ಬೂದಿಮುಚ್ಚಿದ ಕೆಂಡದಂತಿರುವ ಬಿಜೆಪಿ ಪಾಳಯ; ಡಿ ವಿ ಸದಾನಂದಗೌಡರ ಅಸಮಾಧಾನಕ್ಕೆ ಕಾರಣವೇನು?
ಬೆಂಗಳೂರು, ಅಕ್ಟೋಬರ್ 10: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಗೆ ಮೈತ್ರಿಗೆ ಸಜ್ಜಾಗಿದೆ. ಇತ್ತ ಆಡಳಿತರೂಢ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಂತೆ ಗೆಲುವು ಕಂಡಂತೆ ಲೋಕಸಭಾ ಚುನಾವಣೆಯಲ್ಲಿ ಗೆಲುವ ಸಾಧಿಸಲು ಹಲವು ತಂತ್ರಗಾರಿಕೆಯನ್ನ ನಡೆಸಿದೆ.
ಇತ್ತ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಹಲವು ನಾಯಕರು ಅಸಮಾಧಾನ ಹೊರಹಾಕಿದ್ದು, ಹಲವು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ರೆ, ಇನ್ನೂ ಕೆಲವರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ. ಇನ್ನೂ ಮಾಜಿ ಸಿಎಂ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಅವರು ಸಹ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ನಂತರ ಹಲವು ಬಿಜೆಪಿ ರಾಜ್ಯ ನಾಯಕರು ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ವಿರುದ್ದ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ಜೊತೆಗಿನ ಮೈತ್ರಿಗೆ ಡಿವಿ ಸದಾನಂದ ಗೌಡ ಅವರ ವಿರೋಧಕ್ಕೆ ಏನು ಕಾರಣ ಎಂಬುವುದು ಕುತೂಹಲ ಕೆರಳಿಸಿದೆ. ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರವಾಗಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ಹಾಲಿ ಸಂಸದ ಡಿ ವಿ ಸದಾನಂದಗೌಡ ಅಸಮಾಧಾನಕ್ಕೆ ಕಾರಣವಾಗಿದೆ.
ಜೆಡಿಎಸ್ ಮೈತ್ರಿ ಮಾತುಕತೆಯ ಸಂದರ್ಭದಲ್ಲಿ ಕರ್ನಾಟಕದ ನಾಯಕರ ಜೊತೆಗೆ ಹೈಕಮಾಂಡ್ ಚರ್ಚೆ ಮಾಡಿಲ್ಲ ಎಂಬುದು ಅಸಮಾಧಾನಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ಹೈಕಮಾಂಡ್ ವರಿಷ್ಠರು ಚರ್ಚೆ ಮಾಡಿಲ್ಲ. ನಮ್ಮನ್ನು ಹೊರಗಿಟ್ಟು ಕೇಂದ್ರದ ನಾಯಕರೇ ಈ ತೀರ್ಮಾನವನ್ನು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಾಧ್ಯಕ್ಷ , ವಿಪಕ್ಷ ನಾಯಕರ ಆಯ್ಕೆ ವಿಚಾರಕ್ಕೆ ವಿಳಂಬ!
2023 ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಹಲವು ಸಮುದಾಯದ ನಾಯಕರು ಬಹಿರಂಗವಾಗಿಯೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಎಲ್ಲಾ ಬದಲಾವಣೆಗಳ ನಡುವೆ ರಾಜ್ಯಾಧ್ಯಕ್ಷರ ಬದಲಾವಣೆಯನ್ನ ಹೈಕಮಾಂಡ ವಿಳಂಬ ಮಾಡುತ್ತಿದೆ ಎಂಬ ಬೇಸರವಿದೆ ಎಂದು ಹೇಳಲಾಗಿದೆ.

ಇನ್ನೂ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಬರೋಬ್ಬರಿ ಐದು ತಿಂಗಳು ಪೂರೈಸುತ್ತಾ ಬಂದರು ಸಹ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಹೈಕಮಾಂಡ್ ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ವಿಪಕ್ಷ ನಾಯಕನ ಆಯ್ಕೆಯ ಕುರಿತೇ ಆಡಳಿತರೂಢ ಕಾಂಗ್ರೆಸ್ ನಾಯಕರು ಛೇಡಿಸುತ್ತಿದ್ದು, ಭಾರೀ ಮುಜುಗರಕ್ಕೆ ಕಾರಣವಾಗಿದೆ. ಇದು ಸಹ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ಇನ್ನೂ ದಿನದಿಂದ ದಿನಕ್ಕೆ ರಾಜ್ಯ ಬಿಜೆಪಿ ನಾಯಕರನ್ನ ಹೈಕಮಾಂಡ್ ಕಡೆಗಣಿಸುತ್ತಿದೆ ಎಂಬ ಬೇಸರ ರಾಜ್ಯ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ.
ಲೋಕಸಭಾ ಚುನಾವಣಾ ಟಿಕೆಟ್ ಕೈ ತಪ್ಪುವ ಸಾಧ್ಯತೆ
2024 ರ ಲೋಕಸಭಾ ಚುನಾವಣೆಯಲ್ಲಿ ಈ ಬಾರೀ ಹಲವು ಬಿಜೆಪಿ ನಾಯಕರಿಗೆ ಟಿಕೆಟ್ ಕೈ ತಪ್ಪಿಲಿದೆ ಎನ್ನುವ ಚರ್ಚೆ ಬಿಜೆಪಿ ಪಾಳಯದಲ್ಲಿ ಜೋರಾಗಿದೆ. 12 ಜನ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂಬ ವರದಿಯಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ.ಸದಾನಂದಗೌಡ ಅವರಿಗೂ ಸಹ ಟಿಕೆಟ್ ಇಲ್ಲ ಎಂಬ ವರದಿ ಇದೆ.
ಇತ್ತ ಲೋಕಸಭಾ ಚುನಾವಣೆಗೆ ಜೆಡಿಎಸ್ ಗೆ ಜೊತೆಗೆ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಈಗಾಗಲೇ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ? ಎಂಬ ಕುತೂಹಲ ಕೆರಳಿಸಿದೆ.
ಮಂಡ್ಯ ಕ್ಷೇತ್ರ ಮೈತ್ರಿಯಲ್ಲಿ ಜೆಡಿಎಸ್ ಪಾಲಾದ್ರೆ ಸುಮಲತಾ ಅಂಬರೀಶ್ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗಳು ಶುರುವಾಗಿದೆ. ಸುಮಲತಾ ಅವರು ಮಂಡ್ಯ ಕ್ಷೇತ್ರವನ್ನು ತ್ಯಜಿಸಿದಲ್ಲಿ ಬೆಂಗಳೂರು ಉತ್ತರ ಬಿಜೆಪಿಗೆ ಸೇಫ್ ಝೋಜ್ ಆಗಿರುವುದರಿಂದ ಇಲ್ಲೇ ಸ್ಪರ್ಧೆಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಸಹಜವಾಗಿ ಡಿವಿ ಸದಾನಂದ ಗೌಡ ಅವರ ಟಿಕೆಟ್ ಕೈತಪ್ಪಲಿದೆ.












Click it and Unblock the Notifications