Government Employees: ಹಳೇ ಪಿಂಚಣಿ ಯೋಜನೆ ಪಡೆದೇ ತೀರುತ್ತೇವೆ; ಕರ್ನಾಟಕ ಬಂದ್, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿಎಸ್ ಷಡಕ್ಷರ
ದಾವಣಗೆರೆ: ಕರ್ನಾಟಕದಲ್ಲಿ ಹಳೆ ಪಿಂಚಣಿ ಜಾರಿ ಆಗಬೇಕು ಎಂಬುದು ಸರ್ಕಾರಿ ನೌಕಕರರ ಬಹು ದಿನಗಳ ಬೇಡಿಕೆಯಾಗಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಹಲವು ಬಾರೀ ಸರ್ಕಾರಿ ನೌಕರರು ಬೇಡಿಕೆ ಸಲ್ಲಿಸಿದ್ದು, ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ 2004ರಲ್ಲಿ ಕೇಂದ್ರ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದೇಶದಾದ್ಯಂತ ಅನ್ವಯಿಸಿತು. ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯ ಮರು ಜಾರಿಗೆ ಒತ್ತಾಯಿಸುತ್ತಲೇ ಬಂದಿದ್ದಾರೆ.
ಇದೀಗ ಸರ್ಕಾರಿ ನೌಕರರ ಬೇಡಿಕೆಯಾದ ಹಳೆ ಪಿಂಚಣಿ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಎನ್‌ಪಿಎಸ್ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸದಿದ್ದರೆ ಕರ್ನಾಟಕ ಬಂದ್ ನಡೆಸಲಾಗುವುದು. ಒಪಿಎಸ್ ಜಾರಿಗಾಗಿ ಹೋರಾಟ ಮುಂದುವರೆಯಲಿದ್ದು, ಯಾವುದೇ ಬೆದರಿಕೆಗಳಿಗೆ ನೌಕರರು ಹೆದರಬೇಕಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ 2ನೇ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಮಾತನಾಡಿ, ಕರ್ನಾಟಕದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದು ಮಾಡಿ ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಮಾಡದಿದ್ದರೆ ಕರ್ನಾಟಕ ಬಂದ್ ನಡೆಸುವುದು ಅನಿವಾರ್ಯವಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸುವಂತೆ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಪ್ರಯೋಜನ ಆಗಿಲ್ಲ. ಕಾರಣ, ಕರ್ನಾಟಕವನ್ನು ಬಂದ್ ಮಾಡಿಯಾದರೂ ಒಪಿಎಸ್ ಪಡೆದೇ ತೀರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸರಕಾರಿ ನೌಕರಿಯಿಂದ ತೆಗೆಯಲಿಕ್ಕೆ ಯಾರಿಗೂ ಅಧಿಕಾರವಿಲ್ಲ. ಈ ನಿಮ್ಮ ರಾಜ್ಯಾಧ್ಯಕ್ಷ ಷಡಕ್ಷರಿಯನ್ನು ಅರೆಸ್ಟ್ ಮಾಡ್ತಾರೆ, ಜೈಲಿಗೆ ಕಳಿಸುತ್ತಾರೆ, ಕೆಲಸದಿಂದ ಸಸ್ಪೆಂಡ್ ಮಾಡ್ತಾರೆ ಎಂದು ಯಾರೂ ಹೆದರಿಕೊಳ್ಳಬೇಡಿ. ನಾವು ಇಂತಹ ಬೆದರಿಕೆಗಳನ್ನೆಲ್ಲಾ ಹಿಂದೆ ಸಾಕಷ್ಟು ನೋಡಿದ್ದೇವೆ.
ಯಾವ ಬೆದರಿಕೆಗೂ ಜಗ್ಗುವುದಿಲ್ಲ. ನಾವು ಯಾರೂ ಹೆದರಿಕೊಳ್ಳುವ ಅಗತ್ಯವೇ ಇಲ್ಲ. ದೇವರು ನಮಗೆ ಜೀವ, ಜೀವನ ಕೊಟ್ಟಿದ್ದಾನೆ. ನನ್ನ ಸ್ವಸಾಮರ್ಥ್ಯದ ಆಧಾರದಲ್ಲಿ ಸರಕಾರಿ ಕೆಲಸ ಸಿಕ್ಕಿದೆ. ನನ್ನನ್ನು ಸರಕಾರಿ ನೌಕರಿಯಿಂದ ತೆಗೆಯಲಿಕ್ಕೆ ಯಾರಿಗೂ ಅಧಿಕಾರವಿಲ್ಲ. ನಾವು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಹೋರಾಟದ ತೀವ್ರತೆ ಚಂಡಮಾರುತದ ರೀತಿ ಇರಬೇಕು. ಕರ್ನಾಟಕ ಬಂದ್ ಹೇಗಿರಬೇಕು ಅಂದರೆ, ಸರ್ ಇಡೀ ಕರ್ನಾಟಕ ಬಂದ್ ಆಗಿದೆ, ಸರಕಾರಿ ನೌಕರರು ಯಾರೂ ಕೆಲಸಕ್ಕೆ ಬರುತ್ತಿಲ್ಲ ಎಂದು ಗುಪ್ತಚರ ಇಲಾಖೆಯವರು ಮುಖ್ಯಮಂತ್ರಿಗಳಿಗೆ ವರದಿ ನೀಡಬೇಕು. ಬಂದ್ ವೇಳೆ ಯಾರಾದರೂ ಕೆಲಸ ಮಾಡುತ್ತಿದ್ದರೆ, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಕಚೇರಿ ಒಳಗೆ ಹೋಗಿ ಅವರನ್ನು ಎಳೆದು ಹೊರಗೆ ಕರೆತರಬೇಕು. ನಮ್ಮ ಜೀವನ, ನಮ್ಮ ಭವಿಷ್ಯ ಮುಖ್ಯವೇ ಹೊರತು ನಿನ್ನ ಕೆಲಸವಲ್ಲ ಎಂದು ಅವರಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.












Click it and Unblock the Notifications