ಅಶೋಕ್-ಪ್ರಿಯಾಂಕ್ ನಡುವೆ ಜೋರಾಯ್ತು ನೀಲಿ ಶಾಲು ವಾರ್
ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ನೀಲಿ ಶಾಲು ವಾರ್ ಶುರುವಾಗಿದೆ. ಬಿಜೆಪಿಗೆ ನೀಲಿ ಶಾಲು ಧರಿಸುವುದು ಫ್ಯಾಷನ್ ಆಗಿದೆ ಎಂದು ಪ್ರಿಯಾಂಕ್ ಹೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಅಶೋಕ್ ದೊಡ್ಡ ಸವಾಲೊಂದನ್ನು ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರೇ ನಾವು ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದವರ ರೀತಿ ಎಲೆಕ್ಷನ್ ಹಿಂದೂಗಳು ಅಲ್ಲ, ಎಲೆಕ್ಷನ್ ಅಂಬೇಡ್ಕರ್ ವಾದಿಗಳೂ ಅಲ್ಲ. ನನ್ನದೊಂದು ಸವಾಲು. ತಾವು ಹೇಳಿಕೊಳ್ಳುವಂತೆ ತಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದವರು ನಿಜವಾಗಿಯೂ ಅಂಬೇಡ್ಕರ್ ವಾದಿಗಳಾಗಿದ್ದರೆ, ನೆಹರು ಅವರಾಗಲಿ, ಇಂದಿರಾ ಗಾಂಧಿ ಅವರಾಗಲಿ, ರಾಜೀವ್ ಗಾಂಧಿ ಅವರಾಗಲಿ ನೀಲಿ ಶಾಲು ಧರಿಸಿದ್ದ ಒಂದೇ ಒಂದು ಫೋಟೋ ತೋರಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಅದು ಹೋಗಲಿ ಬಿಡಿ. ಪಾಪ ನಿಮ್ಮ ನಕಲಿ ಗಾಂಧಿ ಪಕ್ಷದ ಥರ್ಡ್ ಟೈಂ ಫೇಲ್ ಸ್ಟಾರ್ ಕಮಿಡಿಯನ್ ಚುನಾವಣೆ ಬಂದಾಗಲೆಲ್ಲಾ ಕೇಸರಿ ಬಟ್ಟೆ, ಕೇಸರಿ ಶಾಲು, ಹಣೆಗೆ ವಿಭೂತಿ, ಕುಂಕುಮ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ತಾನು ಕೌಲ ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆದರೆ, ಅವರ ಮುತ್ತಜ್ಜ ನೆಹರೂ ಅವರಾಗಲಿ, ಅಜ್ಜಿ ಇಂದಿರಾ ಗಾಂಧಿ ಅವರಾಗಲಿ, ಅಪ್ಪ ರಾಜೀವ್ ಗಾಂಧಿ ಅವರಾಗಲಿ, ಅಮ್ಮ ಸೋನಿಯಾ ಗಾಂಧಿ ಅವರಾಗಲಿ ಒಂದು ದಿನವೂ ಕೇಸರಿ, ಕುಂಕುಮ, ಗುಡಿ ಗೋಪುರಗಳ ಹತ್ತಿರವೂ ಸುಳಿದಿದ್ದನ್ನು ನಾನಂತೂ ಕಂಡಿಲ್ಲ. ನೀವೇನಾದರೂ ಕಂಡಿದ್ದರೆ, ಒಂದು ಫೋಟೋ ತೋರಿಸಿ ಎಂದು ಚಾಲೆಂಜ್ ಮಾಡಿದ್ದಾರೆ.

ಇನ್ನು ಅಂಬೇಡ್ಕರ್ ಅವರನ್ನ ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷ ಹೇಗೆ ನಡೆಸಿಕೊಂಡಿತು ಎಂದು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಇತ್ತೀಚೆಗೆ ಸಂಸತ್ತಿನಲ್ಲಿ ಸಂವಿಧಾನದ ಬಗ್ಗೆ ನಡೆದ ಚರ್ಚೆಯಲ್ಲಿ ಎಲ್ಲವೂ ಶಾಶ್ವತವಾಗಿ ದಾಖಲಾಗಿದೆ. ಕಂಟ್ರಾಕ್ಟರ್‌ಗಳ ಆತ್ಮಹತ್ಯೆ, ಡಿನ್ನರ್ ಮೀಟಿಂಗ್ ಇವೆಲ್ಲ ಗೊಜಲುಗಳಿಂದ ಬಿಡುವಿದ್ದಾಗ ಒಮ್ಮೆ ಆ ಚರ್ಚೆಗಳನ್ನ ಓದಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.
ಚುನಾವಣಾ ಭಾಷಣಗಳಲ್ಲಿ ಮೀಸಲಾತಿ ಪರವಾಗಿ ಮೊಸಳೆ ಕಣ್ಣೀರು ಸುರಿಸುವುದು, ವಿದೇಶಿ ವೇದಿಕೆಗಳಲ್ಲಿ ಮೀಸಲಾತಿ ವಿರುದ್ಧವಾಗಿ ಮಾತನಾಡುವ ಡೋಂಗಿ ಅಂಬೇಡ್ಕರ್ ವಾದ ಅಲ್ಲ ನಮ್ಮದು. ಬಾಬಾ ಸಾಹೇಬ್ ಅಂಬೇಡ್ಕರರ ಸಿದ್ಧಾಂತಕ್ಕೆ ಸಮನಾದ ಸಿದ್ಧಾಂತ ಯಾವುದಾದರೂ ಇದ್ದರೆ, ಅದು ಬಿಜೆಪಿಯ ಏಕಾತ್ಮ ಮಾನವತಾವಾದ ಮತ್ತು ಅಂತ್ಯೋದಯ ಎಂದಿದ್ದಾರೆ.
ಮಹಾತ್ಮ ಗಾಂಧೀಜಿ ಅವರು ವಿಸರ್ಜನೆ ಮಾಡಬೇಕು ಅಂದ ಮೇಲೂ ಅಧಿಕಾರಕ್ಕಾಗಿ ಒಂದು ಕುಟುಂಬದ ಆಸ್ತಿಯಾಗಿ ಉಳಿದುಕೊಂಡಿರುವ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷದ ಏಕೈಕ ಸಿದ್ಧಾಂತ ಅಂದರೆ ಅದು ಅಧಿಕಾರವಾದ. ಅಧಿಕಾರಕ್ಕಾಗಿ ಲಜ್ಜೆ ಇಲ್ಲದ ಅವಕಾಶವಾದ. ಮಿಕ್ಕಿದ್ದೆಲ್ಲ ಬರೀ ಬೊಗಳೆ ಎಂದು ಕಿಡಿಕಾರಿದ್ದಾರೆ.
ಪ್ರಿಯಾಂಕ್ ಏನು ಹೇಳಿದ್ದರು: ಬಿಜೆಪಿಯವರ ಹೆಗಲ ಮೇಲೆ ಕೇಸರಿ ಶಾಲು ಹೋಯ್ತು, ನೀಲಿ ಶಾಲು ಬಂತು! ನನಗೆ ಇದೊಂದು ವಿಶೇಷ ವಿಸ್ಮಯದಂತೆ ಭಾಸವಾಗುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಜೈ ಭೀಮ್ ಎನ್ನುವುದು ಫ್ಯಾಷನ್ ಎಂದಿದ್ದ ಅಮಿತ್ ಶಾವರ ಬಿಜೆಪಿಗೆ, ನೀಲಿ ಶಾಲು ಧರಿಸುವುದು ಈಗ ಹೊಸ ಫ್ಯಾಷನ್ ಆಗಿದೆಯೇ? ಎಂದು ಅಣಕಿಸಿದ್ದರು. ಕೇಸರಿ ಶಾಲಿನ ಮೇಲೆ ಬಿಜೆಪಿಗರಿಗೆ ಅಸಹನೆ ಉಂಟಾಗಿದೆಯೇ? ಕೇಸರಿ ಶಾಲು ಕಂಡರೆ ನಿರ್ಲಕ್ಷ್ಯವೇ? ಕೇಸರಿ ಶಾಲಿನಿಂದ ಸಂವಿಧಾನದ ಅನುಯಾಯಿಗಳನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವುದು ರಾಜ್ಯ ಬಿಜೆಪಿಗೆ ಅರ್ಥವಾದಂತಿದೆ ಎಂದಿದ್ದರು.












Click it and Unblock the Notifications