ಡಿ.29ರ ತಾಪಮಾನ ವರದಿ: ಕರ್ನಾಟಕದಲ್ಲಿ ಮೈ ಕೊರೆಯುವ ಚಳಿ
ಬೆಂಗಳೂರು, ಡಿಸೆಂಬರ್ 29: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಸಹ ಚಳಿ ವಾತಾವರಣ ಮುಂದುವರೆದಿದ್ದು, ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಅಕಾಲಿಕ ಮಳೆಗೂ ಬ್ರೇಕ್ ಬಿದ್ದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ದಟ್ಟವಾದ ಮಂಜು ಜೊತೆ ಚಳಿ ಆವರಿಸಿದ್ದು, ಜನ ಮುಂಜಾನೆ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಚಳಿಯ ಪ್ರಮಾಣ ಕೊಂಚ ಇಳಿಕೆಯಾಗಿದ್ದರೂ, ಹಾಸನ ಜಿಲ್ಲೆಯಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಕಡಲ ನಗರಿ ಕಾರವಾರದಲ್ಲಂತೂ ಕಾಶ್ಮೀರದ ರೀತಿಯ ವಾತಾವರಣ ನಿರ್ಮಾಣವಾಗಿದ್ದು, ಮುಂಜಾನೆ ವೇಳೆ ದಟ್ಟ ಮಂಜು ಆವರಿಸಿರುತ್ತದೆ. ಇನ್ನೂ 4 ದಿನಗಳ ಕಾಲ ರಾಜ್ಯದಾದ್ಯಂತ ಚಳಿ ಮುಂದುವರೆಯಲಿದೆ. ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರು, ಉತ್ತರ ಕರ್ನಾಟಕದ ಮಂದಿ ಕೊರೆಯುವ ಚಳಿಗೆ ಹೈರಾಣಾಗಿದ್ದಾರೆ. ಇನ್ನೊಂದೆಡೆ ನೆರೆಯ ರಾಜ್ಯಗಳಲ್ಲಿ ಚಳಿಯ ಜೊತೆಗೆ ಮಳೆಯೂ ಮುಂದುವರೆದಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಇಂದು ಸಹ ಹವಾಮಾನ ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಚಳಿಯ ವಾತಾವರಣ ಇರಲಿದೆ. ಮುಂದಿನ ನಾಲ್ಕೈದು ದಿನ ಚಳಿಯ ಪ್ರಮಾಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ ಸುಮಾರು 9 ಗಂಟೆವರೆಗೂ ದಟ್ಟವಾದ ಮಂಜು ಆವರಿಸಿ ಮಲೆನಾಡಿನ ಅನುಭವ ನೀಡುತ್ತಿದೆ. ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಆವರಿಸುತ್ತಿರುವ ಮಂಜಿನಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆ ಹಾಳಾಗುವ ಭಯದಲ್ಲಿದ್ದಾರೆ. ಮಧ್ಯಾಹ್ನದ ನಂತರ ಎಂದಿನಂತೆ ಸೂರ್ಯದೇವ ಅಬ್ಬರಿಸಲಿದ್ದಾನೆ.

ರಾಜ್ಯದ ಜಿಲ್ಲಾವಾರು ತಾಪಮಾನ ವರದಿ
ಬೆಂಗಳೂರು 27-15, ಮೈಸೂರು 29-16, ಚಾಮರಾಜನಗರ 29-16, ರಾಮನಗರ 29-16, ಮಂಡ್ಯ 27-20, ಬೆಂಗಳೂರು ಗ್ರಾಮಾಂತರ 27-15, ಚಿಕ್ಕಬಳ್ಳಾಪುರ 26-14, ಕೋಲಾರ 27-16, ಹಾಸನ 28-14, ಚಿಕ್ಕಮಗಳೂರು 28-14, ದಾವಣಗೆರೆ 31-17, ಶಿವಮೊಗ್ಗ 32-17, ಕೊಡಗು 29-13, ತುಮಕೂರು 30-19, ಉಡುಪಿ 31-22, ಮಂಗಳೂರು 32-22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉತ್ತರ ಕನ್ನಡ 32-17, ಧಾರವಾಡ 30-16, ಹಾವೇರಿ 32-17,. ಹುಬ್ಬಳ್ಳಿ 31-16, ಬೆಳಗಾವಿ 29-15, ಗದಗ 30-16, ಕೊಪ್ಪಳ 29-17, ವಿಜಯಪುರ 30-17, ಬಾಗಲಕೋಟ 31-17, ಕಲಬುರಗಿ 29-17, ಬೀದರ್ 27-15, ಯಾದಗಿರಿ 29-17, ರಾಯಚೂರು 30-17, ಬಳ್ಳಾರಿ 31-18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕಾಶ್ಮೀರದಲ್ಲಿ ಮೈನಸ್ ತಾಪಮಾನ
ಕಾಶ್ಮೀರದ ಕೊಕರ್ನಾಗ್ ಮತ್ತು ಪಹಲ್ಗಾಮ್ ಹೊರತುಪಡಿಸಿ ಹೆಚ್ಚಿನ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಘನೀಕರಿಸುವ ಹಂತಕ್ಕಿಂತ ಕಡಿಮೆಯಾಗಿದೆ. ಶನಿವಾರ ರಾತ್ರಿ ಕಣಿವೆಯಾದ್ಯಂತ ಕನಿಷ್ಠ ತಾಪಮಾನ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದಲ್ಲಿ ಶನಿವಾರ ರಾತ್ರಿ ಕನಿಷ್ಠ ಮೈನಸ್ 1.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಹಿಂದಿನ ರಾತ್ರಿಯ 1.7 ಡಿಗ್ರಿ ಸೆಲ್ಸಿಯಸ್‌ನಿಂದ ಕಡಿಮೆಯಾಗಿದೆ. ಕಣಿವೆಯ ಗೇಟ್‌ವೇ ಪಟ್ಟಣವಾದ ಖಾಜಿಗುಂಡ್‌ನಲ್ಲಿ ಕನಿಷ್ಠ ಮೈನಸ್ 1.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಛತ್ತೀಸ್‌ಗಢದಲ್ಲಿ ಭತ್ತದ ಕೃಷಿ ಕಾರ್ಯ ಭರದಿಂದ ಸಾಗುತ್ತಿದೆ. ಅಕಾಲಿಕ ಮಳೆಯಿಂದ ರೈತರ ಭತ್ತ, ತರಕಾರಿ ಜತೆಗೆ ದ್ವಿದಳ ಧಾನ್ಯಗಳ ಬೆಳೆಗಳು ಹಾಳಾಗಿವೆ. ಡಿಸೆಂಬರ್ 30ರ ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ವಾತಾವರಣ ತೆರವಾದ ನಂತರ ಕೀಟ ಬಾಧೆಯೂ ಹೆಚ್ಚಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications