ದೆಹಲಿಯಂತೆ ಬೆಂಗಳೂರು, ಕರ್ನಾಟಕದಲ್ಲಿ ವಾಯುಮಾಲಿನ್ಯ ಆಗದಂತೆ ತಡೆಯಬೇಕು: ಈಶ್ವರ್ ಖಂಡ್ರೆ ಕಳವಳ
ಬೆಂಗಳೂರು, ಆಗಸ್ಟ್ 25: ಪ್ರತಿ ಚಳಿಗಾಲದಲ್ಲಿ ದೆಹಲಿಯ ನಾಗರಿಕರು ಎದುರಿಸುವಂತಹ ಸನ್ನಿವೇಶವನ್ನು ಕರ್ನಾಟಕ ಎದುರಿಸದಂತೆ ನೋಡಿಕೊಳ್ಳುವುದಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ವಾಯುಮಾಲಿನ್ಯ ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ಆತಂಕದ ವಿಷಯವಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಕಳವಳ ವ್ಯಕ್ತಪಡಿಸಿದರು.
ಶುಕ್ರವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಇಂಡಿಯಾ ಕ್ಲೀನ್ ಏರ್ ಶೃಂಗಸಭೆಯ (ICAS 2023) 2 ನೇ ದಿನದ ಆರಂಭಿಕ ಭಾಷಣದಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿ ನವದೆಹಲಿಯ ನಾಗರಿಕರು ಎದುರಿಸುವಂತಹ ವಾಯುಮಾಲಿನ್ಯದಂತಹ ಸಮಸ್ಯೆಯನ್ನು ರಾಜ್ಯ ರಾಜಧಾನಿ ಬೆಂಗಳೂರು ಎದುರಿಸದಂತೆ ಕ್ರಮ ಕೈಗೊಳ್ಳುವ ಕುರಿತು ಅವರು ತಿಳಿಸಿದರು.

ಬೆಂಗಳೂರು ಮತ್ತು ಕರ್ನಾಟಕವನ್ನು ಮಾಲಿನ್ಯ ಮುಕ್ತ ಮಾಡಲು ಶ್ರಮಿಸುತ್ತಿದ್ದೇನೆ. ಉತ್ತಮ ಗಾಳಿ ಜನರಿಗೆ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತದ್ದೇನೆ. ಸರ್ಕಾರ ಮಾತ್ರವಲ್ಲದೇ ನಾವೆಲ್ಲರೂ ಒಟ್ಟಾಗಿ ಪರಿಸರವನ್ನು ರಕ್ಷಣೆ ಮಾಡಬೇಕಿದೆ. ಅಲ್ಲದೇ ಉಜ್ವಲ, ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪ್ರತಿ ವರ್ಷ ಉಸಿರಾಟ ಸಮಸ್ಯೆ
ಇಂದು ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಅದರಲ್ಲೂ ನಾನು ನಿರ್ದಿಷ್ಟವಾಗಿ ನವದೆಹಲಿಯ ಪ್ರಕರಣವನ್ನು ಎತ್ತಿ ತೋರಿಸಲು ಬಯಸುತ್ತೇನೆ. ಪ್ರತಿ ವರ್ಷ ಚಳಿಗಾಲದಲ್ಲಿ ಅದು ವಿಷಾನಿಲದ ಪ್ರದೇಶವಾಗಿ ಬದಲಾಗುತ್ತದೆ. ಗಾಳಿಯ ಕೆಟ್ಟ ಗುಣಮಟ್ಟ ಮತ್ತು ನಗರದ ಮಲೀನ ಇಬ್ಬನಿ ಅಲ್ಲಿನ ನಿವಾಸಿಗಳಿಗೆ ಉಸಿರಾಟವನ್ನು ಸಮಸ್ಯೆ ಉಂಟು ಮಾಡುತ್ತದೆ ಎಂದು ಅವರು ವಿವರಿಸಿದರು.

ರಾಜ್ಯಾದ್ಯಂತ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ವಾರ್ಷಿಕವಾಗಿ 5 ಕೋಟಿ ಮರಗಳನ್ನು ನೆಡುವ ಗುರಿಯೂ ಹೊಂದಿದ್ದೇವೆ. ಈಗಾಗಲೇ, ನಾವು ಮೂರೂವರೆ ತಿಂಗಳಲ್ಲಿ 3 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ನಾವು ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸಚಿವ ಖಂಡ್ರೆ ಅವರು ಅಭಿಪ್ರಾಯಪಟ್ಟರು.
ಸುಸ್ಥಿರ ಅಭಿವೃದ್ಧಿ ಸಾಧನೆಯ ಗುರಿ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಮಾಜಿ ಸದಸ್ಯ ಕಾರ್ಯದರ್ಶಿ ಡಾ.ಬಿ.ಸೇನ್ ಗುಪ್ತಾ ಅವರು ಮಾತನಾಡಿ, ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
ಉಷ್ಣ ವಿದ್ಯುತ್ ಸ್ಥಾವರಗಳನ್ನು (ಟಿಪಿಪಿ) ಹಂತ ಹಂತವಾಗಿ ಸ್ಥಗಿತಗೊಳಿಸುವುದು, ಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ (FGD) ಮತ್ತು ಹೈಬ್ರಿಡ್ ವ್ಯವಸ್ಥೆಗಳಂತಹ ಹಸಿರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂಬುದಾಗಿ ಹೇಳಿದರು.
ಮಾಲಿನ್ಯ ಪರಿಹಾರಕ್ಕೆ ಎಲ್ಲರೂ ಕೈಜೋಡಿಸಬೇಕು
CSTEPಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜೈ ಅಸುಂಡಿ ಮಾತನಾಡಿ, ವಾಯು ಮಾಲಿನ್ಯವು ಎಲ್ಲರೂ ಸೇರಿ ಪರಿಹರಿಸಬೇಕಾದ ಸಾಮಾನ್ಯ ಸಮಸ್ಯೆಯಾಗಿ ಎಂಬುದನ್ನು ಅರಿಯಲು ಶಿಕ್ಷಣ ಮತ್ತು ಉದ್ಯಮ ನೀತಿ ನಿರೂಪಕರು ಮತ್ತು ನಾಗರಿಕ ಸಮಾಜದ ಒಂದಾಗಿ ಕೆಲಸ ಮಾಡಬೇಕಿದೆ. ಗಾಳಿಯ ಗುಣಮಟ್ಟದ ಪ್ರಾಮುಖ್ಯತೆ ಮತ್ತು ಪರಿಸರ ವ್ಯವಸ್ಥೆಯಲ್ಲಿ ನಾವು ಏನನ್ನು ನೋಡುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ನಾವು ಉಸಿರಾಡುವ ಗಾಳಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಚಿವರ ಕ್ರಿಯಾತ್ಮಕ ವಿಧಾನ ಮತ್ತು ಬದ್ಧತೆ ಸಕಾರಾತ್ಮಕ ಫಲಿತಾಂಶವನ್ನು ನೀಡಲಿದೆ ಎಂದು ನಾವು ಭಾವಿಸುತ್ತೇವೆ. ಈಗಾಗಲೇ, ಅವರು ಉತ್ತಮ ಗಾಳಿಯ ಗುಣಮಟ್ಟಕ್ಕಾಗಿ ಕೆಲವು ನೀತಿ ಸಂಬಂಧಿತ ಕ್ರಮಗಳನ್ನು ಜಾರಿಗೆ ತರಲು ಪ್ರಾರಂಭಿಸಿದ್ದಾರೆ ಎಂದು ಸಿಎಸ್ ಟಿಇಪಿಯ ವಾಯು ಗುಣಮಟ್ಟ ವಿಭಾಗದ ಹಿರಿಯ ಸಂಶೋಧನಾ ವಿಜ್ಞಾನಿ ಡಾ.ಪ್ರತಿಮಾ ಸಿಂಗ್ ತಿಳಿಸಿದರು.












Click it and Unblock the Notifications