ಫಲಿತಾಂಶದ ಬಂದ ತಕ್ಷಣವೇ ಕೇಂದ್ರದ ಸುಪರ್ದಿಗೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್: ಡಿಕೆಶಿ ಎಚ್ಚರಿಕೆ ಪರಿಣಾಮ?
ಬೆಂಗಳೂರು, ಮೇ 16: ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಕೇಂದ್ರ ತನಿಖಾ ದಳದ ಮುಂದಿನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. ಮೇ 25 ರಂದು ಸುಬೋಧ್ ಕುಮಾರ್ ಜೈಸ್ವಾಲ್ ಅವರು ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಈ ಆದೇಶ ಹೊರಬಿದ್ದಿದೆ.
59 ವರ್ಷ ವಯಸ್ಸಿನ ಪ್ರವೀಣ್ ಸೂದ್ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ಈ ಹುದ್ದೆಗೆ ನೇಮಕಗೊಂಡಿದ್ದಾರೆ. ಪ್ರವೀಣ್ ಸೂದ್ ಅವರ ನಾಮನಿರ್ದೇಶನವನ್ನು ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಒಳಗೊಂಡ ಉನ್ನತ ಮಟ್ಟದ ಸಮಿತಿಯು ಅನುಮೋದಿಸಿದೆ.

ಕರ್ನಾಟಕ ಕೇಡರ್‌ನ ( 1986-ಬ್ಯಾಚ್ ) ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿದ್ದಾರೆ. ಮತ್ತು ಜೈಸ್ವಾಲ್ ನಂತರ ದೇಶದ ಅತ್ಯಂತ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಸೂದ್ ಪ್ರಭಾವಶಾಲಿ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರು ಐಐಟಿ-ದೆಹಲಿ, ಐಐಎಂ-ಬೆಂಗಳೂರು ಮತ್ತು ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 2024ರಲ್ಲಿ ನಿವೃತ್ತಿಯಾಗಬೇಕಿದ್ದ ಅಧಿಕಾರಿಗೆ ಈಗ ಎರಡು ವರ್ಷಗಳ ಅವಧಿ ನಿಗದಿಯಾಗಲಿದೆ.

ಪ್ರಸ್ತುತ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿರುವ ಸೂದ್ ಅವರು ಈ ಹಿಂದೆ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಪೊಲೀಸ್ ಅಧೀಕ್ಷಕರಾಗಿದ್ದರು. ಪೊಲೀಸ್ ಉಪ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ (ಸಂಚಾರ) ಮತ್ತು ಮೈಸೂರು ನಗರದ ಪೊಲೀಸ್ ಕಮಿಷನರ್ ಆಗಿದ್ದರು. ಐಪಿಎಸ್ ಅಧಿಕಾರಿ ಮಾರಿಷಸ್ ಸರ್ಕಾರದ ಪೊಲೀಸ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸೂದ್ ಅವರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಕಂಪ್ಯೂಟರ್ ವಿಂಗ್) ಸೇವೇ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್ ಅನ್ನು ಕಾರ್ಯಗತಗೊಳಿಸುವ ಸವಾಲಿನ ನಿಯೋಜನೆಯನ್ನು ಮೇಲ್ವಿಚಾರಣೆ ಮಾಡಿದರು. ರಿಯಲ್ ಟೈಮ್ ಮೇಲ್ವಿಚಾರಣೆ ಮತ್ತು ಪೊಲೀಸ್ ಠಾಣೆಗಳನ್ನು ಕೇಂದ್ರೀಯ ನೆಟ್‌ವರ್ಕ್‌ನೊಂದಿಗೆ ಸಂಪರ್ಕಿಸುವ ಮೂಲಕ ಮಾಹಿತಿ ಹಂಚಿಕೊಳ್ಳುವ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ.

ಮಾರ್ಚ್‌ನಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಡಿಜಿಪಿ ಪ್ರವೀಣ್ ಸೂದ್ ಅವರನ್ನು 'ನಾಲಾಯಕ್' ಎಂದು ಕರೆದಿದ್ದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದಿಂದ ಗೆದ್ದಿದ್ದು, ಡಿಕೆ ಶಿವಕುಮಾರ್ ಸಿಎಂ ಅಭ್ಯರ್ಥಿಯಾಗಿದ್ದಾರೆ. ಆದರೆ, ಮುಂದಿನ ಎರಡು ವರ್ಷಗಳ ಕಾಲ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ಪ್ರವೀಣ್ ಸೂದ್ ದೆಹಲಿಗೆ ಸ್ಥಳಾಂತರಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಡಿಜಿಪಿ ಒಲವು ತೋರುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಮಾರ್ಚ್‌ನಲ್ಲಿ ಹೇಳಿದ್ದರು. ಸೂದ್ ಅವರು ಕರ್ನಾಟಕ ಪೊಲೀಸ್ ಉಸ್ತುವಾರಿಯಾಗಿದ್ದಾಗ, ಕಾಂಗ್ರೆಸ್ ನಾಯಕರ ವಿರುದ್ಧ ಸುಮಾರು 25 ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಬಿಜೆಪಿ ನಾಯಕರ ವಿರುದ್ಧ ಯಾವುದೂ ಇಲ್ಲ ಎಂದು ಡಿಕೆಶಿ ಆರೋಪಿಸಿದ್ದರು.












Click it and Unblock the Notifications