ನೂತನ ರಾಜ್ಯ ಗೃಹಸಚಿವರ ಹೆಸರು ಅಂತಿಮ: ಈ ನಾಲ್ವರಲ್ಲಿ ಒಬ್ಬರು?
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಂದ ತೆರವಾದ ಆಯಕಟ್ಟಿನ ಗೃಹಖಾತೆಯ ಸ್ಥಾನಕ್ಕೆ ನಾಲ್ವರು ಹೆಸರು ಕೇಳಿಬರುತ್ತಿದೆ. ಇದರಲ್ಲಿ ಮೂವರು ಹಿರಿಯ ಸಚಿವರು ಮತ್ತೊಬ್ಬರು ಯುವ ಕಾಂಗ್ರೆಸ್ ಸಚಿವರು.
ಅದ್ಯಾಕೋ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಂದ ತೆರವಾದ ಆಯಕಟ್ಟಿನ ಗೃಹಖಾತೆಯ ಮೇಲೆ ಯಾರ ಕಣ್ಣೂ ಬಿದ್ದಿಲ್ಲ. ಇಲ್ಲಾಂದ್ರೆ ಅದೇನು ಲಾಬಿ, ಅದೇನು ಒತ್ತಡ, ಅದೇನು ಜಾತಿ ಲೆಕ್ಕಾಚಾರ, ಅದೇನು ಹೈಕಮಾಂಡ್ ಕಡೆ ಓಡಾಟ ನಡೆಯುತ್ತಿತ್ತು!
ಚುನಾವಣೆ ಸಮೀಪಿಸುತ್ತಿರುವ ಈ ವೇಳೆ ಗೃಹಖಾತೆಯ ಮೇಲೆ ಯಾರಿಗೂ ಅಷ್ಟು ಮನಸ್ಸು ಇದ್ದಂತಿಲ್ಲ. ಆದರೆ ಅದೆಷ್ಟು ದಿನಾಂತ ಆ ಹುದ್ದೆಯನ್ನು ಖಾಲಿ ಬಿಡಲು ಸಾಧ್ಯ? ಸದ್ಯ, ಮುಂದಿನ ಸೂಚನೆಯವರೆಗೂ ಪರಮೇಶ್ವರ್ ಅವರಿಗೇ ಆ ಹುದ್ದೆಯನ್ನು ನಿಭಾಯಿಸಲು ಸಿಎಂ ಸೂಚಿಸಿದ್ದಾರೆ.
ಕಾನೂನು, ಸುವ್ಯವಸ್ಥೆಯ ದೃಷ್ಟಿಯಿಂದ ಆ ಹುದ್ದೆಯನ್ನು ತುಂಬಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವುದರಿಂದ ಹಿರಿಯರೊಬ್ಬರಿಗೆ ಗೃಹಖಾತೆ ಒಲಿಯುವ ಸಾಧ್ಯತೆಯಿದೆ. ಹಾಗಾಗಿ, ಒಂದ್ನಾಲ್ಕು ಹೆಸರುಗಳು ಆ ಹುದ್ದೆಗೆ ಕೇಳಿ ಬರುತ್ತಿದೆ.
ಮೊನ್ನೆ ಜೂನ್ 21ಕ್ಕೆ ಮುಕ್ತಾಯಗೊಂಡ ಅಧಿವೇಶನದ ನಂತರ, ಗೃಹಖಾತೆಯ ಜೊತೆಗೆ ಸಂಪುಟದಲ್ಲಿ ಸಣ್ಣ ಸರ್ಜರಿ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದು, ರಾಹುಲ್ ಗಾಂಧಿ ಸ್ವದೇಶಕ್ಕೆ ವಾಪಸಾದ ನಂತರ ಆದೇಶ ಹೊರಬೀಳಲಿದೆ ಎನ್ನುವ ಮಾಹಿತಿಯಿದೆ.
ಮೂಲಗಳ ಪ್ರಕಾರ ಕೆ ಜೆ ಜಾರ್ಜ್ ಅವರಿಗೆ ಗೃಹಖಾತೆಯನ್ನು ನೀಡಲು ಸಿಎಂ ನಿರ್ಧರಿಸಿದ್ದರೂ, ಬೆಂಗಳೂರು ಅಭಿವೃದ್ದಿ ಸಚಿವರಾಗಿ ಸಾಕಷ್ಟು ಕೆಲಸಗಳು ಬಾಕಿ ಉಳಿದಿರುವುದರಿಂದ, ಜಾರ್ಜ್ ಅವರನ್ನು ಮತ್ತೆ ಗೃಹಸಚಿವರನ್ನಾಗಿ ನೇಮಿಸುವ ಸಾಧ್ಯತೆ ಕಮ್ಮಿ. ಮುಂದೆ ಓದಿ..

ಡಿ ಕೆ ಶಿವಕುಮಾರ್ ಹೆಸರು ಅಂತಿಮ ಸಾಧ್ಯತೆಯಿಲ್ಲ
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಇನ್ನಿಲ್ಲದಂತೆ ಲಾಬಿ ನಡೆಸಿದ್ದ ಡಿ ಕೆ ಶಿವಕುಮಾರ್ ಅವರಿಗೆ ಚುನಾವಣಾ ಉಸ್ತುವಾರಿಯ ಜವಾಬ್ದಾರಿ ನೀಡಿರುವುದರಿಂದ, ಡಿಕೆಶಿ ಅವರ ಹೆಸರು ಗೃಹಖಾತೆಗೆ ಅಂತಿಮವಾಗುವ ಸಾಧ್ಯತೆ ಕಮ್ಮಿಯೆಂದೇ ಹೇಳಬಹುದು.

ರಾಮಲಿಂಗ ರೆಡ್ಡಿ ಸಾಧ್ಯತೆ
ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ಸಾರಿಗೆ ಸಚಿವರಾಗಿರುವ ರಾಮಲಿಂಗ ರೆಡ್ಡಿಯವರ ಹೆಸರು ಗೃಹಸಚಿವ ಸ್ಥಾನಕ್ಕೆ ಕೇಳಿಬರುತ್ತಿದೆ. ಬೆಂಗಳೂರು ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿರುವ ರಾಮಲಿಂಗ ರೆಡ್ಡಿ, ನೂತನ ಗೃಹಸಚಿವರಾಗಿ ಆಯ್ಕೆಯಾದರೂ ಆಗಬಹುದು.

ರಮೇಶ್ ಕುಮಾರ್ ಹೆಸರೂ ಕೇಳಿ ಬರುತ್ತಿದೆ
ಬ್ರಾಹ್ಮಣ ಸಮುದಾಯದ ಮತ್ತು ಹಾಲೀ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಹೆಸರೂ ಕೇಳಿಬರುತ್ತಿದೆ. ನೇರನುಡಿಯ ರಾಜಕಾರಣಿಯೆಂದೇ ಹೆಸರಾಗಿರುವ ರಮೇಶ್ ಕುಮಾರ್ ಅವರನ್ನು ಆಯ್ಕೆಮಾಡಿದರೆ ಕೋಲಾರ ಭಾಗಕ್ಕೆ ಪ್ರಾತಿನಿಧ್ಯ ನೀಡಲಾಯಿತು ಎನ್ನುವ ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ.

ಆರ್ ವಿ ದೇಶಪಾಂಡೆ ಆದರೂ ಆಗಬಹುದು
ಬ್ರಾಹ್ಮಣ ಸಮುದಾಯದ ಮತ್ತೋರ್ವ ಪ್ರಭಾವಿ ಮುಖಂಡ ಆರ್ ವಿ ದೇಶಪಾಂಡೆ ಹೆಸರು ಗೃಹಸಚಿವ ಸ್ಥಾನಕ್ಕೆ ಕೇಳಿಬರುತ್ತಿರುವ ಪಟ್ಟಿಯಲ್ಲಿ ಇನ್ನೊಂದು. ಉತ್ತರಕನ್ನಡ (ಹಳಿಯಾಳ ಕ್ಷೇತ್ರದ ಶಾಸಕ) ಭಾಗದ ಹಿರಿಯ ಮುಖಂಡರಾಗಿರುವ ದೇಶಪಾಂಡೆ ಹಾಲೀ ವಾಣಿಜ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಖಾತೆಯ ಸಚಿವರು.

ಸಂತೋಷ್ ಲಾಡ್ ಹೆಸರು ಸಿಎಂ ಸೂಚಿಸಬಹುದು
ಯುವಕರಿಗೆ ಸ್ಥಾನ ನೀಡಬೇಕು ಎನ್ನುವ ನಿರ್ಧಾರಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಂದರೆ, ಕಾರ್ಮಿಕ ಸಚಿವರಾಗಿರುವ ಸಂತೋಷ್ ಲಾಡ್ ಅವರ ಹೆಸರನ್ನು ಪ್ರಸ್ತಾವಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.












Click it and Unblock the Notifications