಕೋಟಾ, ರೌಡಿ ಕೋಟಾ, ಭ್ರಷ್ಟ ಅಧಿಕಾರಿಗಳ ಕೋಟಾ, ಸಿಡಿ ಕೋಟಾ, ಫ್ಯಾಮಿಲಿ ಕೋಟಾ, ಹೀಗೆ ಹಲವು ಕೋಟಾದಡಿಯಲ್ಲಿ ಟಿಕೆಟ್ ಹಂಚಲಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ!' ಎಂದು ಟೀಕಿಸಿದೆ.
ಮತ್ತೊಂದು ಟ್ವೀಟ್‌ನಲ್ಲಿ 'ಕಾಂಗ್ರೆಸ್ ಪಕ್ಷವು ಜನಪರ ಯೋಜನೆಗಳನ್ನು ಚರ್ಚಿಸಿದರೆ, ಬಿಜೆಪಿ ಭ್ರಷ್ಟಾಚಾರದಲ್ಲಿ ಬಿದ್ದಿದೆ. ಸಿಎಂ ವಿರುದ್ಧ ಬಿಜೆಪಿಯಲ್ಲೇ ಶಾಸಕರಾಗಿದ್ದ ನೆಹರೂ ಒಲೆಕಾರ್ ಮಾಡಿದ 1,500 ಕೋಟಿ ಅಕ್ರಮದ ಬಗ್ಗೆ ತನಿಖೆಗೆ ವಹಿಸಿ ಪ್ರಾಮಾಣಿಕತೆ ನಿರೂಪಿಸಬೇಕಾದ್ದು Basavaraj Bommai ಅವರ ಕರ್ತವ್ಯ. ಯಾವುದೇ ತನಿಖೆಗೆ ಮುಂದಾಗದಿರುವುದೇಕೆ ಸಿಎಂ?' ಎಂದು ಪ್ರಶ್ನೆ ಮಾಡಿದೆ.
ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಅನರ್ಹತೆ ಭೀತಿ ಎದುರಿಸುತ್ತಿದ್ದ ಹಾವೇರಿಯ ಬಿಜೆಪಿ ಶಾಸಕ ನೆಹರೂ ಓಲೇಕಾರ್‌ಗೆ ಈ ಬಾರಿಯ ಚುನಾವಣೆ ಟಿಕೆಟ್ ಕೈತಪ್ಪಿತ್ತು. ಹಾವೇರಿ ಕ್ಷೇತ್ರಕ್ಕೆ ಗವಿಸಿದ್ಧಪ್ಪ ದ್ಯಾಮಣ್ಣವರ್ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿತ್ತು.
ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದ ವಿಚಾರವನ್ನು ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದೆ. 'BJP4Karnataka ನಾಯಕರು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಟೀಕಿಸುತ್ತಿದ್ದರು. ಈಗ ಆ ನಾಯಕರಿಗೆ ಟಿಕೆಟ್ ಗ್ಯಾರಂಟಿ ಇಲ್ಲ, ಟಿಕೆಟ್ ಸಿಕ್ಕವರಿಗೆ ಗೆಲುವಿನ ಗ್ಯಾರಂಟಿ ಇಲ್ಲ, ರಾಜ್ಯದಲ್ಲಿ ಬಿಜೆಪಿಗೇ ಗ್ಯಾರಂಟಿ ಇಲ್ಲ! ನಾವು ಅಧಿಕಾರಕ್ಕೆ ಬರುವುದೂ ಗ್ಯಾರಂಟಿ, ನಮ್ಮ ಭರವಸೆಗಳನ್ನೂ ಈಡೇರಿಸುವುದೂ ಗ್ಯಾರಂಟಿ, ಪ್ರಗತಿ ತರುವುದೂ ಗ್ಯಾರಂಟಿ' ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದೆ.











Click it and Unblock the Notifications