ಯಡಿಯೂರಪ್ಪ ಜೈಲಿಗೆ ಹೋದಾಗ ಸಂಭ್ರಮಿಸಿದವರು, ಈಗ ಅಳುತ್ತಿದ್ದಾರೆ!
ಬೆಂಗಳೂರು, ಸೆ 5: "ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಯಾರೂ ಹೇಳಿಕೆಯನ್ನು ನೀಡಬಾರದು" ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪನವರ ಕಟ್ಟಪ್ಪಣೆಯ ನಡುವೆಯೂ, ಬಿಜೆಪಿ ಮುಖಂಡರು ಹೇಳಿಕೆಯನ್ನು ನೀಡುತ್ತಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ, ಬಿ ವೈ ರಾಘವೇಂದ್ರ, ಡಾ. ಅಶ್ವಥ್ ನಾರಾಯಣ, ರಾಮದಾಸ್.. ಹೀಗೆ ಪ್ರತಿಕ್ರಿಯೆ ನೀಡುತ್ತಿರುವವರ ಪಟ್ಟಿಗೆ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೊಸ ಸೇರ್ಪಡೆಯಾಗಿದ್ದಾರೆ.
ಡಿಕೆಶಿ ಬಂಧನದ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, " ಯಡಿಯೂರಪ್ಪನವರು ಜೈಲಿಗೆ ಹೋಗಿದ್ದಾಗ ಸಂಭ್ರಮಿಸಿದವರು ಈಗ ಅಳುತ್ತಿದ್ದಾರೆ" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

" ಶಿವಕುಮಾರ್ ಜೈಲಿಗೆ ಹೋಗಿರುವುದಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರು ಜೈಲಿಗೆ ಹೋಗಲಿ ಎಂದು ನಾವು ಬಯಸಿದವರೂ ಅಲ್ಲ" ಎಂದು ರೇಣುಕಾಚಾರ್ಯ ಸ್ಪಷ್ಟನೆಯನ್ನು ನೀಡಿದ್ದಾರೆ.
" ಹಿಂದೆ ಯಡಿಯೂರಪ್ಪನವರ ಬಂಧನವಾದಾಗ, ರಾಜಭವನ ಕಾಂಗ್ರೆಸ್ ಕಚೇರಿಯಂತೆ ಇರಲಿಲ್ಲವೇ' ಎಂದು ರೇಣುಕಾಚಾರ್ಯ, ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ.
"ಕಾಂಗ್ರೆಸ್ ನಾಯಕರು ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುವ ಸಂದರ್ಭ ಈಗ ಎದುರಾಗಿದೆ" ಎಂದು ಮೈಸೂರು ಕೃಷ್ಣರಾಜ ಬಿಜೆಪಿ ಶಾಸಕ ರಾಮದಾಸ್ ವ್ಯಂಗ್ಯವಾಡಿದ್ದರು.
"ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನದ ವಿಚಾರದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡಿಲ್ಲ, ಕಾನೂನು ಹೋರಾಟದಲ್ಲಿ ಅವರಿಗೆ ಒಳ್ಳೆಯದಾಗಲಿ" ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾರೈಸಿದ್ದರು.












Click it and Unblock the Notifications