ಕರ್ನಾಟಕದಲ್ಲಿ ಮಹಿಳಾ ವಿದ್ಯಾರ್ಥಿಗಳು ಯಾವ ಕೋರ್ಸ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ?
ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ವಿದ್ಯಾರ್ಥಿನಿಯರು ಯಾವ ಕೋರ್ಸ್‌ನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ ಗೊತ್ತಾ? ಉನ್ನತ ಶಿಕ್ಷಣ ಇಲಾಖೆ ಸಂಗ್ರಹಿಸಿದ ಅಂಕಿಅಂಶಗಳು ಏನು ಹೇಳುತ್ತವೆ ನೋಡಿ.
ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಆಸಕ್ತಿಯನ್ನು ಹೊಂದಿದ್ದಾರೆ. ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಸಂಗ್ರಹಿಸಿದ ಅಂಕಿಅಂಶಗಳು ತೋರಿಸುತ್ತವೆ.
2020-21ರಲ್ಲಿ ಪದವಿಪೂರ್ವ ಮಟ್ಟದಲ್ಲಿ ವಿಜ್ಞಾನ ಕೋರ್ಸ್‌ಗಳಿಗೆ ದಾಖಲಾದ ಒಟ್ಟು 2,29,576 ವಿದ್ಯಾರ್ಥಿಗಳ ಪೈಕಿ 1,42,832 ಬಾಲಕಿಯರು (ಶೇ 62) ಮತ್ತು 86,744 ಬಾಲಕರು ಇದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯು ಸಂಗ್ರಹಿಸಿದ ಅಂಕಿಅಂಶಗಳು ತೋರಿಸುತ್ತವೆ.
ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಉನ್ನತ ಶಿಕ್ಷಣದ ಅಖಿಲ ಭಾರತ ಸಮೀಕ್ಷೆ (AISHE) ಭಾಗವಾಗಿ ಇಲಾಖೆಯು ಈ ಡೇಟಾವನ್ನು ಸಂಗ್ರಹಿಸಿದೆ. ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದೆ. ಇಲಾಖೆಯು 2014-15ನೇ ಶೈಕ್ಷಣಿಕ ವರ್ಷದಿಂದ ದತ್ತಾಂಶವನ್ನು ಕ್ರೋಢೀಕರಿಸಿದೆ ಮತ್ತು ಆ ವರ್ಷದಲ್ಲಿ ವಿಜ್ಞಾನ ವಿಭಾಗದ ಒಟ್ಟು ಪ್ರವೇಶಗಳು 1,39,025 ಆಗಿತ್ತು. ಇದರಲ್ಲಿ 86,288 ವಿದ್ಯಾರ್ಥಿಗಳು ಹುಡುಗಿಯರು ಮತ್ತು 52,737 ಬಾಲಕರು ಇದ್ದಾರೆ.

ವೈದ್ಯಕೀಯ ಕೋರ್ಸ್‌ಗಳತ್ತ ವಿದ್ಯಾರ್ಥಿನಿಯರ ಚಿತ್ತ
ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ಕೋರ್ಸ್‌ಗಳಲ್ಲೂ ಇದೇ ಟ್ರೆಂಡ್ ಆಗಿತ್ತು. 2020-21ರಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳ ಪೈಕಿ 2/3ರಷ್ಟು ಅಭ್ಯರ್ಥಿಗಳು ಹುಡುಗಿಯರಾಗಿದ್ದರು ಮತ್ತು ಇದು ಕಳೆದ ಏಳು ವರ್ಷಗಳಿಂದ ಟ್ರೆಂಡ್ ಆಗಿದೆ. 2020-21ರಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ನೋಂದಾಯಿಸಿದ ಒಟ್ಟು 3,27,127 ವಿದ್ಯಾರ್ಥಿಗಳ ಪೈಕಿ 2,06,002 ಹುಡುಗಿಯರು ಮತ್ತು 1,21,120 ಹುಡುಗರು ಇದ್ದಾರೆ.
ಕುತೂಹಲಕಾರಿಯಾಗಿ, 2020-21ರಲ್ಲಿ ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ಐದು ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳು ದಾಖಲಾಗಿದ್ದಾರೆ. ತಜ್ಞರ ಪ್ರಕಾರ, ವಿಜ್ಞಾನ ವಿಭಾಗದಲ್ಲಿ ಹೆಚ್ಚು ಹುಡುಗಿಯರು ಪಿಯುಸಿ ಹಂತದಲ್ಲಿ ತೇರ್ಗಡೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.
ಈ ಬಗ್ಗೆ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಡಾ.ಎಸ್.ಸಚ್ಚಿದಾನಂದ ಮಾತನಾಡಿ, ಪಿಯುಸಿ ಹಂತದಲ್ಲಿ ವಿಜ್ಞಾನದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ವಿಜ್ಞಾನವನ್ನು ಅದರಲ್ಲೂ ವೈದ್ಯಕೀಯ ಕ್ಷೇತ್ರವನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಈ ಪ್ರವೃತ್ತಿಯು ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಹಂತದಲ್ಲಿಯೂ ಸಹ ಪ್ರಿ-ಕ್ಲಿನಿಕಲ್ ಮತ್ತು ಪ್ಯಾರಾ-ಕ್ಲಿನಿಕಲ್ ಎರಡರಲ್ಲೂ ಮುಂದುವರಿಯುತ್ತದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಾತನಾಡಿ, ಕೆಜಿಯಿಂದ ಪಿಜಿವರೆಗಿನ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಸೇರಿದಂತೆ ಪ್ರೋತ್ಸಾಹಧನಗಳು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದರು.

ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ
ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020-21ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರ ದಾಖಲಾತಿ ಸ್ವಲ್ಪ ಕಡಿಮೆಯಾಗಿದೆ. ಮಾಹಿತಿಯ ಪ್ರಕಾರ, ಅವರ ದಾಖಲಾತಿ ಸುಮಾರು 10,000 ರಷ್ಟು ಕಡಿಮೆಯಾಗಿದೆ.
2019-20ರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ದಾಖಲಾತಿ 68,637 ಆಗಿತ್ತು. 2020-21ರಲ್ಲಿ ಒಟ್ಟು ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿ 1,24,437 ಆಗಿದೆ. ವಿಶ್ಲೇಷಣೆಯ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ ಪುರುಷ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣ ಪಡೆಯುವ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.











Click it and Unblock the Notifications