ಮಸೀದಿ ಅಭಿವೃದ್ಧಿ ಹಣದ ಬಗ್ಗೆ ಜಮೀರ್ ಅಹ್ಮದ್‌ಖಾನ್ ಹೇಳಿದ್ದೇನು?
ಲಂಚ ಹಾಗೂ ಭ್ರಷ್ಟಾಚಾರದ ವಿಷಯವೇ ರಾಜಕೀಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಇದೀಗ ಕರ್ನಾಟಕದ ಪ್ರಮುಖ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಲಂಚ ತೆಗೆದುಕೊಂಡ್ರೆ ಜೈಲಿಗೆ ಹಾಕಿಸ್ತೀನಿ ಎಂದು ಗುಡುಗಿದ್ದಾರೆ. ಅಲ್ಲದೇ ಮಸೀದಿ ಅಭಿವೃದ್ಧಿ ಹಣದ ಬಗ್ಗೆಯೂ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹ್ಮದ್‌ಖಾನ್ ವಖ್ಪ ಆಸ್ತಿಯ ಬಗ್ಗೆ ಕೇಂದ್ರ ಸರ್ಕಾರದ ಕಾನೂನಿನ ಬಗ್ಗೆಯೂ ಗುಡುಗಿದ್ದಾರೆ.
ಈಚೆಗಷ್ಟೇ ಜಮೀರ್ ಅಹ್ಮದ್‌ಖಾನ್ ಅವರು ವಖ್ಫ್ ಆಸ್ತಿ ಸಂರಕ್ಷಣೆ ಹಾಗೂ ವಖ್ಫ್ ಆಸ್ತಿಯನ್ನು ಯಾವ ರೀತಿ ಸಂರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಮಾತನಾಡಿದ್ದರು. ಇದೀಗ ಮಸೀದಿ ಅಭಿವೃದ್ಧಿ ಹಣದ ಬಗ್ಗೆ ಮಹತ್ವದ ಸೂಚನೆಯನ್ನು ಜಮೀರ್ ಅಹ್ಮದ್ ಖಾನ್ ನೀಡಿದ್ದಾರೆ. ಅಲ್ಲದೇ, ಮಸೀದಿ ಅಭಿವೃದ್ಧಿ ಅನುದಾನ ಸೇರಿದಂತೆ ಸಮುದಾಯದ ಕಲ್ಯಾಣದ ನೀಡುವ ಹಣ ದುರ್ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಹಾವೇರಿಯಲ್ಲಿ ಹಾವೇರಿ - ಗದಗ ಜಿಲ್ಲೆಗಳ ವಖ್ಫ್ ಅದಾಲತ್ ಉದ್ಘಾಟನೆ ಸಮಾರಂಭದಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ. ವಖ್ಫ್ ಬೋರ್ಡ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಸೀದಿ ಅಭಿವೃದ್ಧಿ ಮತ್ತು ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಮುಸ್ಲಿಂ ಸಮುದಾಯದ ಕಲ್ಯಾಣಕ್ಕೆ ಅನುದಾನವನ್ನು ನೀಡಲಾಗುತ್ತಿದೆ. ಆದರೆ, ಈ ರೀತಿ ಸಮುದಾಯಕ್ಕೆ ಮೀಸಲಿಡುವ ಅನುದಾನದಲ್ಲಿ ಹಣ ದುರ್ಬಳಕೆ ಆಗುತ್ತಿರುವ ದೂರುಗಳು ಬಂದಿವೆ. ಈ ರೀತಿ ಹಣ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳುವುದಾಗಿ ಜಮೀರ್ ಅಹ್ಮದ್‌ಖಾನ್ ಅವರು ಎಚ್ಚರಿಸಿದ್ದಾರೆ.
ವಖ್ಫ್ ಕಾಯ್ದೆ ಒಪ್ಪಲು ಸಾಧ್ಯವಿಲ್ಲ
ಕೇಂದ್ರ ಬಿಜೆಪಿ ಸರ್ಕಾರದ ವಖ್ಫ್ ಕಾಯ್ದೆಯ ಬಗ್ಗೆ ಜಮೀರ್ ಅವರು ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ತಿದ್ದುಪಡಿ ತರಲು ಮುಂದಾಗಿರುವುರ ಹಿಂದೆ ದುರುದ್ದೇಶ ಇದೆ. ಇದು ದುರುದ್ದೇಶದಿಂದ ಕೂಡಿದೆ. ವಖ್ಫ್ ಆಸ್ತಿ ಎನ್ನುವುದು ಸರ್ಕಾರದ್ದಲ್ಲ. ಅದು ಸಮುದಾಯಕ್ಕೆ ಸೇರಿದೆ. ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧ ಇದೆ ಎಂದು ಜಮೀರ್ ಅಹ್ಮದ್ ಖಾನ್ ಅವರು ಪುನರುಚ್ಚಿರಿಸಿದರು.
ಲಂಚ ಕೇಳಿದ್ರೆ ಜೈಲಿಗೆ ಹಾಕಿಸ್ತೀನಿ ಹುಷಾರ್!
ಜಮೀರ್ ಅವರು ಜನರಿಂದ ಲಂಚ ಕೇಳುತ್ತಿರುವ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಸಮುದಾಯಕ್ಕೆ ಅವಶ್ಯವಿರುವ ಅನುದಾನವನ್ನು ನೀಡಲಾಗಿದೆ. ಆದರೆ, ಅದು ದುರ್ಬಳಕೆಯಾಗಬಾರದು. ಅಲ್ಲದೇ ಲಂಚ ಪಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಜನರಿಂದ ಲಂಚ ಕೇಳುವುದನ್ನು ನಾನು ಸಹಿಸುವುದಿಲ್ಲ ಎಂದಿದ್ದಾರೆ. ಯಾರಾದ್ರೂ ನಿಮ್ಮತ್ರ ದುಡ್ಡು ಕೇಳಿದರೆ, ಮೊದಲು ಪೊಲೀಸ್ ಠಾಣೆಗೆ ದೂರು ಕೊಡಿ. ನನ್ನ ಗಮನಕ್ಕೂ ತನ್ನಿ. ಅವರನ್ನು ಜೈಲಿಗೆ ಹಾಕಿಸುವ ಕೆಲಸ ನಾನೇ ಮಾಡುತ್ತೇನೆ. ಯಾರೇ ಆಗಲಿ ಮುಲಾಜಿಲ್ಲದೆ ಕ್ರಮ ತಗೋತೀವಿ ಎಂದು ಹೇಳಿದ್ದಾರೆ.












Click it and Unblock the Notifications