ʻಲಿಂಗಾಯತ - ಇಸ್ಲಾಂʼ ಈ ವಿಷಯದಲ್ಲಿ ಒಂದೇ: ಪಂಡಿತಾರಾಧ್ಯ ಸ್ವಾಮೀಜಿ, ಏನದು ?
Panditharadhya swamiji: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಇದೀಗ ಮತ್ತೆ ಹಿಂದೂ ಧರ್ಮದ ಕಟ್ಟಾ ಅನುಯಾಯಿಗಳ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಪಂಡಿತಾರಾಧ್ಯ ಸ್ವಾಮೀಜಿ ಅವರ ನೇರ ಹಾಗೂ ನಿಷ್ಠುರ ಮಾತುಗಳು ಕೆಲವೊಮ್ಮೆ ಹಿಂದೂ ಅನುಯಾಯಿಗಳಿಗೆ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅದೇ ರೀತಿ ಮುಸ್ಲಿಂ ಹಾಗೂ ಹಿಂದೂ ಸಮುದಾಯ (ಲಿಂಗಾಯತರ) ಬಗ್ಗೆ ಶಿವಾಚಾರ್ಯರ ಮಾತು ಆಕ್ರೋಶಕ್ಕೆ ಕಾರಣವಾಗಿದೆ.
ಶಿವಾಚಾರ್ಯರು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ನಂಬುವುದರಿಲ್ಲಿ ನಂಬಿಕೆ ಇರಿಸಿಕೊಂಡಿದ್ದಾರೆ. ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಪ್ರತ್ಯೇಕವಾಗಿದೆ. ಹಿಂದೂ ಧರ್ಮದ ಒಳಗೆ ಲಿಂಗಾಯತರು ಬರುವುದಿಲ್ಲ ಎನ್ನುವ ಅಭಿಪ್ರಾಯವನ್ನು ಈ ಹಿಂದೆ ಸ್ವಾಮೀಜಿ ನೀಡಿದ್ದರು. ಇದೀಗ ಇಸ್ಲಾಂ ಧರ್ಮ ಹಾಗೂ ಲಿಂಗಾಯತ ಧರ್ಮದಲ್ಲಿ ಈ ನಿರ್ದಿಷ್ಟ ಸಾಮ್ಯತೆ ಇದೆ ಎಂದು ಶಿವಾಚಾರ್ಯರು ಹೇಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.

ಇಸ್ಲಾಂ - ಲಿಂಗಾಯತ ಧರ್ಮದ ಬಗ್ಗೆ ಸ್ವಾಮೀಜಿ ಹೇಳಿದ್ದೇನು ?
ಇಸ್ಲಾಂ ಹಾಗೂ ಲಿಂಗಾಯತ ಧರ್ಮ ಬೇರೆ ಬೇರೆ ಹೌದು. ಆದರೆ, ಎರಡನ್ನೂ ಎಲ್ಲರೂ ಸಮಾನವಾಗಿ ಸ್ವೀಕರಿಸಬೇಕು. ಒಬ್ಬ ದೇವರಿಗೆ ಹಲವು ನಾಮ (ದೇವನೊಬ್ಬ ನಾಮ ಹಲವು) ಎನ್ನುವಂತಷ್ಟೇ ಎಂದು ಸ್ವಾಮೀಜಿ ಹೇಳಿದ್ದಾರೆ. ಆದರೆ, ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ವಾದಿಸುವವರು ಹಾಗೂ ಅದರಲ್ಲಿ ನಂಬಿಕೆ ಇರಿಸಿರುವವರು ಸಹ ಸ್ವಾಮೀಜಿ ಅವರ ಮಾತಿನಿಂದ ಅಂತರ ಕಾಪಾಡಿಕೊಂಡಿದ್ದಾರೆ.
ಎಲ್ಲಾ ಧರ್ಮಗಳು ಮನುಷ್ಯರ ಸೃಷ್ಟಿಸಿದ್ದೇ ಆಗಿದೆ. ನಾವು ಎಲ್ಲಾ ಧರ್ಮಗಳನ್ನೂ ಸಮಾನವಾಗಿ ನೋಡಬೇಕು. ಇನ್ನು ಇಸ್ಲಾಂ ಧರ್ಮದಲ್ಲಿ ದಾನ ಮಾಡಬೇಕು ಎನ್ನುವ ಪದ್ಧತಿಯನ್ನು ರೂಢಿಸಿಕೊಳ್ಳಲಾಗಿದೆ. ಅದೇ ರೀತಿ ಲಿಂಗಾಯತ ಧರ್ಮದಲ್ಲಿಯೂ ದಾಸೋಹ ಪದ್ಧತಿ ಇದೆ. ಇದೇ ರೀತಿ ಹಲವು ವಿಚಾರಗಳಲ್ಲಿ ಒಂದೇ ಮಾದರಿ ಇದೆ. ಎಲ್ಲಾ ಧರ್ಮಗಳ ಮೂಲ ಉದ್ದೇಶ ಒಳ್ಳೆಯದ್ದನ್ನು ಹಂಚುವುದೇ ಆಗಿದೆ. ವಿಪರ್ಯಾಸವೆಂದರೆ, ನಮ್ಮ ದೇಶದಲ್ಲಿ ಮತಾಂಧತೆ ಹೆಚ್ಚಾಗ್ತಿದೆ.
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮತಾಂಧತೆ ಹೆಚ್ಚಾಗುತ್ತಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳು ಭಾಷಣದಲ್ಲಿ ಮಾಡಿದ ಕೆಲವು ಅಂಶಗಳು ಎಲ್ಲರೂ ಒಪ್ಪುವಂತೆ ಇದೆಯಾದರೂ, ಇಸ್ಲಾಂ - ಲಿಂಗಾಯತ ಧರ್ಮವನ್ನು ಸರಿಸಮಾನ ಅಥವಾ ಹೋಲಿಕೆ ಮಾಡಿ ಮಾತನಾಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಗಣಪತಿ ಪೂಜೆ ನಮ್ಮ ಸಂಪ್ರದಾಯವಲ್ಲ
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಈ ಹಿಂದೆ ಗಣಪತಿ ಪೂಜೆ ನಮ್ಮ ಸಂಪ್ರದಾಯವಲ್ಲ ಎಂದಿದ್ದರು. ಸ್ವಾಮೀಜಿಗಳ ಈ ಹೇಳಿಕೆಯೂ ಸಹ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಲಿಂಗಾಯತ ಧರ್ಮ ಪ್ರತ್ಯೇಕವಾದದ್ದು ಎನ್ನುವ ಅಭಿಪ್ರಾಯ ಕೆಲವರಲ್ಲಿ ಇದೆಯಾದರೂ ಚಿಕ್ಕಂದಿನಿಂದಲೂ ಹಿಂದೂ ಧರ್ಮದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ರೀತಿಯ ಹೇಳಿಕೆಗಳು ಸರಿ ಎನಿಸಿರಲಿಲ್ಲ. ಹಿಂದೂ ಧರ್ಮದಲ್ಲಿ ಗಣಪತಿಗೆ ವಿಶೇಷವಾದ ಸ್ಥಾನವಿದೆ. ಆದರೆ, ಸ್ವಾಮೀಜಿ ಗಣಪತಿ ಪೂಜೆ ಬಗ್ಗೆ ತೀವ್ರ ವಿವಾದವಾದಗಲೂ ಅದನ್ನೇ ಪುನರುಚ್ಚರಿಸಿದ್ದರು. ನಮ್ಮ ಸಂಸ್ಕೃತಿ ಎಂದರೆ ಲಿಂಗಾಯತ, ಶರಣರ ಸಂಸ್ಕೃತಿ. ಈ ಸಂಸ್ಕೃತಿಯಲ್ಲಿ ಗಣಪತಿ ಪೂಜೆ ಇಲ್ಲ ಎಂದಿದ್ದರು.












Click it and Unblock the Notifications