ನಾವು ಚುನಾವಣೆಗೆ ಸದಾ ಸಿದ್ಧ; ಕೂಡಲೇ ಚುನಾವಣಾ ದಿನಾಂಕ ನಿಗದಿ ಮಾಡಿ: ಡಿ.ಕೆ.ಶಿವಕುಮಾರ್
ಮುಂದಿನ ಕೆಲ ದಿನಗಳಲ್ಲಿ ನಾವು ಹಾಲಿ ಶಾಸಕರ ಪಟ್ಟಿ ಬಿಡುಗಡೆ ಮಾಡಲು ಚರ್ಚೆ ಮಾಡುತ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು,ಮಾರ್ಚ್ 7: ನಾವು ಚುನಾವಣೆಗೆ ಸದಾ ಸಿದ್ಧವಾಗಿದ್ದೇವೆ. ಚುನಾವಣಾ ಆಯೋಗ ಕೂಡಲೇ ಚುನಾವಣಾ ದಿನಾಂಕ ನಿಗದಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ತಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಚುನಾವಣೆಗೆ ಇನ್ನು 50 ದಿನಗಳು ಮಾತ್ರ ಇವೆ. ಗುಜರಾತ್ ಚುನಾವಣೆ ನಂತರ ಬಿಜೆಪಿಯವರು ರಾಜ್ಯದಲ್ಲಿ ಬಹಳ ತರಾತುರಿಯಲ್ಲಿ ಚುನಾವಣೆ ಮಾಡಲು ಅಧಿಕಾರಿಗಳ ಜತೆ ಸಭೆ ಮಾಡಿ ದಿನಾಂಕ ನಿಗದಿ ಮಾಡಿದ್ದರು. ಆದರೆ ಈಗ ಪ್ರತಿ ದಿನ ತರಾತುರಿಯಲ್ಲಿ ಅಲ್ಪಾವಧಿಯ ಟೆಂಡರ್ ಮೂಲಕ ಅಕ್ರಮ ಹಣ ಕ್ರೋಢೀಕರಣ ಮಾಡುತ್ತಿದ್ದಾರೆ. ಇದಕ್ಕಾಗಿ ಅವರೇ ನಿಗದಿ ಮಾಡಿದ್ದ ದಿನಾಂಕವನ್ನು ಮುಂದೂಡುತ್ತಿದ್ದಾರೆ. ಈ ವಿಚಾರವಾಗಿ ನಾವೆಲ್ಲ ನಾಯಕರು ಚರ್ಚೆ ಮಾಡಿ ಸರ್ಕಾರಕ್ಕೆ ನಮ್ಮ ನಿಲುವು ತಿಳಿಸುತ್ತೇವೆ ಎಂದರು.

ಮುಂದಿನ ಕೆಲ ದಿನಗಳಲ್ಲಿ ನಾವು ಹಾಲಿ ಶಾಸಕರ ಪಟ್ಟಿ ಬಿಡುಗಡೆ ಮಾಡಲು ಚರ್ಚೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತಿದೆ. ನಮ್ಮ ಈ ಹಿಂದಿನ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುವ ವರದಿ ಇತ್ತು. ಈಗಿನ ವರದಿಗಳಲ್ಲಿ ಇದು 140 ರ ಗಡಿ ದಾಟಿದೆ. ಸೇವಾ ಮನೋಭಾವ, ಸಿದ್ಧಾಂತ ನಮ್ಮ ಪಕ್ಷದಲ್ಲಿ ಎದ್ದು ಕಾಣುತ್ತಿದೆ.
ದಿನನಿತ್ಯ ಬಿಜೆಪಿಗೆ ಆಘಾತಕಾರಿ ಸುದ್ದಿ ಬರುತ್ತಿದೆ. ರಾಷ್ಟ್ರೀಯ ನಾಯಕರು ನೆರೆ, ಕೋವಿಡ್ ಸಮಯದಲ್ಲಿ ರಾಜ್ಯಕ್ಕೆ ಬರಲಿಲ್ಲ. ಕೇವಲ ಮತ ಕೇಳಲು ಬರುತ್ತಿದ್ದಾರೆ. ಜನರ ಕಷ್ಟ, ಅಭಿವೃದ್ಧಿ ಅವರಿಗೆ ಆದ್ಯತೆಯಾಗಿಲ್ಲ. ಚುನಾವಣೆಯಲ್ಲಿ ಮತಗಳಿಸುವುದಷ್ಟೇ ಅವರ ಆದ್ಯತೆಯಾಗಿದೆ.

ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬದಲಾವಣೆಯ ಪರ್ವ ರಾಜ್ಯದಲ್ಲಿ ಆರಂಭವಾಗಿದೆ. ನಮ್ಮ ನಾಯಕರ ರಾಜ್ಯ ಪ್ರವಾಸದ ಕಾರ್ಯಕ್ರಮದಲ್ಲಿ ಜನ ಪ್ರವಾಹದಂತೆ ಹರಿದು ಬರುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರುಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಗೃಹ ಜ್ಯೋತಿಯನ್ನು ಮುಖ್ಯಮಂತ್ರಿಗಳು ಬೋಗಸ್ ಯೋಜನೆ ಎಂದು ಕರೆದಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಮಾಧ್ಯಮ ವೇದಿಕೆಯಾದರೂ ಸರಿ, ಬಹರಂಗ ವೇದಿಕೆಯಾದರೂ ಸರಿ ಮುಖ್ಯಮಂತ್ರಿಗಳು ಚರ್ಚೆಗೆ ಬರಲಿ.
ನಾನು ನಾಲ್ಕೂವರೆ ವರ್ಷಗಳ ಕಾಲ ಇಂಧನ ಸಚಿವನಾಗಿದ್ದೆ. ರಾಜ್ಯದಲ್ಲಿ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ನನ್ನ ಅವಧಿಯಲ್ಲಿ 20 ಸಾವಿರ ಮೆ.ವ್ಯಾಟ್ ಗೆ ಏರಿಸಲಾಗಿತ್ತು. ನಮ್ಮ ಸರ್ಕಾರದ ಸಾಧನೆ ಫಲವಾಗಿ ರಾಜ್ಯ ಸರ್ಕಾರ ಹೆಚ್ಚುವರಿ ವಿದ್ಯುತ್ ಮಾರಾಟದಿಂದ 3 ಸಾವಿರಕ್ಕೂ ಹೆಚ್ಚು ಕೋಟಿ ಆದಾಯ ಪಡೆಯುತ್ತಿದೆ.
ರಾಜ್ಯಪಾಲರ ಭಾಷಣದಲ್ಲಿ ಈ ಅಂಶ ಉಲ್ಲೇಖವಾಗಿದೆ. ಇನ್ನು ಬಿಜೆಪಿ ಸರ್ಕಾರ 2018ರ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ನೀಡುವ ವಿದ್ಯುತ್ ಅನ್ನು 7 ಗಂಟೆಯಿಂದ 10 ಗಂಟೆಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದರು. ಇದರಿಂದ 6 ಸಾವಿರ ಕೋಟಿ ವೆಚ್ಚ ತಗಲುತ್ತದೆ. ಅವರು ಯಾವ ಲೆಕ್ಕದಲ್ಲಿ ಈ ಭರವಸೆ ನೀಡಿದ್ದರು. ಬಿಜೆಪಿ ಕೊಟ್ಟ 600 ಭರವಸೆಗಳಲ್ಲಿ 550 ಭರವಸೆ ಈಡೇರಿಸಿಲ್ಲ. ಈ ಬಗ್ಗೆ ದಿನನಿತ್ಯ ಪ್ರಶ್ನೆ ಕೇಳುತ್ತಿದ್ದರೂ ಅವರು ಒಂದಕ್ಕೂ ಉತ್ತರ ನೀಡುತ್ತಿಲ್ಲ ಎಂದು ಹೇಳಿದರು.












Click it and Unblock the Notifications