ನಾವು ನೀರು ಕೊಡುತ್ತೇವೆ, ನೀವು ಮೇಕೆದಾಟು ಯೋಜನೆಗೆ ಸಹಕರಿಸಿ: ತಮಿಳುನಾಡು ಸರ್ಕಾರದ ಮುಂದೆ ಬೇಡಿಕೆ ಇಟ್ಟ ಡಿಕೆ ಶಿವಕುಮಾರ್
ಬೆಂಗಳೂರು/ಚೆನ್ನೈ, ಆಗಸ್ಟ್ 16: ತಮಿಳುನಾಡಿಗೆ 10 ಟಿಎಂಸಿ ಅಡಿ ನೀರು ಬಿಡಲು ನಮ್ಮ ರಾಜ್ಯ ಬದ್ಧವಾಗಿದೆ. ಆದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ಸಹಕರಿಸಬೇಕು ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ರಾಜ್ಯದಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ 24,000 ಕ್ಯೂಸೆಕ್ ನೀರನ್ನು ಕರ್ನಾಟಕ ಬಿಡಬೇಕು. ಈ ಕುರಿತು ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಕರ್ನಾಟಕ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಶಿವಕುಮಾರ್, 'ಈಗಾಗಲೇ ತಮಿಳುನಾಡಿಗೆ ನೀರು ಬಿಡಲಾಗಿದೆ. ನೀರು ಹಂಚಿಕೆ ವಿಚಾರದಲ್ಲಿ ಸಂಘರ್ಷ ಬೇಡ' ಎಂದು ಪುನರುಚ್ಚರಿಸಿದರು.
ರಾಜ್ಯದಲ್ಲಿ ಮಳೆ ಮತ್ತು ಲಭ್ಯತೆ ಆಧರಿಸಿ ನೀರು ಬಿಡಲಾಗುವುದು ಎಂದು ಡಿಕೆಶಿ ಭರವಸೆ ನೀಡಿದರು.
ಮೇಕೆದಾಟು ಯೋಜನೆಗೆ ತಮಿಳುನಾಡು ಬೆಂಬಲ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆಶಿ, 'ಕಳೆದ ವರ್ಷ 400 ಟಿಎಂಸಿ ಅಡಿ ನೀರು ಸಮುದ್ರಕ್ಕೆ ಹರಿದಿದೆ. ಮಳೆ ಕೊರತೆಯಾದಾಗಲೆಲ್ಲಾ ನೀರು ಬಿಡುವಂತೆ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ ಒತ್ತಾಯಿಸುತ್ತದೆ. ಮೇಕೆದಾಟು ಯೋಜನೆ ಎರಡೂ ರಾಜ್ಯಗಳಿಗೆ ಸಹಾಯವಾಗುತ್ತದೆ. ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ಸಹಕರಿಸಬೇಕು ಎಂದರು.

'ಇಂತಹ ಸಮಯಗಳಲ್ಲಿ ಈ ಯೋಜನೆಯು ನಮಗೆ ನೀರು ಬಿಡಲು ಸಹಾಯ ಮಾಡುತ್ತದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಾಗುತ್ತಿದ್ದು, ಜಲಾಶಯ ಯೋಜನೆಗೆ ಬೆಂಬಲ ನೀಡಬೇಕು' ಎಂದು ಶಿವಕುಮಾರ್ ಹೇಳಿದರು.
ಶಿವಕುಮಾರ್ ಬೇಡಿಕೆಗೆ ಪ್ರತಿಕ್ರಿಯಿಸಿರುವ ಪಿಎಂಕೆ ಸಂಸ್ಥಾಪಕ ಡಾ ಎಸ್ ರಾಮದಾಸ್, 'ಕರ್ನಾಟಕವು ಕಾವೇರಿ ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್‌ಗೆ ಬದ್ಧವಾಗಿಲ್ಲ. ಸುಪ್ರೀಂ ಕೋರ್ಟ್ ಆದೇಶದಿಂದ ತನ್ನನ್ನು ತಾನು ಉಳಿಸಿಕೊಳ್ಳಲು ಕರ್ನಾಟಕವು ಕಾರ್ಯತಂತ್ರವನ್ನು ಹೆಣೆದಿದೆ' ಎಂದು ಹೇಳಿದ್ದಾರೆ.
ಅಣೆಕಟ್ಟುಗಳಲ್ಲಿ 92 ಟಿಎಂಸಿ ಅಡಿ ನೀರಿದ್ದರೂ ತಮಿಳುನಾಡಿಗೆ ಅಗತ್ಯವಿರುವ 65 ಟಿಎಂಸಿ ಅಡಿ ನೀರು ಬಿಡಲು ಕರ್ನಾಟಕ ನಿರಾಕರಿಸುತ್ತಿದೆ ಎಂದು ರಾಮದಾಸ್ ಆರೋಪಿಸಿದ್ದಾರೆ. ಈ ವಿಚಾರವಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು ಎಂದು ರಾಮದಾಸ್ ಹೇಳಿದರು.

ಕಳೆದ ವಾರ, ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಅವರು ಜೂನ್ 1 ರಿಂದ ಆಗಸ್ಟ್ 11 ರವರೆಗೆ ಕರ್ನಾಟಕವು ತಮಿಳುನಾಡಿಗೆ 53.7703 ಟಿಎಂಸಿ ಅಡಿ ನೀರು ಬಿಡಬೇಕಾಗಿತ್ತು. ಆದರೆ ಅದು ಕೇವಲ 15.7993 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿದ್ದು 37.9710 ಟಿಎಂಸಿ ಕೊರತೆಯಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಅಣೆಕಟ್ಟುಗಳಲ್ಲಿ ಒಟ್ಟು ನೀರಿನ ಮಟ್ಟವು 93.535 ಟಿಎಂಸಿಎಫ್‌ಟಿಯಷ್ಟಿದೆ ಎಂದು ದುರೈಮುರುಗನ್ ಅವರು ತಿಳಿಸಿದ್ದಾರೆ.












Click it and Unblock the Notifications