ಏಷ್ಯಾದಲ್ಲಿಯೇ ಅತಿದೊಡ್ಡ ಸ್ಕಾಡಾ ತಂತ್ರಜ್ಞಾನದ ನೀರಾವರಿ ಯೋಜನೆ: ಬಸವರಾಜ ಬೊಮ್ಮಾಯಿ
ಯಾದಗಿರಿ, ಜನವರಿ20 : ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನ:ಶ್ಚೇತನ ಹಾಗೂ ಆಧುನೀಕರಣದ ಸ್ಕಾಡಾ ಯೋಜನೆ-1 ಏಷ್ಯಾದಲ್ಲಿಯೇ ಅತಿದೊಡ್ಡ ನೀರು ನಿರ್ವಹಣೆಯ ಯೋಜನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಕೊಡೇಕಲ್‍ನಲ್ಲಿ ಆಯೋಜಿಸಿರುವ ನಾರಾಯಣಪೂರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಕಾಮಗಾರಿ ಲೋಕಾರ್ಪಣೆ ಸಮಾರಂಭ ಮತ್ತು ಜಲ್‍ಜೀವನ್ ಮಿಷನ್ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸುರತ್-ಚೆನೈ ಎಕ್ಸಪ್ರೆಸ್-ವೇ ಪ್ಯಾಕೇಜ್-3 ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಕಡಿಮೆ ನೀರಿನಲ್ಲಿ ಹೆಚ್ಚಿನ ನೀರಾವರಿಯನ್ನು ಸಾಧ್ಯವಾಗಿಸುವ ಇಂತಹ ಮತ್ತಷ್ಟು ಯೋಜನೆಗಳನ್ನು ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಒಂದು ಹನಿ ನೀರಿಗೆ ಗರಿಷ್ಟ ನೀರಾವರಿ
ಪ್ರಧಾನಿ ಮೋದಿಯವರ 'ಒಂದು ಹನಿ ನೀರಿಗೆ ಗರಿಷ್ಟ ನೀರಾವರಿ' ಘೋಷಣೆಯನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ 2012 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕೆಲಸವನ್ನು ಪ್ರಾರಂಭಿಸಲಾಯಿತು. 2015ರಲ್ಲಿ ಎಐಬಿಪಿ ಯೋಜನೆಯಡಿ ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ ಯೋಜನೆ ಒಳಗೊಂಡಿತು. ಕೇಂದ್ರ ಸರ್ಕಾರದಿಂದ 1011 ಕೋಟಿ ರೂ.ಗಳನ್ನು ನೀಡಲಾಗಿದೆ. 4.50 ಲಕ್ಷ ಹೆಕ್ಟೇರ್ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಾಗಿದ್ದು, ಕಾಲುವೆ ಅಚ್ಚುಕಟ್ಟು ಪ್ರದೇಶ ಕೊನೆ ಭಾಗದ ರೈತರಿಗೂ ಈಗ ನೀರಾವರಿ ಲಭ್ಯವಾಗಲಿದೆ. ನೀರು ಪೋಲಾಗುವ ಪ್ರಮಾಣ ಕಡಿಮೆಯಾಗಿದ್ದು, ನೀರಿನ ಬಳಕೆಯ ದಕ್ಷತೆಯನ್ನು ಶೇ. 20 ರಷ್ಟು ಹೆಚ್ಚಿಸಲಾಗಿದೆ ಎಂದರು.

ಮುಂದಿನ 10 ವರ್ಷ ನೀರಾವರಿ ದಶಕ
ನಾರಾಯಣಪುರ ಎಡದಂಡೆ ಕಾಲುವೆಯ ಯೋಜನೆ ನೀರಾವರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ. 10 ಲಕ್ಷ ಹೆಕ್ಟೇರ್ ಪ್ರದೇಶದಕ್ಕೆ ನೀರಾವರಿ ಒದಗಿಸುವ ಗುರಿಯೊಂದಿಗೆ ಮುಂದಿನ 10 ವರ್ಷ ನೀರಾವರಿ ದಶಕ ಎಂದು ಘೋಷಿಸಿ ಹೆಚ್ಚಿನ ಅನುದಾನವನ್ನು ನೀರಾವರಿಗೆ ಮೀಸಲಿರಿಸಿ,ರಾಜ್ಯದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.












Click it and Unblock the Notifications