ನಾವು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರ್ತೀವಿ; ಆ ಆಡಿಯೋ ನನ್ನದಲ್ಲ: ಸಿ.ಪಿ.ಯೋಗೇಶ್ವರ್
ಬೆಂಗಳೂರು,ಜನವರಿ 14: ನವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಏನೇ ಇದ್ರೂ ನಾನೇ ನೇರವಾಗಿ ಮಾತನಾಡುತ್ತೇನೆ, ಆ ಆಡಿಯೋ ನನ್ನದಲ್ಲ,ಅದು ಯಾವುದೋ ಫೇಕ್ ಆಡಿಯೋ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಈ ಕುರಿತು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕುಮಾರಸ್ವಾಮಿ ನಮ್ಮ ತಾಲೂಕಿನಲ್ಲಿ ಏನು ಅಭಿವೃದ್ಧಿ ಮಾಡಿಲ್ಲ, ಕುಮಾರಸ್ವಾಮಿ ವಿರುದ್ದ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುತ್ತೇನೆ, ಜನರು ನನ್ನ ಕೈ ಹಿಡಿಯುವ ವಿಶ್ವಾಸವಿದೆ, ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಇನ್ನೂ ಸಚಿವನಾಗಬೇಕು ಅಂತ ನಾನೇನು ವೈಯಕ್ತಿಕವಾಗಿ ಆಸೆ ಪಟ್ಟಿಲ್ಲ. ಮುಖ್ಯಮಂತ್ರಿಗಳ ಆ ಬಗ್ಗೆ ನಿರ್ಧಾರ ಮಾಡುತ್ತಾರೆ. ಮೇ ತಿಂಗಳ ಬಳಿಕ ನಮ್ಮ ಸರ್ಕಾರ ಬರಲಿದೆ. ಆಗ ಅಭಿಮಾನದಿಂದ ಸಚಿವ ಸ್ಥಾನ ಕೇಳುತ್ತೇನೆ. ಈಗ ನಾನು ಸೋತಿದ್ದೀನಿ,ಹೇಗೆ ಕೇಳಲಿ ಎಂದು ಹೇಳಿದರು.

ಸಿ.ಪಿ. ಯೋಗೇಶ್ವರ್ ಅವರ ಧ್ವನಿಯನ್ನೇ ಹೊಂದುವ ಆಡಿಯೋದಲ್ಲಿ ಮಾತನಾಡಿದ್ದೇನು..?
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜನಾಭಿಪ್ರಾಯದಿಂದ ಅಧಿಕಾರಕ್ಕೆ ಬರಲ್ಲ ಎಂಬ ಮಾತನ್ನ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿರುವ ಆಡಿಯೊವೊಂದು ವೈರಲ್ ಆಗಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾರದ್ದು ಒಂಥರಾ ರೌಡಿಸಂ ಕಣಯ್ಯ, ಪಕ್ಷದ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅವರ ಕಥೆ ಅಷ್ಟೇ.. ಅಲ್ಲಿಗೆ ಮುಗೀತು ಎಂಬ ಮಾತನ್ನು ಹೇಳಿದ್ದಾರೆ.
ಹೊಂದಾಣಿಕೆ ರಾಜಕೀಯ ನಮ್ಮ ಪಕ್ಷಕ್ಕೆ ಬೇಡವೆಂದು ಅಮಿತ್ ಶಾ ಹೇಳ್ತಾರೆ. ಒಂದು ವೇಳೆ ಹೊಂದಾಣಿಕೆ ಮಾಡಿಕೊಂಡರೆ, ಅದು ತಾಯಿಗೆ ದ್ರೋಹ ಬಗೆದಂತೆ ಎಂದು ಪ್ರತಿಪಾದಿಸ್ತಾರೆ. ನಮ್ಮ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ. ಪಕ್ಷದ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ, ಅಲ್ಲಿಗೆ ಮುಗೀತು' ಎಂದು ಯೋಗೇಶ್ವರ್ ಆಡಿಯೊದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ತಮ್ಮದೇ ಪಕ್ಷದ ನಾಯಕರಿಗೂ ಸವಾಲು ಹಾಕುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. 'ನಾನು ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ಧ ತೊಡೆತಟ್ತಿನಿ. ಆದರೆ, ಆ ಅಶ್ವತ್ಥನಾರಾಯಣಗೆ ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂತು ಗೆಲ್ಲೋಕೆ ಆಗುತ್ತಾ? ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಆರ್. ಅಶೋಕ್ ಗೆದ್ದು ತೋರಿಸಲಿ. ಈ ಬಾರಿಯೂ ಜನಾಭಿಪ್ರಾಯದ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲ. ಆದ್ರೂ, ನಾವೇ ಸರ್ಕಾರ ರಚಿಸ್ತೀವಿ' ಎಂದು ಯೋಗೇಶ್ವರ್ ಹೇಳಿದ್ದಾರೆ.











Click it and Unblock the Notifications