ವೆಡ್ಡಿಂಗ್ ಗಿಫ್ಟ್: ಕಮರ್ಷಿಯಲ್ ಜೊತೆಗೆ ಸಾಮಾಜಿಕ ಸಂದೇಶದ ಬೆಸುಗೆ
ವೆಡ್ಡಿಂಗ್ ಗಿಫ್ಟ್ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ವಿಚಾರಗಳನ್ನು ಕೇಳಿಯೇ ಇದ್ದೇವೆ. ಟ್ರೇಲರ್ ನೋಡಿ ದಂಗಾಗಿದ್ದೇವೆ. ನಮ್ಮ ಸುತ್ತ ಮುತ್ತ ಇಂಥ ಅದೆಷ್ಟು ಘಟನೆಗಳು ನಡೆದರು ನಮ್ಮ ಕೈನಲ್ಲಿ ಏನು ಮಾಡಲು ಸಾಧ್ಯವೇ ಆಗಲಿಲ್ಲವಲ್ಲ ಎಂದು ಮರುಗಿದ್ದೇವೆ. ಈ ಸಿನಿಮಾ ಮೂಲಕವಾದರೂ ನೊಂದ ಹಲವರಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಇದೇ ತಿಂಗಳ 8 ರಂದು ತೆರೆಗೆ ಬರಲಿದೆ.
ಇಷ್ಟೆಲ್ಲಾ ನಿರೀಕ್ಷೆ ಹುಟ್ಟಿಸಲು ಕಾರಣ ನಿರ್ದೇಶಕ ಸ್ಥಾನದಲ್ಲಿ ನಿಂತು ಆಕ್ಷನ್ ಕಟ್ ಹೇಳಿರುವ ವಿಕ್ರಂ ಪ್ರಭು ಅವರ ಹಠ. ಇದೊಂಥರ ತಪಸ್ಸು ಎಂದೇ ಹೇಳಬಹುದು. ಸಿನಿಮಾ ಮಾಡಬೇಕು ಎಂಬ ಹುಂಬತನವೊಂದಿದ್ದರೆ ಸಾಲದು. ಸಿನಿಮಾದಲ್ಲಿ ಏನು ನೀಡಬೇಕೆಂಬುದು ಪಕ್ಕಾ ತಲೆಯಲ್ಲಿರಬೇಕು. ಇಲ್ಲವಾದರೂ ಹೆಸರಿಗೊಂದು ನಿರ್ದೇಶಕನ ಪಟ್ಟ ಸಿಗುತ್ತದೆಯಷ್ಟೆ.
ಆದರೆ ವಿಕ್ರಂ ಪ್ರಭುಗೆ ಆ ಕ್ಲಾರಿಟಿ ಇತ್ತು. ಹೀಗಾಗಿಯೇ ಸಮಯ ಎಷ್ಟೇ ಆದರೂ ಜನಮೆಚ್ಚುವ, ಸಮಾಜಕ್ಕೆ ಏನಾದರೊಂದು ಸಿಗುವಂತ ಸಿನಿಮಾ ತಯಾರಿಸಿದ್ದಾರೆ. ಇಷ್ಟು ವರ್ಷದ ಶ್ರಮಕ್ಕೆ ಜುಲೈ ಎಂಟರಂದು ಪ್ರತಿಫಲ ಅಪೇಕ್ಷಿಸುತ್ತಿದ್ದಾರೆ.
ಈಗಾಗಲೇ ಸಾಕಷ್ಟು ಮಂದಿ ವೆಡ್ಡಿಂಗ್ ಗಿಫ್ಟ್ ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ನೊಂದವರ ಧ್ವನಿಯಾಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಸಿನಿಮಾಗಾಗಿ ಕಾಯುವ ಕಾತರಿಕೆ ಹೆಚ್ಚಾಗಿದೆ.

ಹಲವು ನಿರ್ದೇಶಕರ ಜೊತೆ ಪಳಗಿರುವ ವಿಕ್ರಂ ಪ್ರಭು ಸ್ವಂತ ಕಲೆ, ತಲೆ ಎರಡನ್ನು ಉಪಯೋಗಿಸಿ ಸಿನಿಮಾ ಸಿದ್ಧ ಮಾಡಿದ್ದಾರೆ. ಕಮರ್ಷಿಯಲ್ ಒಂದೇ ಮುಖ್ಯವಲ್ಲ. ಅದರ ಜೊತೆಗೆ ಸಾಮಾಜಿಕ ಕಾಳಜಿ ಇನ್ನು ಮುಖ್ಯ ಎಂದು ನಂಬಿರುವ ವಿಕ್ರಂ ಪ್ರಭು ಅದೇ ಹಾದಿಯಲ್ಲಿ ಸಾಗಿರುವುದು ಟ್ರೇಲರ್ ನಲ್ಲಿ ಖಚಿತವಾಗಿದೆ.

ನಿರ್ದೇಶನದ ಜೊತೆಗೆ ಅವರೇ ನಿರ್ಮಾಣದ ಹೊಣೆಯನ್ನು ಹೊತ್ತು, ವಿಕ ಪ್ರಭು ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಜುಲೈ 8ಕ್ಕೆ ತೆರೆ ಕಾಣುವ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ಸೋನುಗೌಡ ನಾಯಕಿಯಾಗಿ ನಟಿಸಿದ್ದಾರೆ.

ನಿಶಾನ್ ನಾಯಕನಾಗಿದ್ದು, ಪ್ರೇಮಾ ಲಾಯರ್ ಆಗಿ ಕಮ್ ಬ್ಯಾಕ್ ಆಗಿದ್ದಾರೆ. ಅಚ್ಯುತ್ ಕುಮಾರ್ ಕೂಡ ವಕೀಲರಾಗಿ ವಾದಿಸುವುದನ್ನು ಕಾಣಬಹುದು. ಉಳಿದಂತೆ ಈ ಚಿತ್ರಕ್ಕೆ ಉದಯ್‌ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ, ವಿಜೇತ್ ಚಂದ್ರ ಸಂಕಲನವಿದೆ.












Click it and Unblock the Notifications