ಬಿಜೆಪಿಗರು ಪರಪ್ಪನ ಅಗ್ರಹಾರಕ್ಕೆ ತೆರಳಲು ತಯಾರಾಗಿರಲಿ!: ಕಾಂಗ್ರೆಸ್ ಕಿಡಿ
ಬೆಂಗಳೂರು, ಮೇ30: ಬಿಜೆಪಿ ಅವಧಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ಹೊರಗೆಳೆಯುತ್ತೇವೆ, ತಿಂದಿರುವ 40% ಕಮಿಷನ್‌ನ್ನು 100% ವಾಪಸ್ ಕಕ್ಕಿಸುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.
ಈ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಬಿಎಂಪಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳನ್ನು ತನಿಖೆ ನಡೆಸಿ ದಾಖಲೆ ಸಲ್ಲಿಸಲು ಡಿಸಿಎಂ ಡಿ ಕೆ ಶಿವಕುಮಾರ್ ಸೂಚಿಸಿದ್ದಾರೆ. ಬಿಜೆಪಿಗರು ಪರಪ್ಪನ ಅಗ್ರಹಾರಕ್ಕೆ ತೆರಳಲು ತಯಾರಾಗಿರಲಿ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಚುನಾವಣೆ ನಡೆಸಲಾಗದ ಬಿಜೆಪಿ ಸರ್ಕಾರದಿಂದಾಗಿ ಚುನಾಯಿತ ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿಗೆ ಚುರುಕು ಮುಟ್ಟಿಸಲಾಗಿದೆ. ಬಿಬಿಎಂಪಿಯಲ್ಲಿ ಜನಸ್ನೇಹಿ ಹಾಗೂ ಭ್ರಷ್ಟಾಚಾರ ಮುಕ್ತ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದುವರೆಗೂ ನಡೆದ ಎಲ್ಲಾ ಅಕ್ರಮಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಬಿಜೆಪಿ ಆಡಳಿತಾವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಹಗರಣಗಳನ್ನು ಕೆದಕಲು ಮುಂದಾಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್, ಕಳೆದ ಮೂರು ವರ್ಷಗಳ ಅವಧಿಯ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ದಾಖಲೆಪತ್ರ ಸಮೇತ ಸಲ್ಲಿಸುವಂತೆ ಅಧಿಕಾರಿಗಳಿಗೆ 10 ದಿನಗಳ ಗಡುವು ನೀಡಿದ್ದಾರೆ.
ಬಿಜೆಪಿ ಅವಧಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ಹೊರಗೆಳೆಯುತ್ತೇವೆ, ತಿಂದಿರುವ 40% ಕಮಿಷನ್‌ನ್ನು 100% ವಾಪಸ್ ಕಕ್ಕಿಸುತ್ತೇವೆ.
— Karnataka Congress (@INCKarnataka) May 30, 2023
ಬಿಬಿಎಂಪಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳನ್ನು ತನಿಖೆ ನಡೆಸಿ ದಾಖಲೆ ಸಲ್ಲಿಸಲು ಡಿಸಿಎಂ @DKShivakumar ಸೂಚಿಸಿದ್ದಾರೆ.
ಬಿಜೆಪಿಗರು ಪರಪ್ಪನ ಅಗ್ರಹಾರಕ್ಕೆ ತೆರಳಲು ತಯಾರಾಗಿರಲಿ! pic.twitter.com/7iDGoamJfI
ಕಳೆದ ಮೂರು ವರ್ಷಗಳಿಂದ ಬೆಂಗಳೂರಲ್ಲಿ ವಿಧಾನಸಭೆ ಕ್ಷೇತ್ರವಾರು ಆಗಿರುವ ಕೆಲಸ, ಯಾವ ಯೋಜನೆಯಡಿ ಆ ಕೆಲಸ ಆಗಿದೆ, ಅದಕ್ಕೆ ಆಗಿರುವ ಖರ್ಚು ವಿವರ, ಕೆಲಸ ಆಗಿರುವ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಬೇಕು. ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ, ಕಾಮಗರಿಗಳನ್ನು ಯತಾಸ್ಥಿತಿಯಲ್ಲಿ ತಡೆ ಹಿಡಿಯಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕೆಲಸಗಳನ್ನು ತಡೆ ಹಿಡಿಯಬೇಕು.

ಯಾವ, ಯಾವ ಕಾಮಗಾರಿಗೆ ಕೆಲಸ ಆಗದಿದ್ದರೂ ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿದೆ ಎಂಬ ಬಗ್ಗೆ ತನಿಖೆ ಮಾಡಿ 10 ದಿನದೊಳಗೆ ಪಟ್ಟಿ ನೀಡಬೇಕು.ಇಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡುತ್ತೇನೆ, ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ, ಮಾಹಿತಿ ಪಡೆಯುವ ಶಕ್ತಿಯೂ ನನಗಿದೆ. ಕೆಲಸ ಆಗಿರುವ ಜಾಗಗಳಿಗೆ ಹೋಗಿ ಖುದ್ದು ಪರಿಶೀಲನೆ ಮಾಡೋಣ ಎಂದಿದ್ದಾರೆ.
ನಾನೊಬ್ಬನೇ ಏನೊ ಮಾಡುತ್ತೇನೆ ಎಂಬ ಭ್ರಮೆ ಇಲ್ಲ. ನಾವು ನೀವು ಸೇರಿ ಕೆಲಸ ಮಾಡೋಣ. ಸಮಯದ ಮಿತಿ ಇಲ್ಲದೇ ದುಡಿಯಬೇಕು. 100% ಬದ್ಧತೆಯಿಂದ, ನಿಷ್ಠೆಯಿಂದ ಕೆಲಸ ಮಾಡಿ. ಆಡಳಿತಕ್ಕೆ ಚುರುಕು ಮುಟ್ಟಿಸಲು ಒಂದಷ್ಟು ಬದಲಾವಣೆ ಮಾಡುತ್ತೇವೆ, ಪನಿಶ್ಮೆಂಟ್ ಮಾಡೋದು ದೊಡ್ಡ ಕೆಲಸ ಅಲ್ಲ. ಅದಕ್ಕೆ ಆಸ್ಪದ ಕೊಡಬೇಡಿ. ಒಳ್ಳೆ ಕೆಲಸ ಮಾಡಿ. ಒಳ್ಳೆ ಹೆಸರು ಪಡೆಯಿರಿ. ಸರಕಾರಕ್ಕೆ ಒಳ್ಳೆ ಹೆಸರು ತನ್ನಿ.
ಹಿಂದಿನ ಸರಕಾರದ ಅವಧಿಯಲ್ಲಿ ಯಾರ್ಯಾರಿಗೋ ಬೂತ್ ಲೆವೆಲ್ ಆಫೀಸರ್ ಅಂತ ಲೆಟರ್ ಕೊಟ್ರಲ್ಲ, ನಿಮಗೆ ಬುದ್ದಿ ಇರಲಿಲ್ಲವಾ? ಯಾರ್ಯಾರು ಏನೇನೂ ಮಾಡಿದರು, ಎಷ್ಟೆಷ್ಟು ಭ್ರಷ್ಟಾಚಾರ ಮಾಡಿದರು ಅಂತ ಗೊತ್ತಿದೆ. ಈಗ ಬದಲಾವಣೆ ಮಾಡಿಕೊಳ್ಳಿ. ಈ ಸರಕಾರ ಬದಲಾವಣೆ ತಂದಿದೆ ಎಂದು ಜನರಿಗೆ ಮನವರಿಕೆ ಆಗುವಷ್ಟರ ಮಟ್ಟಿಗೆ ಉತ್ತಮವಾಗಿ ಕೆಲಸ ಮಾಡಿ. ನಿಮ್ಮ ಹಾಗೂ ಸರಕಾರದ ಗೌರವ ಉಳಿಸಿ ಎಂದರು.












Click it and Unblock the Notifications