ಕೋವಿಡ್ ಲಸಿಕೆಯಿಂದ ಆರೋಗ್ಯ ಸಮಸ್ಯೆ ಆಗುತ್ತಿದೆಯೇ ಜನ ಹೇಳುತ್ತಿರುವುದೇನು ?
ಮಳೆ ನಿಂತರೂ ಮಳೆಯ ಹನಿಗಳು ನಿಲ್ಲಲಿಲ್ಲ ಎನ್ನುವಂತೆ ಕೋವಿಡ್ ಸಾಂಕ್ರಾಮಿಕ ರೋಗ ದೇಶದಲ್ಲಿ ಕ್ಷೀಣವಾದರೂ ಕೋವಿಡ್ ಆರೋಗ್ಯ ಸಮಸ್ಯೆಗಳು ಕಡಿಮೆ ಆಗಿಲ್ಲ. ಇದರ ನಡುವೆ ಕೋವಿಡ್ ಸಮಸ್ಯೆಯಿಂದ ಹಾರ್ಟ್ ಅಟ್ಯಾಕ್ ಆಗುತ್ತಿದೆಯೇ ಎನ್ನುವ ವಿಚಾರವಾಗಿ ಗಂಭೀರ ಚರ್ಚೆಗಳು ನಡೆದಿವೆ. ಈ ಬಗ್ಗೆ ಜನ ಪರ - ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ಲಸಿಕೆಯ ಪರಿಣಾಮದಿಂದ ಕರ್ನಾಟಕದಲ್ಲಿ ಹಾರ್ಟ್ ಅಟ್ಯಾಕ್ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮಾನ ವ್ಯಕ್ತಪಡಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಪ್ರಮಾಣವು ಮಿತಿ ಮೀರಿ ಹೆಚ್ಚಳವಾಗಿದೆ.
ಇದು ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಕೋವಿಡ್ ಲಸಿಕೆಯಿಂದ ಜನರ ಮೇಲೆ ಪರಿಣಾಮ ಆಗುತ್ತಿದೆಯೇ ಜನ ಈ ಬಗ್ಗೆ ಹೇಳಿರುವುದೇನು. ಜನರ ಮನಸ್ಸಿನಲ್ಲಿ ಇರುವ ಆತಂಕಗಳೇನು ಎನ್ನುವುದನ್ನು ನೋಡೋಣ. ಕೋವಿಡ್ ಇನ್ನೂ ದೇಶದಲ್ಲಿ ಸಂಪೂರ್ಣವಾಗಿ ಹೋಗಿಲ್ಲ. ಕೋವಿಡ್ ರೂಪಾಂತರ ವೈರಸ್‌ನ ಬಗ್ಗೆ ಇಂದಿಗೂ ವರದಿ ಆಗುತ್ತಿದೆ. ದೇಶದಲ್ಲಿ ಹಲವರಿಗೆ ಈ ಹೊಸ ವೈರಸ್ ದೃಢಪಡುತ್ತಿರುವುದು ಸಹ ಇದೆ. ಈ ಬಗ್ಗೆ ಜನ ಹೇಳಿರುವುದೇನು ಅಂತ ನೋಡೋಣ.

ಖಾದರ್ ಹೆಜ್ಮಾಡಿ ಎನ್ನುವವರು, ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿರುವುದು ರಿಫೈನ್ಡ್ ಎಡಿಬಲ್ ಎಣ್ಣೆಯ ಬಳಕೆಯಾಗಿದೆ. ಅನೇಕರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವ ಘಟನೆಯು ಇದಕ್ಕೆ ಸ್ಪಷ್ಟವಾದ ಸೂಚನೆಯಾಗಿದೆ. ಅದಕ್ಕಾಗಿಯೇ ಆಹಾರ ಸುರಕ್ಷತಾ ಇಲಾಖೆಯು ಪ್ರತಿಯೊಂದು ರಿಫೈನ್ಡ್ ಎಣ್ಣೆ ತಯಾರಿಕಾ ಘಟಕವನ್ನು ಪರಿಶೀಲಿಸಬೇಕಾಗಿದೆ. ತಯಾರಿಕೆಯ ವಿಧಾನ, ಬಳಸುವ ರಾಸಾಯನಿಕಗಳು ಮತ್ತು ಗುಣಮಟ್ಟ ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಬೇಕು. ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಇದು ಅತ್ಯಂತ ಅವಶ್ಯಕ ಕ್ರಮವಾಗಿದೆ. ಈ ಬಗ್ಗೆ ಕಡೆಗಣನೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಣ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಈಗಾಗಲೇ ಲಸಿಕೆ ತೆಗೆದುಕೊಂಡು ಮೂರು ವರ್ಷಗಳಾಗಿವೆ. ಈಗ ಈ ವಿಚಾರ ಅನವಶ್ಯಕ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆ ನೀತಿ ರೂಪಿಸಿದವರೇ ಅಧ್ಯಯನ ನಡೆಸಿದರೆ, ಪಕ್ಷಪಾತ ಇರುವ ಸಾಧ್ಯತೆ ಇದೆ.ಆದರೆ, ಸ್ವತಂತ್ರ ವಿಜ್ಞಾನಿಗಳು ಅಥವಾ ತೃತೀಯ ಪಕ್ಷದ ಸಂಸ್ಥೆಗಳು ಇಂತಹ ಅಧ್ಯಯನಗಳನ್ನು ನಡೆಸಿದರೆ, ಹೆಚ್ಚು ನಿಖರವಾದ ಮತ್ತು ನೈಜ ವರದಿಗಳನ್ನು ನಿರೀಕ್ಷಿಸಬಹುದು. ಅಧ್ಯಯನ ಬೇಕು ಸತ್ಯ ಗೊತ್ತಾಗಲು ಆದರೆ ಅಧ್ಯಯನ ಮಾಡುವವನು ಸತ್ಯದ ಜೊತೆ ಇದ್ದಿರಬೇಕು. ಇಲ್ಲದಿದ್ದರೆ, ಜನರ ಜೀವಕ್ಕೂ ಆಟವಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಪರ - ವಿರೋಧ ಚರ್ಚೆಗಳು ಜೋರಾಗಿವೆ. ಆದರೆ ಅಂತಿಮವಾಗಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ದಿಢೀರ್ ಎಂದು ಜನ ಹಾರ್ಟ್ ಅಟ್ಯಾಕ್‌ಗೆ ಒಳಗಾಗುತ್ತಿರುವುದನ್ನು ತಪ್ಪಿಸಬೇಕು. ಈ ರೀತಿ ಯಾವ ಕಾರಣಕ್ಕೆ ಹೃದಯಾಘಾತವಾಗುತ್ತಿದೆ ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಲಾಗಿದೆ.












Click it and Unblock the Notifications