ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Voters data theft : ಬೆಂಗಳೂರಿನಲ್ಲಿ ಮತದಾರರ ಡೇಟಾ ಕಳ್ಳತನ; ಏನಿದು ವಿವಾದ? ಇಲ್ಲಿದೆ ವಿವರಣೆ

|
Google Oneindia Kannada News

ಬೆಂಗಳೂರು, ನವೆಂಬರ್ 22: ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿತ್ತು. ಇದರಿಂದ ಬೆಂಗಳೂರಿನಲ್ಲಿ ಮತದಾರರ ಮಾಹಿತಿ ಕಳವು ಮಾಡಲಾಗಿದೆ ಎಂಬ ಆರೋಪ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕೇಳಿ ಬಂದಿದೆ. ಬೆಂಗಳೂರು ಉಸ್ತುವಾರಿ ಹೊತ್ತುಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿದೆ.

''ಮತದಾರರ ಪಟ್ಟಿ ನವೀಕರಣ ಕಾರ್ಯಾಚರಣೆಗೆ ಬಿಬಿಎಂಪಿ ನೀಡಿದ ಆದೇಶವನ್ನು ಎನ್‌ಜಿಒ ದುರುಪಯೋಗಪಡಿಸಿಕೊಂಡಿದ್ದು, ಮತದಾರರಿಗೆ ಯಾವುದೇ ಸಂಶಯ ಬರಬಾರದು ಎಂದು ತನ್ನ ಫೀಲ್ಡ್‌ ಏಜೆಂಟರನ್ನೇ ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಹಲವು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದೆ. ಚುನಾವಣಾ ಆಯೋಗ, ಬಿಬಿಎಂಪಿ ಅಧೀನದಲ್ಲಿಯೇ ಈ ಅಕ್ರಮ ನಡೆದಿರುವುದು'' ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಇನ್ನು ಲಕ್ಷಗಟ್ಟಲೆ ಮತದಾರರ ಹೆಸರುಗಳನ್ನು ಅಳಿಸಲಾಗಿದೆ, ಜೊತೆಗೆ ಫೋನ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳು ಸೇರಿದಂತೆ ವೈಯಕ್ತಿಕ ವಿವರಗಳ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

Voters’ data theft Explained: What is this controversy in Bengaluru?

ಮತದಾರರ ಮಾಹಿತಿ ಕಳವು ಹಗರಣ:

2018 ರಲ್ಲಿ ಚಿಲುಮೆ ಸಂಸ್ಥೆಯು SVEEP ಗಾಗಿ ಉಚಿತ ಸ್ವಯಂಪ್ರೇರಿತ ಸೇವೆಯನ್ನು ನೀಡವುದಾಗಿ ಹೇಳಿ ಎಂದು ಚುನಾವಣಾ ಆಯೋಗ ಮತ್ತು BBMP ಯನ್ನು ಸಂಪರ್ಕಿಸಿದೆ. ಚಿಲುಮೆ ಸಂಸ್ಥೆ ಮನವಿ ಆಧರಿಸಿ, 2022ರ ಜನವರಿ 29 ರಂದು, ಮಹದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ERO) ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಬಿಬಿಎಂಪಿಗೆ ಸಹಾಯ ಮಾಡಲು ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚಿಲುಮೆಗೆ ಅನುಮತಿ ನೀಡಿದ್ದಾರೆ. ಅಲ್ಲದೇ ಸಮೀಕ್ಷೆಯನ್ನು ಉಚಿತವಾಗಿ ನಡೆಸುವುದಾಗಿ ಎನ್ ಜಿ ಒ ಹೇಳಿಕೊಂಡಿದೆ.

ಆದರೆ ನಂತರದ ದಿನಗಳಲ್ಲಿ, ನಿಯೋಜಿತ ಕ್ಷೇತ್ರ ಕಾರ್ಯಕರ್ತರು ಜಾತಿ, ವಯಸ್ಸು, ಲಿಂಗ, ಉದ್ಯೋಗ, ಶಿಕ್ಷಣ ವಿವರಗಳು, ಆಧಾರ್ ಸಂಖ್ಯೆಗಳು, ಫೋನ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳನ್ನು ಒಳಗೊಂಡಂತೆ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ್ದು, ಸಂಸ್ಥೆಯು ಅಕ್ರಮವಾಗಿ ಸಂಗ್ರಹಿಸಿದ ಈ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇನ್ನೂ ನಗರದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ನಾಯಕರಿಗೆ ಅನುಕೂಲ ಮಾಡಿಕೊಡಲು ಹಲವು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇನ್ನೂ ಒಬ್ಬ ವ್ಯಕ್ತಿ ಅನೇಕ ಸ್ಥಳಗಳಲ್ಲಿ ಮತದಾನ ಮಾಡದಂತೆ ತಡೆಯಲು 6.73 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಇನ್ನೂ ಪ್ರಮುಖ ಮಾಹಿತಿಯು ಬಹಳಷ್ಟು ವಾಣಿಜ್ಯ ಮೌಲ್ಯವನ್ನು ಹೊಂದಿದೆ ಮತ್ತು ರಾಜಕೀಯ ಪಕ್ಷಗಳು ಮತ್ತು ಖಾಸಗಿ ಸಂಸ್ಥೆಗಳು ಆ ಮಾಹಿತಿಯನ್ನ ಪಡೆಯಲು ದೊಡ್ಡ ಮೊತ್ತವನ್ನು ಪಾವತಿಸಲು ಆಸಕ್ತಿ ವಹಿಸುತ್ತಿವೆ ಎನ್ನಲಾಗಿದೆ.

ಬಿಬಿಎಂಪಿ ಹೇಳಿದ್ದೇನು?

ಬಿಬಿಎಂಪಿ ಬೆಂಗಳೂರು ನಗರ ಪೊಲೀಸರಿಗೆ ಎರಡು ದೂರುಗಳನ್ನು ಸಲ್ಲಿಸಿದ್ದು, ಭಾನುವಾರದವರೆಗೆ ಮೂವರನ್ನು ಬಂಧಿಸಲಾಗಿದೆ. ಬಿಬಿಎಂಪಿ ಪ್ರಕಾರ, ಮತದಾರರ ಸಹಾಯವಾಣಿ, ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಅರ್ಜಿಗಳಿಗೆ ಜಾಗೃತಿ ಮೂಡಿಸಲು ಮನೆ-ಮನೆ ಭೇಟಿ ನೀಡಲು ಮಾತ್ರ ಚಿಲುಮೆಗೆ ಅನುಮತಿ ನೀಡಲಾಗಿದೆ, ಆದರೆ ಕಂಪನಿಯು ಷರತ್ತುಗಳನ್ನು ಉಲ್ಲಂಘಿಸಿದೆ. ಈ ವರ್ಷದ ನವೆಂಬರ್ 2 ರಂದು ಮಾಹಿತಿ ಸಂಗ್ರಹಿಸಲು ಅನುಮತಿಯನ್ನು ಹಿಂಪಡೆಯಲಾಗಿದೆ ಮತ್ತು ನವೆಂಬರ್ 4 ರಂದು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಈ ವಿಚಾರವನ್ನು ತಿಳಿಸಲಾಗಿದ್ದು, ನವೆಂಬರ್ 17 ರಂದು ಚಿಲುಮೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದೆ.

Voters’ data theft Explained: What is this controversy in Bengaluru?

2018 ರಿಂದ ಚಿಲುಮೆ ಟ್ರಸ್ಟ್ ಸಂಗ್ರಹಿಸಿದ ಡೇಟಾ ಮತ್ತು ಅದನ್ನು ಹೇಗೆ ಬಳಸಲಾಗಿದೆ ಅಥವಾ ಯಾರೊಂದಿಗೆ ಹಂಚಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಬಿಬಿಎಂಪಿ ನೀಡಿಲ್ಲ. ಎರಡು ಎಫ್‌ಐಆರ್‌ಗಳನ್ನು ದಾಖಲಿಸುವುದರ ಜೊತೆಗೆ, ಎನ್‌ಜಿಒ ಸಂಗ್ರಹಿಸಿದ ಮಾಹಿತಿಯ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.

ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ಮಾತನಾಡಿ, ''ಎನ್‌ಜಿಒ ಪ್ರತಿನಿಧಿಸುವ ಜನರು ಬಿಬಿಎಂಪಿ ಬ್ಯಾಡ್ಜ್‌ಗಳನ್ನು ಧರಿಸಿ ಮನೆಗಳಿಗೆ ಭೇಟಿ ನೀಡುವುದನ್ನು ನಾವು ಕಂಡುಕೊಂಡಿದ್ದೇವೆ, ಇದು ಉಲ್ಲಂಘನೆಯಾಗಿದೆ. ನಾವು ಎನ್‌ಜಿಒ ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸುತ್ತಿದ್ದೇವೆ'' ಎಂದಿದ್ದಾರೆ.

ಬಿಬಿಎಂಪಿಯ ದೂರಿನ ಪ್ರಕಾರ, ಡಿಸೆಂಬರ್ 22, 2018 ರಂದು, ಚಿಲುಮೆ ಅವರು ಬ್ಲಾಕ್ ಮಟ್ಟದ ಅಧಿಕಾರಿ (BLO) ಅವರ ಸಮನ್ವಯದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಅನುಮತಿ ನೀಡಲಾಯಿತು, ಅಲ್ಲಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಮತ್ತು ಅವರಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಯಿತು. ನವೆಂಬರ್ 2, 2022 ರಂದು ಅನುಮತಿ ಪತ್ರವನ್ನು ರದ್ದುಗೊಳಿಸಲಾಗಿದ್ದರೂ, ಲೋಕೇಶ್ ಕೆಎಂ (ಎನ್‌ಜಿಒ ಪ್ರತಿನಿಧಿಸುವ) ಅವರು ಬಿಎಲ್‌ಒ ಎಂದು ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿದರು ಮತ್ತು ಅವರ ಮತದಾರರ ಗುರುತಿನ ಚೀಟಿಗಳು ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಸಂಗ್ರಹಿಸಲು ಜನರ ಮನೆಗಳಿಗೆ ನೇರವಾಗಿ ಭೇಟಿ ನೀಡಿದರು. ನಂತರ ಅವರು ಈ ಡೇಟಾವನ್ನು ಅಕ್ರಮವಾಗಿ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿದ್ದಾರೆ ಎನ್ನಲಾಗಿದೆ.

ಈಗ ನಡೆಯುತ್ತಿರುವ ಪೊಲೀಸ್ ತನಿಖೆ ಹೇಗೆ ಸಾಗಿದೆ?

ಮತದಾರರ ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಹಲಸೂರುಗೇಟ್ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 419 (ವ್ಯಕ್ತಿಯಿಂದ ವಂಚನೆ), 420 (ವಂಚನೆ) ಮತ್ತು 468 (ನಕಲಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಚಿಲುಮೆ ಸಂಸ್ಥೆಯ ಲೋಕೇಶ್ ಕೆ.ಎಂ, ಟ್ರಸ್ಟ್‌ನ ಮಾನವ ಸಂಪನ್ಮೂಲ (ಎಚ್‌ಆರ್) ಅಧಿಕಾರಿ ಧರಣೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿರ್ದೇಶಕರಲ್ಲಿ ಒಬ್ಬರಾದ ರೇಣುಕಾ ಪ್ರಸಾದ್ ಮತ್ತು ಸಂಸ್ಥಾಪಕ-ನಿರ್ದೇಶಕರಲ್ಲಿ ಒಬ್ಬರಾದ ರವಿಕುಮಾರ್ ಅವರ ಸಹೋದರ ಕೆಂಪೇಗೌಡ ಅವರು ಪತ್ತೆಯಾಗಿಲ್ಲ. ಚಿಲುಮೆ ಟ್ರಸ್ಟ್‌ನ ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದತ್ತಾಂಶವನ್ನು ನಮೂದಿಸಿದ 'ಡಿಜಿಟಲ್ ಸಮೀಕ್ಷಾ ಆ್ಯಪ್'ಗೆ ಪ್ರವೇಶ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಭಾನುವಾರದಂದು, ಸಾಫ್ಟ್‌ವೇರ್ ಡೆವಲಪರ್‌ನ ವಶಕ್ಕೆ ತೆಗೆದುಕೊಂಡರು.

ಕಾಂಗ್ರೆಸ್ ಆರೋಪ ಮಾಡಿದ್ದೇನು?

ಮತದಾರರ ಮಾಹಿತಿ ಕಳವು ಹಗರಣಕ್ಕೆ ಸಂಬಂಧಿಸಿದಂತೆ ಇಸಿಐಗೆ ಪತ್ರ ಬರೆದಿರುವ ಕಾಂಗ್ರೆಸ್ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ. ಮತದಾರರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ವಂಚನೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉದಾಹರಣೆಯನ್ನ ಕಾಂಗ್ರೆಸ್ ನೀಡಿದೆ, ಆಡಳಿತಾರೂಢ ಬಿಜೆಪಿ ಹಿಂದಿನ ಚುನಾವಣೆಯಲ್ಲಿ ತಮ್ಮ ವಿರುದ್ಧ ಮತ ಚಲಾಯಿಸಿದ ಜನರನ್ನು ಅಳಿಸಿಹಾಕಿದೆ ಅಥವಾ ಸ್ಥಳಾಂತರ ಮಾಡಿದೆ ಎಂದು ಹೇಳಿದೆ. ಕಾಂಗ್ರೆಸ್ ಪಕ್ಷ ಅಥವಾ ಇತರ ವಿರೋಧ ಪಕ್ಷಗಳಿಗೆ ಮತ ಹಾಕಿರುವ ಕ್ಷೇತ್ರದ ನಿಜವಾದ ಮತದಾರರನ್ನು ಕ್ಷೇತ್ರದಿಂದ ಹೊರಗಿಡಲಾಗುತ್ತಿದೆ ಅಥವಾ ಅವರ ಹೆಸರನ್ನು ಅಳಿಸಲಾಗುತ್ತಿದೆ, ಬಿಜೆಪಿ ಮತದಾರರು ಮತ್ತು ಕಾರ್ಯಕರ್ತರನ್ನು ಈ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಚುನಾವಣಾ ಆಯೋಗ ಹೇಳಿದ್ದೇನು?

ಬಿಬಿಎಂಪಿ ಅಥವಾ ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಯಾವುದೇ ಎನ್‌ಜಿಒಗೆ ಸಮೀಕ್ಷೆಗೆ ಅನುಮತಿ ನೀಡಿಲ್ಲ ಆದರೆ ಚಿಲುಮೆ ಟ್ರಸ್ಟ್‌ಗೆ ಜಾಗೃತಿ ಮೂಡಿಸುವ ಅನುಮತಿಯನ್ನ ನಿಡಿದ್ದು, ಅದರ ವಿರುದ್ಧ ದೂರು ಸ್ವೀಕರಿಸಿದ ತಕ್ಷಣ ಹಿಂಪಡೆಯಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಕಚೇರಿ ಮನೋಜ್ ಕುಮಾರ್ ಮೀನಾ ಗುರುವಾರ ಹೇಳಿದ್ದಾರೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ ಬಿಎಲ್‌ಒ ಗುರುತಿನ ಚೀಟಿ ದುರ್ಬಳಕೆ ಕುರಿತು ದೂರು ದಾಖಲಿಸಿದ್ದಾರೆ. ಡಿಇಒ, ಬಿಬಿಎಂಪಿಗೆ ವಿವರವಾದ ವಿಚಾರಣೆ ನಡೆಸುವಂತೆ ಹೇಳಲಾಗುತ್ತಿದೆ.

ಮತದಾರರ ಮಾಹಿತಿ ಕಳವು; ಬಿಜೆಪಿ ಹೇಳಿದ್ದೇನು?

ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ ಮತ್ತು ತನಗೂ ಟ್ರಸ್ಟ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದು, 2013 ರಿಂದ (ಐಎನ್‌ಸಿ ಅಧಿಕಾರಕ್ಕೆ ಬಂದಾಗ) ಅವ್ಯವಹಾರಗಳ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚಿಲುಮೆ ಟ್ರಸ್ಟ್‌ಗೆ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ. (ಮಾಹಿತಿ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್)

English summary
Voters’ data theft Explained: Collection of personal details and deletion of lakhs of voters. What is the voters’ data theft controversy in Bengaluru?,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X