ಕರ್ನಾಟಕದ ಸ್ಟಿಕ್ಕರ್ ತೆಗೀರಿ: ತಿರುಪತಿಗೆ ಹೋದ ಕನ್ನಡಿಗರ ವಾಹನ ತಡೆದು ವಾರ್ನಿಂಗ್!
ಕರ್ನಾಟಕದ ನೆಲದಲ್ಲೇ ಕನ್ನಡ, ಕನ್ನಡಿಗರನ್ನು ಅವಮಾನಿಸುವ ಸಂಗತಿಗಳು ದಿನಕ್ಕೊಂದು ಬೆಳಕಿಗೆ ಬರುತ್ತಲೇ ಇವೆ. ಈಗ ಹೊಸದು ಎನ್ನುವಂತೆ ಪರರಾಜ್ಯಗಳಲ್ಲೂ ಕನ್ನಡಿಗರ ಮೇಲೆ ದರ್ಪ ಮುಂದುವರಿದಿದೆ. ಇತ್ತೀಚೆಗಷ್ಟೇ ತಮಿಳುನಾಡು ಹಾಗೂ ಕೇರಳದಲ್ಲಿ ಕರ್ನಾಟಕ ಬಾವುಟ ಹಾಕಿದ್ದ ವಾಹನಗಳನ್ನು ತಡೆದು ದಾಂಧಲೆ ನಡೆಸಿದ್ದರು. ನಮ್ಮ ರಾಜ್ಯದಲ್ಲಿ ಕರ್ನಾಟಕದ ಬಾವುಟ ಹಾರಿಸಂಗಿಲ್ಲ ಎಂದು ಧಮ್ಕಿಯೂ ಹಾಕಿದ್ದರು. ಈಗ ಇದೇ ಬೆಳವಣಿಗೆ ಪಕ್ಕದಲ್ಲೇ ಇರುವ ಆಂಧ್ರಪ್ರದೇಶ ತಿರುಪತಿಯಲ್ಲೂ ನಡೆದಿದೆ. ಅಲ್ಲಿಗೆ ಹೋಗುವ ಕನ್ನಡಿಗರ ವಾಹನಗಳನ್ನು ತಡೆಯಲಾಗುತ್ತಿದ್ದು, ಕನ್ನಡ ಬಾವುಟ, ಕರ್ನಾಟಕದ ನಕ್ಷೆಯುಳ್ಳ ಸ್ಟಿಕ್ಕರ್‌ಗಳನ್ನು ತೆಗೆಯುವಂತೆ ವಾರ್ನಿಂಗ್ ಕೊಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶದಲ್ಲಿರುವ ತಿರುಪತಿಗೆ ಕರ್ನಾಟಕದಿಂದ ಪ್ರತಿನಿತ್ಯವೂ ಸಾವಿರಾರು ಭಕ್ತರು ತೆರಳುತ್ತಾರೆ. ಅದೇ ರೀತಿ ತಿರುಪತಿಗೆ ಕರ್ನಾಟಕದಿಂದ ತೆರಳಿದ್ದ ಬೈಕ್ ಹಾಗೂ ಇನ್ನಿತರ ವಾಹನಗಳನ್ನು ಬಲವಂತವಾಗಿ ತಡೆಯಲಾಗಿದೆ. ಬೈಕ್‌ಗೆ ಹಾಕಿದ್ದ ಕನ್ನಡಿಗ ಹಾಗೂ ಕರ್ನಾಟಕ ನಕ್ಷೆಯ ಸ್ಟಿಕ್ಕರ್‌ಗಳನ್ನು ತೆಗೆಯಲೇಬೇಕು. ಇಲ್ಲದಿದ್ರೆ ನೋ ಎಂಟ್ರಿ ಅಲ್ಲಿನವರು ಧಮ್ಕಿ ಹಾಕಿದ್ದಾರೆ. ಕನ್ನಡಿಗರು ಅಸಹಾಯಕರಾಗಿ ಕೊನೆಗೆ ತಮ್ಮ ಬೈಕ್ ಮೇಲಿದ್ದ ಸ್ಟಿಕ್ಕರ್‌ಗಳನ್ನು ತೆಗೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತೊಂದೆಡೆ ಇದ್ಯಾವ ಸೀಮೆಯ ನಿಯಮ ಎಂದು ಆಕ್ರೋಶವೂ ವ್ಯಕ್ತವಾಗುತ್ತಿದೆ.

ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳುವ ಪ್ರವೇಶದ್ವಾರದಲ್ಲಿ ಈ ರೀತಿ ಕರ್ನಾಟಕದ ವಾಹನಗಳನ್ನು ತಡೆಯಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಇದೇ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಯಾವುದೇ ಕ್ರಮ ಜರುಗಿರಲಿಲ್ಲ. ಈಗ ವಾಹನಗಳ ಮೇಲೆ ಹಾಕಿಸಿರುವ ಕನ್ನಡ, ಕನ್ನಡಿಗ, ಕರ್ನಾಟಕದ ಅಭಿಮಾನಕ್ಕೆ ಸಂಬಂಧಿಸಿದ ಸ್ಟಿಕ್ಕರ್‌ಗಳನ್ನು ಈ ರೀತಿ ತೆಗೆಸುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ದೊಡ್ಡ ಅವಮಾನ ಎಂದು ಗರಂ ಆಗಿದ್ದಾರೆ. ಇದೆಂತಹ ಅನ್ಯಾಯ? ನಮ್ಮ ಗಾಡಿ ಮೇಲೆ ನಮ್ಮ ಬಾವುಟ ಇದ್ದರೆ, ಇವರಿಗೆ ಏನು ತೊಂದರೆ? ಕನ್ನಡಿಗರೇ ತಿರುಪತಿಗೆ ಹೋಗುವುದನ್ನು ನಿಲ್ಲಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡಿದ್ದಾರೆ.
ಅರ್ಧ ಆಂಧ್ರವೇ ಕರ್ನಾಟಕದಲ್ಲಿಲ್ವಾ?
ಈ ಘಟನೆಯು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 'ಈ ರೀತಿ ನಿಯಮ ಇದ್ದರೆ ಮೊದಲೇ ಹೇಳಿ. ನಾವು ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದ ಅಲ್ಲಿಗೆ ಬರುತ್ತೇವೆ. ಅದೇ ರೀತಿ ನಮ್ಮ ಭಾಷೆ, ನಾಡು ಎಂಬ ಅಭಿಮಾನವೂ ನಮಗೆ ದೊಡ್ಡದು. ಅದೇ ಕಾರಣಕ್ಕೆ ನಾವು ವಾಹನಗಳ ಮೇಲೆ ಈ ರೀತಿಯ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಳ್ಳುತ್ತೀವಿ. ಇದರಿಂದ ನಿಮಗೆ ಆಗುತ್ತಿರುವ ಸಮಸ್ಯೆ ಏನು?' ಎಂದು ತಿರುಪತಿ ದೇವಸ್ಥಾನ ಹಾಗೂ ಸ್ಥಳೀಯ ಆಡಳಿತವನ್ನು ಪ್ರಶ್ನಿಸುತ್ತಿದ್ದಾರೆ. 'ಹಾಗೆ ನೋಡುವುದಾದರೆ ನಿಮ್ಮ ಆಂಧ್ರದವರೆಲ್ಲ ಬೆಂಗಳೂರಿನಲ್ಲಿ ತುಂಬಿ ತುಳುಕಾಡುತ್ತಿದ್ದಾರೆ. ಇದರಲ್ಲಿ ತಿರುಪತಿ ಊರಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾವೇನಾದರೂ ಅವರನ್ನು ಕರ್ನಾಟಕಕ್ಕೆ ಬರದಂತೆ ತಡೆದಿದ್ದೀವಾ?' ಎಂದು ಕೌಂಟರ್ ಕೊಟ್ಟಿದ್ದಾರೆ.
'ಆಂಧ್ರಪ್ರದೇಶದಲ್ಲಿ ನೋಂದಣಿಯಾದ ಎಷ್ಟೋ ವಾಹನಗಳು ಬೆಂಗಳೂರಿನಲ್ಲೇ ಇವೆ. ನಮ್ಮ ರಾಜ್ಯದಲ್ಲಿರುವ ಪ್ರಮುಖ ಪ್ರವಾಸಿ ಸ್ಥಳಗಳಲ್ಲೂ ಆಂಧ್ರದವರೇ ತುಂಬಿ ತುಳುಕಾಡುತ್ತಿದ್ದಾರೆ. ಅವರಿಗೆ ಇಲ್ಲಿ ಯಾವುದೇ ನಿರ್ಬಂಧಗಳನ್ನು ನಾವು ವಿಧಿಸುತ್ತಿಲ್ಲ. ಹೀಗಿರುವಾಗ ತಿರುಪತಿಯಲ್ಲೇಕೆ ಈ ನಿಯಮ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಂಧ್ರ ವಾಹನಗಳನ್ನು ಬ್ಯಾನ್ ಮಾಡಿ!
'ಮೈಸೂರು ಚಾಮುಂಡಿ ಬೆಟ್ಟ, ಧರ್ಮಸ್ಥಳ, ಕುಕ್ಕೆ, ಶೃಂಗೇರಿ, ಘಾಟಿ ಸುಬ್ರಹ್ಮಣ್ಯ, ಹೊರನಾಡು ಅನ್ನಪೂರ್ಣೇಶ್ವರಿ, ಸಿಗಂಧೂರು, ಕಟೀಲು ಸೇರಿದಂತೆ ಅನೇಕ ಪ್ರಮುಖ ದೇವಸ್ಥಾನಗಳಿಗೆ ನಿಮ್ಮ ಆಂಧ್ರದವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇನ್ನು ಮುಂದೆ ಇಲ್ಲಿಯೂ ಕೂಡ ತಿರುಪತಿಯಂತೆ ಆಂಧ್ರದವರ ವಾಹನಗಳನ್ನು ನಿರ್ಬಂಧಿಸಬೇಕು. ಬೆಂಗಳೂರಿನಲ್ಲೇ ಇರುವ ಆಂಧ್ರದ ಜನರು ತಮ್ಮ ವಾಹನಗಳ ಮೇಲೆ, 'ಜೈ ಜಗನ್ ಅನ್ನ', 'ಪವನ್ ಅನ್ನ', 'ತೆಲುಗು ದೇಶಂ ಪಾರ್ಟಿ', 'ಜನಸೇನಾ', ವೈಎಸ್‌ಆರ್ ಕಾಂಗ್ರೆಸ್, ಎಂಎಲ್‌ಎ ತಾಲೂಕ ಸೇರಿದಂತೆ ಆಂಧ್ರಕ್ಕೆ ಸಂಬಂಧಿಸಿದ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡು ಓಡಾಡುತ್ತಾರೆ. ಅವರ ಮೇಲೂ ಕ್ರಮ ಕೈಗೊಳ್ಳುವ ಕೆಲಸ ಆಗಬೇಕು. ಆ ವಾಹನಗಳು ಕರ್ನಾಟಕದಲ್ಲಿ ಓಡಾಡದಂತೆ ನಿರ್ಬಂಧ ವಿಧಿಸಬೇಕು. ನಿಮಗೆ ಹೇಗೆ ನಿಮ್ಮ ಅಭಿಮಾನ ಹೆಚ್ಚೋ, ಅದೇ ರೀತಿ ಕನ್ನಡ, ಕರ್ನಾಟಕ ಎಂದರೆ ನಮಗೂ ಹೆಚ್ಚುʼ ಎಂದು ತಿರುಗೇಟು ನೀಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.












Click it and Unblock the Notifications