Wayanad Landslide: ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಎಚ್ಚರಿಕೆ; ಕರ್ನಾಟಕಕ್ಕೂ ಕಾದಿದ್ಯಾ ಗಂಡಾಂತರ?
ಬೆಂಗಳೂರು, ಜುಲೈ 30: ಕೇರಳದಲ್ಲಿ ಭಾರೀ ದುರಂತವಾಗುತ್ತಿದ್ದಂತೆ ಇತ್ತ ಕರ್ನಾಟಕದಲ್ಲೂ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಭಾರೀ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿಡೆ ಭಾರಿ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಂತಹ ಪರಿಸ್ಥಿತಿ ಎದುರಿಸಲು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ದುರಂತ ನಡೆದಿದೆ. ಗುಡ್ಡ ಕುಸಿದಿದ್ದು, ನದಿಯಲ್ಲಿ ಪ್ರವಾಹ ಉಕ್ಕಿ ಹರಿದ ಪರಿಣಾಮ 120 ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಕಣ್ಮರೆಯಾಗಿದ್ದಾರೆ, ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅತ್ತ ಕೇರಳದಲ್ಲಿ ಭಾರೀ ದುರಂತವಾಗುತ್ತಿದ್ದಂತೆ ಇತ್ತ ಕರ್ನಾಟಕದಲ್ಲೂ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಭಾರೀ ಎಚ್ಚರಿಕೆ ನೀಡಲಾಗಿದೆ. ನಿರಂತರ ಮಳೆಯಿಂದಾಗಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದಲ್ಲೂ ನಿರಂತರ ಮಳೆಯಾಗುತ್ತಿರುವುದರಿಂದ ಜಲಾಶಯಗಳ ನೀರಿನ ಮಟ್ಟದ ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭೂಕುಸಿತದ ಪ್ರಕರಣಗಳು ವರದಿಯಾಗುತ್ತಿದ್ದು ಈ ಕುರಿತು ಸಹ ಜಿಲ್ಲಾಧಿಕಾರಿಗಳು ಎಚ್ಚರವಹಿಸುವಂತೆ ತಿಳಿಸಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ಸಹ ಪ್ರವಾಹ ಪರಿಸ್ಥಿತಿಯ ನಿರ್ವಹಣೆಯ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.
ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸುವಂತೆ , ರಕ್ಷಣೆ ಹಾಗೂ ಪರಿಹಾರ ಕಾರ್ಯಚರಣೆಗಳನ್ನು ಕೈಗೊಳ್ಳುವಂತೆ ಹಾಗೂ ಪ್ರವಾಹ ಪೀಡಿತರಿಗೆ ಅಗತ್ಯಕ್ಕನುಸಾರವಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿ ತೆರೆದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಲಭ್ಯರಿದ್ದು ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ. ವಯನಾಡಿನಲ್ಲಿ ಭೂಕುಸಿತದಿಂದ ಉಂಟಾಗಿರುವ ತ್ಯಾಜ್ಯಗಳ ತೆರವಿಗೆ ರಾಜ್ಯದಿಂದ ಅಗತ್ಯ ಜೆಸಿಬಿ,ಕ್ರೇನ್ ಮತ್ತಿತರ ಭಾರೀ ವಾಹನಗಳ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳುತ್ತಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಹಾಗೂ ಸುತ್ತಲಿನ ಪ್ರದೇಶಗಳ ಅಸಂಘಟಿತ ಕಾರ್ಮಿಕರು ಅಲ್ಲಿಗೆ ನಿಯಮಿತವಾಗಿ ಕೆಲಸಕ್ಕಾಗಿ ತೆರಳಿರುವ ಸಾಧ್ಯತೆ ಇರುವುದರಿಂದ ಅಂತಹವರು ಕಣ್ಮರೆಯಾಗಿದ್ದಾರೆ ಅವರು ಸಂಬಂಧಿಕರು,ಪರಿಚಿತರು ಮಾಹಿತಿ ನೀಡಲು ಚಾಮರಾಜನಗರ ಜಿಲ್ಲಾಡಳಿತವು 24/7 ಸಹಾಯವಾಣಿ ಸ್ಥಾಪಿಸಿದೆ.ಸಹಾಯವಾಣಿ ಸಂಖ್ಯೆಗಳು- 08226-223161,223163,223160 ಅಥವಾ ವಾಟ್ಸಪ್ ಸಂಖ್ಯೆ 9740942902 ಮೂಲಕ ಸಾರ್ವಜನಿಕರು ಸಂಪರ್ಕಿಸಲು ಕೋರಿದೆ.
ಗುಂಡ್ಲುಪೇಟೆ ಮಾರ್ಗವಾಗಿ ಸಾಗುವ ಬೆಂಗಳೂರು-ವೈನಾಡ್ ರಾಷ್ಟ್ರೀಯ ಹೆದ್ದಾರಿ 766 ರ ಮಾರ್ಗದಲ್ಲಿ ಸಂಚಾರ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಿಸಲಾಗಿದ್ದು.ಪರ್ಯಾಯವಾಗಿ ಗುಂಡ್ಲುಪೇಟೆ-ಬಂಡೀಪುರ-ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ.
ಮೈಸೂರು ಜಿಲ್ಲಾಡಳಿತವು ಕೂಡ ಹೆಗ್ಗಡದೇವನಕೋಟೆ ತಾಲ್ಲೂಕು ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವೈದ್ಯರನ್ನು ನಿಯೋಜಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲು ಸಾಕಷ್ಟು ಬಸ್,ವಾಹನಗಳನ್ನು ಅಣಿಗೊಳಿಸಲಾಗಿದೆ. ಪಾರ್ಥಿವ ಶರೀರಗಳ ಸಂರಕ್ಷಣೆಗೆ ಶೈತ್ಯಾಗಾರದ ಘಟಕಗಳನ್ನು ಒದಗಿಸುವ ಸರಬರಾಜುದಾರನ್ನು ಗುರುತಿಸಲಾಗಿದೆ. ಮೈಸೂರು ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ:0821-24223800












Click it and Unblock the Notifications