ಮತದಾನಕ್ಕೆ 4 ದಿನ; ಹಣದ ಹರಿವಿನ ಮೇಲೆ ಆಯೋಗದ ಕಣ್ಣು
ಬೆಂಗಳೂರು, ಮೇ 06; ಕರ್ನಾಟಕ ವಿಧಾನಸಭಾ ಚುನಾವಾಣೆಗೆ ಮತದಾನ ಮೇ 10ರ ಬುಧವಾರ ನಡೆಯಲಿದೆ. ಈ ಬಾರಿ ರಾಜ್ಯದಲ್ಲಿ 5,30,85,566 ಜನರು ಮತದಾನ ಮಾಡಲು ಅರ್ಹರು. ಮತದಾನಕ್ಕೆ 4 ದಿನಗಳು ಮಾತ್ರ ಬಾಕಿ ಇರುವುದರಿಂದ ಚುನಾವಣಾ ಆಯೋಗ ಹಣದ ಹರಿವಿನ ಮೇಲೆ ಕಣ್ಣಿಟ್ಟಿದೆ.
ಕರ್ನಾಟಕದ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರ ಮೇ 8ರ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಬಳಿಕ ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಕೈಗೊಳ್ಳಬಹುದಾಗಿದೆ. ಈ ಸಮಯದಲ್ಲಿ ಹಣದ ಹಂಚಿಕೆ ನಡೆಯುವುದು ಸಾಮಾನ್ಯ. ಆದ್ದರಿಂದ 72 ಗಂಟೆಗಳ ಮೊದಲಿನಿಂದಲೇ ಸೂಕ್ತ ಕಣ್ಗಾವಲು ಇಡುವಂತೆ ಚುನಾವಣಾ ಆಯೋಗ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟವಾದ ಮಾರ್ಚ್ 29ರಿಂದಲೇ ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮತದಾನದ ಪೂರ್ವದ 72 ಗಂಟೆ ಅವಧಿಯಲ್ಲಿ ಮನ್ನೆಚ್ಚರಿಕೆ ವಹಿಸಬೇಕಾದ ಮತ್ತು ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಹಣದ ಸಹಾಯ ಮಾಡುವುದು; ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಮತದಾನದ ಪೂರ್ವದ 72 ಗಂಟೆ ಅವಧಿಯಲ್ಲಿ ಸ್ವಸಹಾಯ ಗುಂಪು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಯಾವುದೇ ರೀತಿಯ ಹಣ, ಸಹಾಯಧನ ಬಿಡುಗಡೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಕಲ್ಯಾಣ ಮಂಟಪ, ಸಮುದಾಯ ಭವನ, ಮದುವೆ ಕಾರ್ಯಕ್ರಮಗಳಲ್ಲಿ ಆಹಾರ, ಕಾಣಿಕೆಗಳನ್ನು ವಿತರಿಸುವುದನ್ನು ಪರಿಶೀಲಿಸಿ ಮತದಾರರ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳಬೇಕಿದೆ.

ಕಲ್ಯಾಣ ಮಂಟಪ, ಸಮುದಾಯ ಭವನ ಮತ್ತು ಇಂತಹ ಜನಸಮುದಾಯ ಸೇರುವ ಸ್ಥಳಗಳ ಮೇಲೆ ಜಿಲ್ಲಾ ಚುನಾವಣಾ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಯಾವುದೇ ಅನಧಿಕೃತ ಗುಂಪು ಸೇರುವುದನ್ನು ಮತ್ತು ಮತದಾರರ ಮೇಲೆ ಪ್ರಭಾವ ಬೀರುವುದನ್ನು ತಡೆಯಲು ಅಗತ್ಯ ಮುಂಜಾಗೃತೆ ವಹಿಸಬೇಕು. ಮತದಾನ ಪೂರ್ವದ 72 ಗಂಟೆಯೊಳಗೆ ಯಾವುದೇ ರೀತಿಯ ದಿನಗೂಲಿ ಅಥವಾ ಸರ್ಕಾರಿ ಯೋಜನೆಗಳ ಫಲಾನುಭವ ಹಂಚಿಕೆಯಾಗದಂತೆ ಎಚ್ಚರಿಕೆ ವಹಿಸಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಹಲವು ಸೂಚನೆಗಳು; ಮತದಾನಕ್ಕೆ 48 ಗಂಟೆಗಳ ಮೊದಲು ಯಾವುದೇ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಸಂಬಂಧಪಟ್ಟ ಅಭ್ಯರ್ಥಿ ಅಥವಾ ಪಕ್ಷವು ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಪ್ರಮಾಣ ಪತ್ರ ಪಡೆದುಕೊಳ್ಳುವುದು ಕಡ್ಡಾಯ ಎಂದು ಈಗಾಗಲೇ ಆದೇಶ ಹೊರಡಿಸಲಾಗಿದೆ.
ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಮತದಾನಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಕೆಲವು ವಿಶೇಷ ನಿಯಮಾವಳಿಗಳು ಜಾರಿಯಲ್ಲಿರುತ್ತವೆ. ಈ ಅವಧಿಯಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ.
ಎಲ್ಲಾ ಜಿಲ್ಲೆಗಳ ಚುನಾವಣಾಧಿಕಾರಿಗಳು ಮೇ 8ರ ಸಾಯಂಕಾಲ 6 ಗಂಟೆಯಿಂದ ಮೇ 10ರ ಸಾಯಂಕಾಲ 6 ಗಂಟೆಯವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಸಮಯದಲ್ಲಿ ಚುನಾವಣಾ ಅಭ್ಯರ್ಥಿಗಳು 10 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ, ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿಷೇಧಿಸಲಾಗಿದೆ.












Click it and Unblock the Notifications