Waqf property dispute: ಒಂದಿಂಚು ಜಾಗವೂ ಸರ್ಕಾರದಲ್ಲ ಜಮೀರ್ ಹಿಂಗಂದಿದ್ಯಾಕೆ ?
Waqf Board Property: ವಖ್ಫ್ ಆಸ್ತಿಯ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹ್ಮದ್‌ಖಾನ್ ಅವರು ಮತ್ತೆ ಗುಡುಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಖ್ಫ್ ಆಸ್ತಿಯ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಮುಸ್ಲಿಂ ಸಮುದಾಯದ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಇದೀಗ ಜಮೀರ್ ಅಹ್ಮದ್ ಅವರು ವಖ್ಫ್ ಆಸ್ತಿಯ ಬಗ್ಗೆ ಮಾತನಾಡಿದ್ದಾರೆ. ಅದೇ ರೀತಿ ವಖ್ಫ್ ಆಸ್ತಿ ಎನ್ನುವುದು ಆಸ್ತಿ ದೇವರ ಆಸ್ತಿ. ಇದರ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದೂ ಪುನರುಚ್ಚರಿಸಿದ್ದಾರೆ.
ಒಂದೇ ಒಂದು ಇಂಚೂ ಸರ್ಕಾರದಲ್ಲ
ಇನ್ನು ಇದೇ ಸಂದರ್ಭದಲ್ಲಿ ವಖ್ಫ್ ಆಸ್ತಿ ಸರ್ಕಾರ ಕೊಟ್ಟಿದ್ದು, ಅದು ಸರ್ಕಾರಕ್ಕೆ ಸೇರಿದ್ದು ಎಂಬ ಭಾವನೆ ಕೆಲವರಲ್ಲಿ ಇದೆ. ಒಂದೇ ಒಂದು ಇಂಚೂ ವಖ್ಫ್ ಬೋರ್ಡ್ ಸರ್ಕಾರದಿಂದ ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು ವಖ್ಫ್ ಆಸ್ತಿ ಸಮುದಾಯದ ಒಳಿತಿಗಾಗಿ ದಾನಿಗಳು ಕೊಟ್ಟಿರುವ ದಾನವಾಗಿದೆ. ನಮಗೆ ಕಬಾರಸ್ಥಾನವನ್ನು ಹೊರತುಪಡಿಸಿದರೆ ಸರ್ಕಾರದಿಂದ ನಮಗೆ (ವಖ್ಫ್ ಬೋರ್ಡ್‌ಗೆ) ಬೇರೆ ಯಾವುದೇ ಜಾಗ ಕೊಟ್ಟಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ವಖ್ಫ್ ಆಸ್ತಿ ಸಂರಕ್ಷಣೆ ಕೇವಲ ಸಚಿವರು ಅಥವಾ ರಾಜ್ಯಾಧ್ಯಕ್ಷರ ಜವಾಬ್ದಾರಿ ಮಾತ್ರವಲ್ಲ. ಜಿಲ್ಲಾಧ್ಯಕ್ಷರು ಹಾಗೂ ಅಧಿಕಾರಿಗಳ ಹೊಣೆಗಾರಿಕೆಯೂ ಹೌದು ಎಂದರು.

15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು
ಇನ್ನು ರಾಜ್ಯದಲ್ಲಿ ವಖ್ಫ್ ಬೋರ್ಡ್‌ವತಿಯಿಂದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಜಮೀರ್ ಹೇಳಿದರು. ಈ ಸಂಬಂಧ ಯೋಜನೆ ರೂಪಿಸಲಾಗಿದೆ. ಅದೇ ಮಾದರಿಯಲ್ಲಿ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ವಖ್ಫ್ ಬೋರ್ಡ್ ವತಿಯಿಂದ ಆಸ್ಪತ್ರೆ ನಿರ್ಮಾಣಕ್ಕೂ ಚಿಂತನೆ ಇದೆ ಎಂದರು. ಜಿಲ್ಲಾ ಮಟ್ಟದಲ್ಲಿ ವಖ್ಫ್ ಅದಾಲತ್ ನಡೆಸುತ್ತಿರುವುದರಿಂದ ಹಲವಾರು ಸಮಸ್ಯೆ ಬಗೆಹರಿದಿದೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಇದೇ ಮಾದರಿ ಅದಾಲತ್ ಅನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎನ್ನುವ ಭರವಸೆ ನೀಡಿದರು. ಇದೇ ವೇಳೆ ಒಂದು ವರ್ಷ ಪೂರೈಸಿದ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಅವರನ್ನು ಸನ್ಮಾನಿಸಲಾಯಿತು.
ವಖ್ಫ್ ಆಸ್ತಿ ಖಾತಾಗೆ ಒಂದು ತಿಂಗಳ ಗಡುವು
ಇನ್ನು ಜಮೀರ್ ಅಹ್ಮದ್ ಅವರು ವಖ್ಫ್ ಆಸ್ತಿಗಳಿಗೆ ಸಂಬಂಧಿಸಿದ ಖಾತಾ ಮಾಡಿಸುವುದಕ್ಕೆ ಒಂದು ತಿಂಗಳ ಗಡುವು ನೀಡಿದ್ದಾರೆ. ಈ ಗುಡುವಿನೊಳಗೆ ಖಾತಾ ಮಾಡಿಸುವಂತೆ ಈಗಾಗಲೇ ಹುಬ್ಬಳ್ಳಿ - ಧಾರವಾಡ ಪಾಲಿಕೆ ಸೇರಿದಂತೆ ವಿವಿಧ ಪಾಲಿಕೆಗಳಿಗೆ ಸಚಿವ ಜಮೀರ್ ಅಹ್ಮದ್ ಅವರು ಸೂಚನೆ ನೀಡಿದ್ದಾರೆ. ಇನ್ನು ಈ ನಿರ್ದಿಷ್ಟ ಆಸ್ತಿಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ,ನಗರಸಭೆ, ಜಿಲ್ಲಾ ಪಂಚಾಯಿತಿ ಹಾಗೂ ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ನಿರಂತರ ಸಂವಹನ ನಡೆಸುತ್ತಿರಬೇಕು ಎಂದೂ ಅವರು ಸೂಚನೆ ನೀಡಿದ್ದಾರೆ.












Click it and Unblock the Notifications