ಲೋಕಸಮರಕ್ಕೆ ಕೈ ಪಡೆ ಸಜ್ಜು; ಸಚಿವರಿಗೆ ಟಾಸ್ಕ್ : ಡಿ ಕೆ ಶಿವಕುಮಾರ್ ಹೇಳಿದ್ದಿಷ್ಟು !
ಬೆಂಗಳೂರು, ನವೆಂಬರ್ 04: ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಸಚಿವರುಗಳಿಗೆ ಹೆಚ್ಚಿನ ಜವಾಬ್ದಾರಿಯನ್ನ ನೀಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆಯಾ ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಆದರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆಯಾ ಸಚಿವರಿಗೆ ಆ ಜಿಲ್ಲೆ ಜವಾಬ್ದಾರಿ ನೀಡಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭೈರತಿ ಸುರೇಶ್ ಅವರು ಕೋಲಾರ ಉಸ್ತುವಾರಿಗಳು, ಆದರೆ ಅಭ್ಯರ್ಥಿ ಆಯ್ಕೆ ಸಂಬಂಧ ಅವರಿಗೆ ಮಂಡ್ಯ ಹಾಗೂ ಮೈಸೂರು ಜಿಲ್ಲೆ ನೀಡಲಾಗಿದೆ. ಹಾಸನ ಉಸ್ತುವಾರಿ ರಾಜಣ್ಣ ಅವರಿಗಿದ್ದರೂ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಚೆಲುವರಾಯಸ್ವಾಮಿ ಅವರಿಗೆ ನೀಡಿದ್ದೇವೆ. ರಾಮನಗರ ಉಸ್ತುವಾರಿ ರಾಮಲಿಂಗಾ ರೆಡ್ಡಿ ಅವರಿದ್ದರೂ ವೆಂಕಟೇಶ್ ಅವರಿಗೆ ಜವಾಬ್ದಾರಿ ನೀಡಿದ್ದೇವೆ. ಜಾರ್ಜ್ ಅವರು ಕೇಂದ್ರ ಚುನಾವಣಾ ಸಮಿತಿಯಲ್ಲಿರುವ ಕಾರಣ ಅವರಿಗೆ ಈ ಜವಾಬ್ದಾರಿ ನೀಡಿಲ್ಲ ಎಂದು ತಿಳಿಸಿದರು.

ಸಚಿವರುಗಳು ಅಭ್ಯರ್ಥಿ ಆಯ್ಕೆ ವಿಚಾರವಾಗಿ ಯಾವಾಗ ವರದಿ ನೀಡುತ್ತಾರೆ ಎಂಬ ಬಗ್ಗೆ ಮಾತನಾಡಿ, ಮೂರ್ನಾಲ್ಕು ದಿನ ಅಥವಾ ಒಂದು ವಾರದಲ್ಲಿ ವರದಿ ನೀಡುವಂತೆ ತಿಳಿಸಿದ್ದೇವೆ. ಪ್ರತಿ ಲೋಕಸಭೆ ಕ್ಷೇತ್ರದಿಂದ 3 ಸಂಭಾವ್ಯ ಅಭ್ಯರ್ಥಿಗಳ ಹೆಸರು ನೀಡುವಂತೆ ಸೂಚಿಸಿದ್ದು, ನಂತರ ನಾವು ಈ ಹೆಸರುಗಳ ಬಗ್ಗೆ ಸಮೀಕ್ಷೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಬರ ಅಧ್ಯಯನ ಪ್ರವಾಸ ಮಾಡಿದ್ದು, ಸಚಿವರುಗಳು ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸಚಿವರು ಬರ ಅಧ್ಯಯನ ಪ್ರವಾಸ ಮಾಡಿಲ್ಲ ಎಂದು ಹೇಳಿದವರು ಯಾರು? ಪ್ರವಾಸ ಮಾಡಿ ಅಧ್ಯಯನ ಮಾಡಿ ಪರಿಶೀಲನೆ ಸಭೆ ಮಾಡಿ ವರದಿ ನೀಡಿದ್ದೇವೆ. ಬಿಜೆಪಿ ನಾಯಕರು ಬರ ಪ್ರವಾಸ ಮಾಡಿದರೆ ಮಾಡಲಿ, ನಾವು ಬೇಡ ಎನ್ನುವುದಿಲ್ಲ. ಅವರು ವಾಸ್ತವಾಂಶ ಅಧ್ಯಯನ ಮಾಡಿ ಕೇಂದ್ರ ಸರ್ಕಾರದಿಂದ ಹಣ ಕೊಡಿಸಲಿ. ಕೇವಲ ಖಾಲಿ ಮಾತನಾಡಿದರೆ ಪ್ರಯೋಜನವಿಲ್ಲ. ಅವರ ಶಾಸಕರು ಹಾಗೂ ಸಂಸದರು ಕೇಂದ್ರ ಸರ್ಕಾರದ ಬಳಿ ಒಂದು ದಿನ ಹೋಗಿ ರಾಜ್ಯದ ಹಿತಾಸಕ್ತಿ ಬಗ್ಗೆ ಧ್ವನಿ ಎತ್ತಿಲ್ಲ" ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ವಿಚಾರವಾಗಿ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಅವರ ಹೇಳಿಕೆ ಬಿಡಿ. ನಮ್ಮ ರಾಜ್ಯ ಸರ್ಕಾರ ಬಡವರ ಸಹಾಯ ಮಾಡುವ ವಿಚಾರದಲ್ಲಿ ನಾವು ಮುನ್ನಡೆದಿದ್ದೇವೆ. ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಅರ್ಹರಿಗೆ ಉಚಿತ ವಿದ್ಯುತ್ ಬಿಲ್ ಬರುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಶೇ.10ರಷ್ಟು ಮಂದಿಗೆ ತಾಂತ್ರಿಕ ಸಮಸ್ಯೆಗಳಿಂದ ತೊಂದರೆ ಆಗಿದೆ. ಕೆಲವರು ಅಂಚೆ ಖಾತೆ ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಪರಿಶೀಲನೆ ಮಾಡಿ ಎಲ್ಲರಿಗೂ ಹಣ ರವಾನೆಯಾಗುವಂತೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ತಿಳಿಸಿದ್ದೇವೆ. ಕೆಲವರು ಹಣ ಬೇಡ ಅಕ್ಕಿ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅದನ್ನು ಪೂರೈಸಲು ಅಗತ್ಯವಾಗಿರುವ ಟೆಂಡರ್ ಕರೆಯುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.
ಕಾಂತರಾಜು ವರದಿ ಬಗ್ಗೆ ಸಭೆಯಲ್ಲಿ ಚರ್ಚೆ ಆಯಿತೇ ಎಂಬ ಬಗ್ಗೆ ಉತ್ತರಿಸಿದ ಅವರು, ನಮ್ಮ ಸಮುದಾಯದವರು ಅವರ ಅಭಿಪ್ರಾಯ ಇರುತ್ತದೆ. ನಮ್ಮ ಸರ್ಕಾರ ಜಾತಿ ಗಣತಿ ಮಾಡುತ್ತಿರುವುದು ಸಾಮಾಜಿಕ ಆರ್ಥಿಕ ಸಮೀಕ್ಷೆ. ಈ ವರದಿ ಬಗ್ಗೆ ಅವರಿಗೆ ಅನುಮಾನಗಳಿದ್ದು, ಸರ್ಕಾರ ಅವುಗಳನ್ನು ಬಗೆಹರಿಸುತ್ತದೆ. ಈವರೆಗೂ ವರದಿ ಬಗ್ಗೆ ಸರಿಯಾದ ತೀರ್ಮಾನಗಳಾಗಿಲ್ಲ. ವರದಿ ಇನ್ನು ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದರು.












Click it and Unblock the Notifications